ADVERTISEMENT

ಮಧ್ಯಂತರ ಬಜೆಟ್‌ನಲ್ಲಿ ಮಂಜೂರಾತಿ ಸಿಕ್ಕಿರಲಿಲ್ಲ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಕಲಬುರಗಿ ರೈಲ್ವೆ ವಿಭಾಗ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 5:21 IST
Last Updated 25 ಜುಲೈ 2024, 5:21 IST
ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್   

ಕಲಬುರಗಿ: 2014-15ರ ಮಧ್ಯಂತರ ಬಜೆಟ್‌ನಲ್ಲಿ ಕಲಬುರಗಿಯಲ್ಲಿ ರೈಲ್ವೆ ವಿಭಾಗ ಸ್ಥಾಪನೆಗೆ ಮಂಜೂರಾತಿ ಸಿಕ್ಕಿರಲಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಲೋಕಸಭೆ ಅಧಿವೇಶನದಲ್ಲಿ ಬುಧವಾರ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ಪ್ರಶ್ನೆಗೆ ಉತ್ತರಿಸಿದ ರೈಲ್ವೆ ಸಚಿವ, 2014-15ರ ಮಧ್ಯಂತರ ರೈಲ್ವೆ ಬಜೆಟ್ ಮಂಡನೆ ವೇಳೆ ಘೋಷಿಸಲಾದ ಕಲಬುರಗಿ ಸೇರಿದಂತೆ 3 ವಿಭಾಗಗಳ ರಚನೆಯ ಕಾರ್ಯಸಾಧ್ಯತೆಯನ್ನು ವಿಶ್ಲೇಷಿಸಿ ಮತ್ತು ಪರಿಶೀಲಿಸಲು ಹಿರಿಯ ರೈಲ್ವೆ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿತ್ತು ಎಂದಿದ್ದಾರೆ.

ರೈಲ್ವೆ ಕಾರ್ಯನಿರ್ವಹಣೆಯ ಕಾರ್ಯಾಚರಣೆ, ಹಣಕಾಸು, ಆಡಳಿತಾತ್ಮಕ ಮತ್ತು ಇತರ ಅಂಶಗಳಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಸಮಿತಿಯು ಪರಿಶೀಲಿಸಿತ್ತು. ಈ ಮೂರು ಹೊಸ ವಿಭಾಗಗಳ ರಚನೆಯನ್ನು ಸಮಿತಿಯು ಸಮರ್ಥಿಸಲಿಲ್ಲ. ಸಮಿತಿಯ ಕಂಡುಕೊಂಡ ಅಂಶಗಳ ಆಧಾರದ ಮೇಲೆ ಹೊಸ ವಿಭಾಗವನ್ನು ರಚಿಸುವ ಪ್ರಸ್ತಾಪವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲಿಲ್ಲ ಎಂದು ವಿವರಿಸಿದ್ದಾರೆ.

ADVERTISEMENT

ಪ್ರಶ್ನೋತ್ತರ ವೇಳೆ ಮಾತನಾಡಿದ ರಾಧಾಕೃಷ್ಣ ದೊಡ್ಡಮನಿ, ಆರ್ಟಿಕಲ್ 371(ಜೆ) ಅಡಿ ವಿಶೇಷ ಸ್ಥಾನಮಾನದ ಸೌಲಭ್ಯ ಪಡೆದ ಕಲ್ಯಾಣ ಕರ್ನಾಟಕದ ಪ್ರಮುಖ ನಗರವಾದ ಕಲಬುರಗಿಯ ಆರ್ಥಿಕ ಪ್ರಗತಿಗಾಗಿ ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪಿಸಲು ಅಂದಿನ ಸರ್ಕಾರ ಮನಗಂಡಿತ್ತು. ಹೀಗಾಗಿ, 2014-15ರಲ್ಲಿಯೇ ಪ್ರತ್ಯೇಕ ರೈಲ್ವೆ ವಿಭಾಗ ಯೋಜನೆಯನ್ನು ಮಂಜೂರು ಮಾಡಿತ್ತು ಎಂದು ಹೇಳಿದ್ದಾರೆ.

ಸುಮಾರು ಹತ್ತು ವರ್ಷಗಳಿಂದ ಕಲಬುರಗಿ ಭಾಗದ ಜನರು ರೈಲ್ವೆ ವಿಭಾಗ ಸ್ಥಾಪನೆಗಾಗಿ ಕಾಯುತ್ತಿದ್ದಾರೆ‌‌. ರೈಲ್ವೆ ಬಜೆಟ್‌ನಲ್ಲಿ ಅನುದಾನ ಘೋಷಣೆಯಾದರೂ ಬಿಡುಗಡೆಯಾಗಿಲ್ಲ‌‌. ಈ ಬಗ್ಗೆ ಹಲವು ಸಮಿತಿಗಳನ್ನು ರಚಿಸಿದ್ದರೂ ರೈಲ್ವೆ ವಿಭಾಗ ಸ್ಥಾಪನೆಯಾಗಿಲ್ಲ. ಈ ಯೋಜನೆಗೆ ಅಗತ್ಯವಿರುವ ಜಮೀನು ರಾಜ್ಯ ಸರ್ಕಾರ ಒದಗಿಸಿದ್ದು, ರೈಲ್ವೆ ಇಲಾಖೆಯ ಸ್ವಾಧೀನದಲ್ಲಿದೆ. ಜಿಲ್ಲೆಯ ಆರ್ಥಿಕ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಸಹಕಾರಿಯಾಗಲಿರುವ ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪನೆಗೆ ವಿಳಂಬವಾಗುತ್ತಿದೆ. ಈ ಬಗ್ಗೆ ರೈಲ್ವೆ ಸಚಿವರು ಉತ್ತರಿಸಬೇಕು ಎಂದು ಸಂಸದರು ಒತ್ತಾಯಿಸಿದ್ದರು.

‘ರೈಲು ಹಳಿ ಮಾರ್ಗ ಗುರುತಿಸಿ ಡಿಪಿಆರ್ ಸಿದ್ಧಪಡಿಸಲಾಗಿತ್ತು’

‘2014 ಫೆಬ್ರುವರಿ 18ರಂದು ರಾಜ್ಯಸಭೆಯಲ್ಲಿ ರೈಲ್ವೆಯ 2014-15ರ ‘ವೋಟ್ ಆನ್ ಅಕೌಂಟ್’ ಬಜೆಟ್‌ನ ಚರ್ಚೆಯ ವೇಳೆ ಅಂದಿನ ರೈಲ್ವೆ ಸಚಿವರು ಕಲಬುರಗಿ ಜಮ್ಮು ಮತ್ತು ಸಿಲ್ಚಾರ್‌ನಲ್ಲಿ ಹೊಸ ವಿಭಾಗಗಳ ಸ್ಥಾಪನೆಯನ್ನು ಘೋಷಿಸಿದ್ದರು’ ಎಂದು ಹೈದರಾಬಾದ್ ಕರ್ನಾಟಕ ರೈಲ್ವೆ ಗ್ರಾಹಕರ ವೇದಿಕೆ ಅಧ್ಯಕ್ಷ ಸುನಿಲ್ ಕುಲಕರ್ಣಿ ಹೇಳಿದರು.

‘ಈ ಮೂರು ಹೊಸ ವಿಭಾಗಗಳ ಸ್ಥಾಪನೆಗೆ ಸಂಬಂಧಿಸಿದ ವಲಯ ರೈಲ್ವೆಗಳಿಂದ ವಿವರವಾದ ಯೋಜನಾ ವರದಿಗಳು (ಡಿಪಿಆರ್) ಸ್ವೀಕರಿಸಿದ್ದಾಗಿಯೂ ಉಲ್ಲೇಖಿಸಿದ್ದರು’ ಎಂದರು.

‘2016ರ ಮಾರ್ಚ್‌ 4ರಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದ ಅಂದಿನ ರೈಲ್ವೆ ಸಚಿವ ರಾಜ್ಯ ಸಚಿವ ಮನೋಜ್ ಸಿನ್ಹಾ 2014-15ನೇ ಸಾಲಿನ ರೈಲ್ವೆಯ ಮಧ್ಯಂತರ ಬಜೆಟ್ ಮಂಡನೆ ವೇಳೆಯಲ್ಲಿ ಕಲಬುರಗಿ ಸೇರಿದಂತೆ ಮೂರು ಹೊಸ ವಿಭಾಗಗಳನ್ನು ರಚಿಸುವ ಘೋಷಣೆ ಮಾಡಲಾಗಿತ್ತು ಎಂದಿದ್ದರು. ಕಲಬುರಗಿಯಲ್ಲಿ ಪ್ರಧಾನ ಕಚೇರಿಯೊಂದಿಗೆ ಹೊಸ ವಿಭಾಗ ರಚಿಸುವ ಕ್ರಮವನ್ನು ಆರಂಭಿಸಲಾಗಿದ್ದು ಮಂಜೂರಾತಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸಹ ಹೇಳಿದ್ದರು’ ಎಂದು ಮಾಹಿತಿ ನೀಡಿದರು.

‘ಪ್ರಸ್ತುತ ಇರುವ ವಾಡಿ– ವಿಕಾರಾಬಾದ್ ವಾಡಿ– ರಾಯಚೂರು ವಾಡಿ– ಹೊಟ್ಗಿ ಹೊಟ್ಗಿ– ಬಾಗಲಕೋಟೆ ಹಾಗೂ ಹೊಸ ವಿಭಾಗಗಳಾಗಿ ರಾಯಚೂರು- ಗಿಣಿಗೇರಾ ಕಲಬುರಗಿ– ಖಾನಾಪುರ ಮತ್ತು ವಾಡಿ– ಗದಗ ಮಾರ್ಗಗಳು ಗುರುತಿಸಲಾಗಿತ್ತು. ಈಗ ರೈಲ್ವೆ ಸಚಿವರು ಜಾಣ್ಮೆಯಿಂದ ಮಂಜೂರಾತಿ ಸಿಕ್ಕಿರಲಿಲ್ಲ ಮತ್ತು ಪ್ರಸ್ತಾಪವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲಿಲ್ಲ ಎಂದು ಉತ್ತರಿಸಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಉದ್ದೇಶಿತ ಯೋಜನೆ ಜಾರಿಗೆ ತರಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.