ADVERTISEMENT

ಕಲಬುರಗಿ | ‘ಸಮದರ್ಶಿತ್ವದ ಸಾಹಿತ್ಯ ಇಂದಿನ ಅಗತ್ಯ’: ಮಹೇಶ ಜೋಶಿ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 7:07 IST
Last Updated 9 ಆಗಸ್ಟ್ 2025, 7:07 IST
ಕಲಬುರಗಿಯ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿದರು
–ಪ್ರಜಾವಾಣಿ ಚಿತ್ರ
ಕಲಬುರಗಿಯ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ನಮ್ಮ ಸಾಹಿತ್ಯ ಸಮದರ್ಶನದ ಮೇಲೆ ನಿಲ್ಲಬೇಕಿದೆ. ಸಮಾನ ಮನಸು, ಸಮಾನ ಚಿಂತನೆಯುಳ್ಳ ಸಮದರ್ಶಿತ್ವದ ಸಾಹಿತ್ಯ ಇಂದಿನ ಅಗತ್ಯವಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ ಜೋಶಿ ಹೇಳಿದರು.

ನಗರದ‌ ಕನ್ನಡ ಭವನದ ಸುವರ್ಣ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಯುವಾವಲೋಕನ‌’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಪರಿಸರ ನನಗೆ ಭಯ ಹುಟ್ಟಿಸುತ್ತದೆ. ಸಮಾನತೆಯ ಕ್ಷೇತ್ರವಾಗಬೇಕಿದ್ದ ಸಾಹಿತ್ಯದಲ್ಲೂ ಗುಂಪು–ಘರ್ಷಣೆ, ಮಠ–ಪಂಥ, ಎಡ–ಬಲ ಕಾಣುತ್ತಿದ್ದೇವೆ. ಮನುಷ್ಯ ಪಂಥ ಬಿಟ್ಟು ಎಲ್ಲ ಪಂಥಗಳತ್ತ ಹೋಗುತ್ತಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಕನ್ನಡದ್ದು ಶ್ರೀಗಂಧದ ಸಂಸ್ಕೃತಿ. ಶ್ರೀಗಂಧ ಒಮ್ಮೆಗೇ ಘಮ್ಮೆನ್ನಲ್ಲ. ತೇಯುತ್ತ ಹೋದಂತೆ ನಿಧಾನಕ್ಕೆ ಕಂಪು ಹೊಮ್ಮುತ್ತದೆ. ಸಾಹಿತ್ಯ ಕಟ್‌ ಅಂಡ್‌ ಪೇಸ್ಟ್‌ ಆಗಬಾರದು. ಇದೀಗ ಎಐ, ಜಿಪಿಟಿ ಬಂದಿದೆ. ಅದಕ್ಕೆ ಬೆಳಕಿನ ಬಗೆಗೆ ಒಂದು ಕವಿತೆ ಎಂದರೆ, ಅದೇ ಬರೆದು ಬಿಡುತ್ತದೆ. ಯಾವುದೇ ಸಾಹಿತ್ಯ ಸೃಜನಾತ್ಮಕ, ಕ್ರಿಯಾತ್ಮಕವಾದ ಮನಸ್ಸಿನಿಂದ, ಹೃದಯಪೂರ್ವಕವಾಗಿ ಬರಬೇಕು’ ಎಂದರು.

‘ಕರ್ನಾಟಕದಲ್ಲಿ ಮೊದಲ ದೂರದರ್ಶನ ಕೇಂದ್ರ ಆರಂಭವಾಗಿದ್ದೇ ಕಲಬುರಗಿಯಲ್ಲಿ. ಈ ಕೇಂದ್ರ ಮುಚ್ಚುವ ನಿರ್ಧಾರ ಸರಿಯಲ್ಲ. ಸರ್ಕಾರಗಳು ಎಲ್ಲವನ್ನೂ ವಾಣಿಜ್ಯ ದೃಷ್ಟಿಯಿಂದ ನೋಡದೇ ಇತಿಹಾಸ, ಪರಂಪರೆಯ ದೃಷ್ಟಿಯಿಂದ ನೋಡಬೇಕು. ಈ ದೂರದರ್ಶನ ಕೇಂದ್ರ ಮುಚ್ಚದಂತೆ ಕೇಂದ್ರ ಸರ್ಕಾರದ ಮೇಲೂ ವೈಯಕ್ತಿಕವಾಗಿ ಒತ್ತಡ ಹೇರುವೆ’ ಎಂದು ಜೋಶಿ ಭರವಸೆ ನೀಡಿದರು.

ಸಂಸ್ಕೃತಿ ಚಿಂತಕ ಸಂಜೀವ ಸಿರನೂರಕರ ಅವರು ಕಸಾಪ‌‌ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಬರೆದ ಯುವ ಸೌರಭ ಕೃತಿಯನ್ನು ಅವಲೋಕನ ಮಾಡಿದರು.

ವಿಜಯಕುಮಾರ‌ ಪಾಟೀಲ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ರಾಮಯ್ಯ ಮಠ, ಗೀತಾ ಮೋರೆ ಮಾತನಾಡಿದರು. ಕಸಾಪ ರಾಜ್ಯ ಗೌರವ ಕಾರ್ಯದರ್ಶಿ ಬಿ.ಎಂ.ಪಟೇಲ್‌ ಪಾಂಡು ವೇದಿಕೆಯಲ್ಲಿದ್ದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಧರ್ಮಣ್ಣ ಧನ್ನಿ ಸ್ವಾಗತಿಸಿದರು. ಮತ್ತೊಬ್ಬ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.