
ಕಲಬುರಗಿ: ‘ದೇಶದಾದ್ಯಂತ ಇರುವ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಅಧೀನದ ಇಎಸ್‌ಐಸಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ತೀವ್ರವಾಗಿ ಕಾಡುತ್ತಿದೆ. ನೇಮಕಾತಿ ನಿಯಮಗಳನ್ನು ಸರಳೀಕರಣ ಮಾಡಿ ಅಗತ್ಯವಿರುವಷ್ಟು ವೈದ್ಯರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಹಾಗೂ ಎಂಎಸ್‌ಎಂಇ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ನಗರದ ಇಎಸ್‌ಐಸಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲಾದ ಕ್ರೀಡಾ ಸಂಕೀರ್ಣ, ಸೌರ ವಿದ್ಯುತ್ ವ್ಯವಸ್ಥೆ ಹಾಗೂ ಅಂತರ್ಜಲ ಮರುಪೂರಣ ಸೌಲಭ್ಯಗಳನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
‘ಇಎಸ್ಐಸಿಗೆ ಬೇಕಿರುವ ವೈದ್ಯರನ್ನು ನೇಮಕಾತಿ ಮಾಡಿಕೊಡುವಂತೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕೋರಲಾಗಿದೆ. ಅವರು ವರ್ಷದಲ್ಲಿ ಎರಡು ಬಾರಿ ನೇಮಕಾತಿ ನಡೆಸುತ್ತಿದ್ದಾರೆ’ ಎಂದರು.
‘ದೇಶದಲ್ಲಿರುವ ಇಎಸ್ಐಸಿ ಆಸ್ಪತ್ರೆಗಳಲ್ಲಿ ಸಂಘಟಿತ ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ ಉಚಿತ ಸೇವೆ ನೀಡುತ್ತಿದ್ದು, ಇನ್ನು ಮುಂದೆ ಕೃಷಿ, ಗಿಗ್, ಗಾರ್ಮೆಂಟ್ಸ್ ಸೇರಿದಂತೆ ಅಸಂಘಟಿತ ಕಾರ್ಮಿಕ ವರ್ಗದವರಿಗೂ ಇಎಸ್ಐಸಿ ಆಸ್ಪತ್ರೆ ಸೇವೆ ಉಚಿತವಾಗಿ ಲಭ್ಯವಾಗಲಿದೆ’ ಎಂದೂ ಅವರು ಹೇಳಿದರು.
‘ಕಾರ್ಮಿಕರಿಗೆ ಅನುಕೂಲವಾಗಲೆಂದೇ ದೇಶದಾದ್ಯಂತ 10 ಮೆಡಿಕಲ್ ಕಾಲೇಜುಗಳನ್ನು ತೆರೆಯಲಾಗುತ್ತಿದೆ. ಕರ್ನಾಟಕದ ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಇಎಸ್ಐಸಿ ವೈದ್ಯಕೀಯ ಕಾಲೇಜು ಇರುವುದರಿಂದ ಹೊಸ ಕಾಲೇಜಿಗೆ ಪ್ರಸ್ತಾವ ಇಲ್ಲ. ಹೃದ್ರೋಗ ವಿಭಾಗ, ಇಎಸ್‌ಐಸಿ ವೈದ್ಯಕೀಯ ಕಾಲೇಜಿನಲ್ಲೇ ಆರಂಭಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.