ADVERTISEMENT

ಕಾರ್ಮಿಕರ ಮರು ನೇಮಕ ಮಾಡಿಕೊಳ್ಳಿ: ಮಾಜಿ ಶಾಸಕ ವಾಲ್ಮೀಕ ನಾಯಕ

ಓರಿಯೆಂಟ್ ಸಿಮೆಂಟ್ ಕಂಪನಿ ಅಧಿಕಾರಿಗಳಿಗೆ ವಾಲ್ಮೀಕ ನಾಯಕ ಮನವಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 4:57 IST
Last Updated 17 ಫೆಬ್ರುವರಿ 2021, 4:57 IST
ಚಿತ್ತಾಪುರ ತಾಲ್ಲೂಕಿನ ಮೊಗಲಾ ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಣ್ಣ ಡಿಗ್ಗಿ ಹಾಗೂ ಮಾಜಿ ಶಾಸಕ ವಾಲ್ಮೀಕ ನಾಯಕ ಅವರನ್ನು ಇಟಗಾ ಗ್ರಾಮದಲ್ಲಿ ಮಂಗಳವಾರ ಓರಿಯೆಂಟ್ ಸಿಮೆಂಟ್ ಕಂಪನಿ ವತಿಯಿಂದ ಶಿವಾನಂದ ಪಾಟೀಲ, ವೀರರಾಜು ಅವರು ಸನ್ಮಾನಿಸಿದರು
ಚಿತ್ತಾಪುರ ತಾಲ್ಲೂಕಿನ ಮೊಗಲಾ ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಣ್ಣ ಡಿಗ್ಗಿ ಹಾಗೂ ಮಾಜಿ ಶಾಸಕ ವಾಲ್ಮೀಕ ನಾಯಕ ಅವರನ್ನು ಇಟಗಾ ಗ್ರಾಮದಲ್ಲಿ ಮಂಗಳವಾರ ಓರಿಯೆಂಟ್ ಸಿಮೆಂಟ್ ಕಂಪನಿ ವತಿಯಿಂದ ಶಿವಾನಂದ ಪಾಟೀಲ, ವೀರರಾಜು ಅವರು ಸನ್ಮಾನಿಸಿದರು   

ಮೊಗಲಾ (ಚಿತ್ತಾಪುರ): ‘ಕೆಲಸದಿಂದ ವಜಾ ಮಾಡಿರುವ 13 ಕಾರ್ಮಿಕರ ಕುಟುಂಬಗಳು ಬೀದಿಗೆ ಬಿದ್ದಿವೆ. ಅವರನ್ನು ಮರು ನೇಮಕ ಮಾಡಿಕೊಂಡು ನೌಕರಿ ಕೊಡಬೇಕು’ ಎಂದು ಮಾಜಿ ಶಾಸಕ ವಾಲ್ಮೀಕ ನಾಯಕ ಅವರು ಓರಿಯೆಂಟ್ ಸಿಮೆಂಟ್ ಕಂಪನಿ ಅಧಿಕಾರಿಗಳಿಗೆ ಮನವಿ ಮಾಡಿದರು.

ತಾಲ್ಲೂಕಿನ ಮೊಗಲಾ ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಣ್ಣ ಡಿಗ್ಗಿ ಅವರಿಗೆ ಓರಿಯೆಂಟ್ ಸಿಮೆಂಟ್ ಕಂಪನಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

‘ಒಂದು ಕಂಪನಿ ಬೆಳೆಯುವಾಗ ಕಾರ್ಮಿಕರಿಗೆ ಸಮಸ್ಯೆ ಆಗುವುದು, ಆಡಳಿತಕ್ಕೆ ಸಣ್ಣಪುಟ್ಟ ತೊಂದರೆ ಆಗುವುದು ಸಹಜ. ಹಾಗೆಂದ ಮಾತ್ರಕ್ಕೆ ಭೂಮಿ ನೀಡಿದ ರೈತರ ಕುಟುಂಬದ ನೌಕರರನ್ನು ಕೆಲಸದಿಂದ ವಜಾ ಮಾಡಿರುವುದು ಸರಿಯಲ್ಲ. ಇನ್ನು ಮುಂದೆ ಯಾವುದೇ ರೀತಿಯ ಸಮಸ್ಯೆ ಮಾಡುವುದಿಲ್ಲ ಎಂದು ಪುನಃ ಅವರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು, ಎಲ್ಲರಿಗೂ ನೌಕರಿ ಕೊಡಬೇಕು’ ಎಂದು ಹೇಳಿದರು.

ADVERTISEMENT

‘ಕಂಪನಿ ಸ್ಥಾಪನೆಯಿಂದ ಸ್ಥಳೀಯ ಜನರಿಗೆ ಉದ್ಯೋಗ ಸಿಗುತ್ತಿದೆ. ವ್ಯಾಪಾರ– ವಹಿವಾಟು ವೃದ್ಧಿಯಾಗಿದೆ. ಕಂಪನಿಯು ದತ್ತು ಗ್ರಾಮಗಳಲ್ಲಿ ಅಗತ್ಯ ಸೌಲಭ್ಯ ಅಭಿವೃದ್ಧಿ ಮಾಡಬೇಕು. ಜನರ ಸಮಸ್ಯೆ, ಬೇಡಿಕೆಗೆ ಸ್ಪಂದಿಸಬೇಕು. ಗ್ರಾಮಸ್ಥರು ಮತ್ತು ಕಂಪನಿ ಆಡಳಿತ ಪರಸ್ಪರ ಸಾಮರಸ್ಯದಿಂದ ಇದ್ದು ಸಹಕರಿಸಬೇಕು’ ಎಂದರು.

ಕಂಪನಿಯ ಜನರಲ್ ಮ್ಯಾನೇಜರ್ ಶಿವಾನಂದ ಪಾಟೀಲ ಮಾತನಾಡಿ, ‘ಗ್ರಾಮದ ಅಭಿವೃದ್ಧಿಗೆ ಕಂಪನಿ ಸದಾ ಸ್ಪಂದಿಸುತ್ತದೆ. ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿಯ ಬೇಡಿಕೆಗೆ ಆದ್ಯತೆಯ ಅನುಸಾರ ಸ್ಪಂದಿಸಿ ಕೆಲಸ ಮಾಡುತ್ತೇವೆ. ಗ್ರಾಮಸ್ಥರ ಸಹಕಾರವೂ ಮುಖ್ಯ’ ಎಂದು ಅವರು ಹೇಳಿದರು.

ಸನ್ಮಾನ ಸ್ವೀಕರಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಣ್ಣ ಡಿಗ್ಗಿ ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ಕಂಪನಿಯ ಮ್ಯಾನೇಜರ್ ವೀರರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ, ಪಿಡಿಒ ದೇವಿಂದ್ರಪ್ಪ ಭಾಲ್ಕೆ ಮಾತನಾಡಿದರು.

ಸಿದ್ರಾಮ ಕೂಗನೂರ, ಮಹಾದೇವ ಮುಗಟಿ, ರವಿ ಮುಡಬೂಳ, ಸತ್ಯಪ್ಪ ತಳವಾರ, ಸಾಬಣ್ಣ ಕುಂಬಾರ, ದೇವಿಂದ್ರಪ್ಪ ಬೊಮ್ಮನಳ್ಳಿ, ಶೇಖಪ್ಪ ಡಿಗ್ಗಿ, ಶರಣು, ಶರಣು ತೊನಸನಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.