ADVERTISEMENT

ಜನತಾ ಬಜಾರ್ ಚುನಾವಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 17:13 IST
Last Updated 9 ಜನವರಿ 2021, 17:13 IST

ಕಲಬುರ್ಗಿ: ಇಲ್ಲಿನ ಜನತಾ ಬಜಾರ್‌ನ ಜಿಲ್ಲಾ ಸಗಟು ಮಾರಾಟ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆಯಬೇಕಿದ್ದ ಚುನಾವಣೆಯನ್ನುಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಟಾಪಟಿಯಿಂದ ಮುಂದೂಡಲಾಗಿದೆ.

ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸೂಗುರ ಅವರ ನೇತೃತ್ವದಲ್ಲಿ ಬೆಳಿಗ್ಗೆ ಚುನಾವಣೆ ನಡೆಸಲು ತೀರ್ಮಾನಿಸಲಾಗಿತ್ತು. ಈಗಾಗಲೇ 19 ಜನ ಚುನಾಯಿತ ನಿರ್ದೇಶಕರು ಆಯ್ಕೆಯಾಗಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕವಾಗಬೇಕಿದೆ. 19 ಜನ ನಿರ್ದೇಶಕರಲ್ಲಿ 10 ಜನರು ಕಾಂಗ್ರೆಸ್ ಬೆಂಬಲಿತರು ಮತ್ತು 9 ಜನ ಬಿಜೆಪಿ ಬೆಂಬಲಿತರು ಇದ್ದಾರೆ. ಸರ್ಕಾರದ ನಾಮನಿರ್ದೇಶಿತ ಪ್ರತಿನಿಧಿಯಾಗಿ ಚಂದ್ರಕಾಂತ ಸಂತಪೂರ ಮತ್ತು ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಬ್ಯಾಂಕ್‍ನ ಪ್ರತಿನಿಧಿಯಾಗಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮುಗಿದ ಮರು ದಿನವೇ ಸುರೇಶ ಸಜ್ಜನ್ ಅವರಿಗೆ ಮತ ಹಕ್ಕು ನೀಡಿದ ಬಗ್ಗೆ ಕಾಂಗ್ರೆಸ್ ತಕಾರರು ತೆಗೆಯಿತು. ಈ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನದವರೆಗೂ ಮತದಾನದ ಪ್ರಕ್ರಿಯೆಯೇ ನಡೆಯಲಿಲ್ಲ. ಕೊನೆಗೆ ಗೊಂದಲ ಕಾರಣ ಒಂದು ವಾರ ಕಾಲ ಚುನಾವಣೆ ಮುಂದೂಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.