ಕಲಬುರಗಿಯ ಎಂಆರ್‌ಎಂಸಿ ಸ್ಯಾಕ್ ಕಟ್ಟಡದಲ್ಲಿ ಶುಕ್ರವಾರ ಜಯದೇವ ನಿವೃತ್ತ ನಿರ್ದೇಶಕ, ಸಂಸದ ಡಾ.ಸಿ.ಎನ್.ಮಂಜುನಾಥ ಅವರನ್ನು ಗಣ್ಯರು ಸನ್ಮಾನಿಸಿದರು.
–ಪ್ರಜಾವಾಣಿ ಚಿತ್ರ
ಕಲಬುರಗಿ: ‘ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವ್ಯವಸ್ಥೆಯ ತುರ್ತು ನಿಗಾ ಘಟಕ (ಐಸಿಯು)ದ ಸೌಲಭ್ಯ ಆಗಬೇಕು’ ಎಂದು ಜಯದೇವ ಆಸ್ಪತ್ರೆ ನಿವೃತ್ತ ನಿರ್ದೇಶಕ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ ಹೇಳಿದರು.
ನಗರದ ಎಂಆರ್‌ಎಂಸಿ ಬಾಯ್ಸ್ ಹಾಸ್ಟೆಲ್ ಕ್ಯಾಂಪಸ್‌ನಲ್ಲಿ ಫಿಜಿಸಿಯನ್ ಅಸೋಸಿಯೇಷನ್, ಮೆಸಾರ್ಟ್ ಮತ್ತು ಭಾರತೀಯ ವೈದ್ಯಕೀಯ ಸಂಘದ ಸಹಯೋಗದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಶೇ 40 ವೈದ್ಯರ ಸ್ಥಾನಗಳು ಖಾಲಿ ಇವೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾರತೀಯ ವೈದ್ಯಕೀಯ ಸಂಘವನ್ನು ಒಳಗೊಳ್ಳಿಸಬೇಕು. ಆಯುಷ್ಮಾನ್ ಭಾರತದ ಹೊಸ ಪ್ಯಾಕೇಜ್ ಅನ್ನು ರಾಜ್ಯ ಸರ್ಕಾರ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
‘ವೈದ್ಯರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಸಂವಹನ ಕೌಶಲ ಹೆಚ್ಚಿಸಿಕೊಳ್ಳಬೇಕು. ಸಾಯುವ ರೋಗಿಯನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಬಾರದು. ಸಾಧ್ಯವಿದ್ದರೆ ವೈದ್ಯರನ್ನೇ ಕರೆಯಿಸಿಕೊಳ್ಳಬೇಕು’ ಎಂದು ಯುವ ವೈದ್ಯರಿಗೆ ಸಲಹೆಗಳನ್ನು ನೀಡಿದರು.
ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ದಿಲೀಪ ಭಾನುಶಾಲಿ ಮಾತನಾಡಿ, ‘ದೇಶದಲ್ಲಿ 32 ಲಕ್ಷಕ್ಕೂ ಅಧಿಕ ವೈದ್ಯರಿದ್ದಾರೆ. ಆದರೆ 4 ಲಕ್ಷ ವೈದ್ಯರು ಮಾತ್ರ ಐಎಂಎ ಸದಸ್ಯತ್ವ ಹೊಂದಿದ್ದಾರೆ. ಕಲಬುರಗಿಯಲ್ಲಿ 700 ವೈದ್ಯರು ಹೊಂದಿದ್ದಾರೆ. ಐಎಂಎಗೆ ಯುವಶಕ್ತಿ ಬೇಕಾಗಿದೆ. ಹಾಗಾಗಿ ಇದರ ಸಂಖ್ಯೆ ಇನ್ನೂ ಹೆಚ್ಚಾಗಬೇಕು’ ಎಂದರು.
ಎಚ್‌ಕೆಇ ಸೊಸೈಟಿ ಅಧ್ಯಕ್ಷ ಶಶೀಲ್ ನಮೋಶಿ ಮಾತನಾಡಿ, ‘ಸಿ.ಎನ್.ಮಂಜುನಾಥ ಕೇಂದ್ರ ಮಂತ್ರಿಮಂಡಲದಲ್ಲಿ ಆರೋಗ್ಯ ಸಚಿವರಾಗಬೇಕಿತ್ತು’ ಎಂದು ಆಶಯ ವ್ಯಕ್ತಪಡಿಸಿದರು. ನಾಗಪುರ ವೈದ್ಯಕೀಯ ಕಾಲೇಜಿನ ಡಾ.ವೇದಪ್ರಕಾಶ ಮಿಶ್ರಾ ವರ್ಚ್ಯುವಲ್ ಮೂಲಕ ಮಾತನಾಡಿದರು. ಕೆಬಿಎನ್ ವಿವಿಯ ಡಾ.ಪಿ.ಎಸ್.ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಐಎಂಎ ರಾಜ್ಯ ಅಧ್ಯಕ್ಷ ಡಾ.ವಿ.ವಿ.ಚಿನಿವಾಲರ್, ಡಾ.ಶಿವರಾಜ ಅಲಶೆಟ್ಟಿ, ಡಾ.ಸಂಗ್ರಾಮ್ ಎಸ್. ಬಿರಾದಾರ, ಡಾ.ಶರಣ ನಂದ್ಯಾಲ, ಡಾ.ಕೃಷ್ಣಮೂರ್ತಿ, ಡಾ.ಗುರು ಪಾಟೀಲ, ಡಾ.ಮುರುಗೇಶ ಪಸ್ತಾಪುರ, ಡಾ.ಬಾಬುರಾವ್ ಹುಡ್ಗಿಕರ್ ಸೇರಿದಂತೆ ಹಲವು ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.