ADVERTISEMENT

ಟಿಇಟಿ ಪರೀಕ್ಷೆ ಆರಂಭವಾದರೂ ಸಿಗದ ಪರೀಕ್ಷಾ ಕೇಂದ್ರ: ಗೊಂದಲದಲ್ಲಿ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 5:53 IST
Last Updated 6 ನವೆಂಬರ್ 2022, 5:53 IST
   

ಕಲಬುರಗಿ: ಇಂದು ನಡೆಯುತ್ತಿರುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ ) ಬರೆಯಲು ನಾನಾ ಕಡೆಗಳಿಂದ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳು ಸಿಗದೆ ಗೊಂದಲ ಏರ್ಪಟ್ಟಿದೆ.

ಶಿಕ್ಷಣ ಇಲಾಖೆಯ ಎಡವಟ್ಟಿನಿಂದಾಗಿ ಪರೀಕ್ಷಾ ಕೇಂದ್ರಗಳೇ ಸಿಗುತ್ತಿಲ್ಲ. ಇದರಿಂದಾಗಿ ಅಭ್ಯರ್ಥಿಗಳಲ್ಲಿ ಆತಂಕ ಉಂಟಾಗಿದ್ದು, ಭವಿಷ್ಯದಲ್ಲಿ ಉದ್ಯೋಗ ನಷ್ಟ ಸಾಧ್ಯತೆ ಎದುರಾಗಿದೆ ಎಂದು ಹಲವರು ದೂರಿದ್ದಾರೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳ ಯಡವಟ್ಟಿನಿಂದಾಗಿ ಪರೀಕ್ಷಾ ಕೇಂದ್ರಗಳು ನಿಗದಿತ ಸ್ಥಳದಲ್ಲಿ ಇಲ್ಲದೇ ಇರುವುದು ಈಗ ತೊಂದರೆಯಾಗಿದೆ. ಹಲವು ಅಭ್ಯರ್ಥಿಗಳ ಹಾಲ್ ಟಿಕೆಟ್ ನಲ್ಲಿ ಜೀವನ್ ಪ್ರಕಾಶ್ ಪರೀಕ್ಷಾ ಕೇಂದ್ರ ಎಂದು ದಾಖಲಾಗಿದೆ. ಆದರೆ, ವಾಸ್ತವದಲ್ಲಿ ಜೀವನ್ ಪ್ರಕಾಶ್ ಶಾಲೆಯಲ್ಲಿ ಪರೀಕ್ಷಾ ಕೇಂದ್ರವೇ ಇಲ್ಲ. ಇದರಿಂದಾಗಿ ಆ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಯ ವಿರುದ್ಧ ಹಾಗೂ ಡಿಡಿಪಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಪರೀಕ್ಷಾ ಸಮಯ ಮುಗಿಯುತ್ತಿದ್ದರೂ ಪರೀಕ್ಷಾ ಕೇಂದ್ರ ಸಿಗದೇ ಇರುವುದಕ್ಕೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರ ಪ್ರದೇಶದಲ್ಲಿ ಎಂಟಕ್ಕೂ ಹೆಚ್ಚು ಕೇಂದ್ರಗಳಲ್ಲಿ ಈ ತೊಂದರೆ ಎದುರಾಗಿದ್ದು, ಹಲವು ವಿದ್ಯಾರ್ಥಿಗಳು ಮತ್ತು ಭಾವಿ ಶಿಕ್ಷಕರು ಉದ್ಯೋಗ ನಷ್ಟದ ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ ಸರ್ಕಾರ ಪರ್ಯಾಯ ವ್ಯವಸ್ಥೆ ಅಥವಾ ಮರು ಪರೀಕ್ಷೆ ನಡೆಸಲು ಮುಂದಾಗಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.