ADVERTISEMENT

ಯಲ್ಲಮ್ಮ ತಾಯಿ ಉಧೋ.. ಉಧೋ..

ಸಂಭ್ರಮದ ನಾಗಾವಿ ಯಲ್ಲಮ್ಮ ದೇವಿ ಪಲ್ಲಕ್ಕಿ ಉತ್ಸವ,

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 7:07 IST
Last Updated 18 ಅಕ್ಟೋಬರ್ 2024, 7:07 IST
ಚಿತ್ತಾಪುರ ಪಟ್ಟಣದ ಹೊರವಲಯದ ಐತಿಹಾಸಿಕ ನಾಗಾವಿ ಕ್ಷೇತ್ರದಲ್ಲಿರುವ ಯಲ್ಲಮ್ಮ ದೇವಿಯ ಜಾತ್ರೆ ನಿಮಿತ್ತ ಗುರುವಾರ ಸರಾಫ್ ಲಚ್ಚಪ್ಪ ನಾಯಕ ಅವರ ಮನೆಯಿಂದ ದೇವಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಡಗರ, ಸಂಭ್ರಮದಿಂದ ಅದ್ಧೂರಿಯಾಗಿ ಜರುಗಿತು.
ಚಿತ್ತಾಪುರ ಪಟ್ಟಣದ ಹೊರವಲಯದ ಐತಿಹಾಸಿಕ ನಾಗಾವಿ ಕ್ಷೇತ್ರದಲ್ಲಿರುವ ಯಲ್ಲಮ್ಮ ದೇವಿಯ ಜಾತ್ರೆ ನಿಮಿತ್ತ ಗುರುವಾರ ಸರಾಫ್ ಲಚ್ಚಪ್ಪ ನಾಯಕ ಅವರ ಮನೆಯಿಂದ ದೇವಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಡಗರ, ಸಂಭ್ರಮದಿಂದ ಅದ್ಧೂರಿಯಾಗಿ ಜರುಗಿತು.   

ಚಿತ್ತಾಪುರ: ‘ಪ್ರತಿ ವರ್ಷದ ಜಾತ್ರೆಯ ಸಂಪ್ರದಾಯದಂತೆ ಸೀಗಿ ಹುಣ್ಣಿಮೆಯಂದು ಪಟ್ಟಣದ ಹೊರವಲಯದ ಐತಿಹಾಸಿಕ ಕ್ಷೇತ್ರ ನಾಗಾವಿಯಲ್ಲಿರುವ ಯಲ್ಲಮ್ಮ ದೇವಿಯ ಜಾತ್ರೆ ನಿಮಿತ್ತ ಗುರುವಾರ ಪಲ್ಲಕ್ಕಿ ಉತ್ಸವವು ಶ್ರದ್ಧಾಭಕ್ತಿ, ಸಡಗರ, ಹರ್ಷೋದ್ಘಾರ, ಸಂಭ್ರಮದೊಂದಿಗೆ ಅದ್ದೂರಿಯಾಗಿ ಜರುಗಿತು.

ಪಟ್ಟಣದ ಸರಾಫ್ ಲಚ್ಚಪ್ಪ ಮಲ್ಹಾರ ನಾಯಕ ಅವರ ಮನೆಯಲ್ಲಿ ಮಧ್ಯಾಹ್ನ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಂದ ದೇವಿಗೆ ಪೂಜೆ, ವಿಘ್ನೇಶ್ವರ ಪೂಜೆ, ಗುರುಪೂಜೆ, ಪಲ್ಲಕ್ಕಿ ಪೂಜೆ, ದೇವಿಯ ಪಾದುಕೆ ಪೂಜೆ, ಮಂಗಳಾರತಿ ಕಾರ್ಯಕ್ರಮಗಳು ಸಂಪ್ರದಾಯದಂತೆ ನಡೆದವು.

ಶಿರಸ್ತೇದಾರ ಅಶ್ವತ್ಥನಾರಾಯಣ, ಶಹಾಬಾದ್ ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಸಿಪಿಐಗಳಾದ ಚಂದ್ರಶೇಖರ ತಿಗಡಿ, ಜಗದೇವಪ್ಪ ಪಾಳಾ, ಪಟ್ಟಣದ ಮುಖಂಡರಾದ ಕಣ್ವ ನಾಯಕ, ಚಂದ್ರಶೇಖರ ಅವಂಟಿ, ಈರಪ್ಪ ಭೋವಿ, ನಾಗರೆಡ್ಡಿ ಗೋಪಸೇನ, ನಾಗರಾಜ ರೇಷ್ಮಿ, ಪ್ರಸಾದ ಅವಂಟಿ ಅನೇಕರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ತಹಶೀಲ್ದಾರ್ ಅವರು ಪಲ್ಲಕ್ಕಿ ಹೊತ್ತುಕೊಂಡು ಉತ್ಸವದ ಮೆರವಣಿಗೆಗೆ ಚಾಲನೆ ನೀಡಿದರು. ಡೊಳ್ಳು ವಾದನ, ಹಲಿಗೆ ವಾದನ, ಭಜನೆ ತಂಡದವರಿಂದ ಭಜನೆ ಹಾಡುಗಳ ಗಾಯನ, ಯುವಕರ ಲೇಜಿಮ್ ಆಟ, ಡಿಜೆ ಸೌಂಡಿಗೆ ಯುವಕರ ನೃತ್ಯ ಗಮನ ಸೆಳೆದವು.

ಮಹಿಳೆಯರು, ಪುರುಷರು, ಮಕ್ಕಳು, ಯುವತಿಯರು ಪಲ್ಲಕ್ಕಿ ಹೊತ್ತವರ ಪಾದಗಳಿಗೆ ನೀರು ಹಾಕಿ, ದೇವಿಗೆ ಕಾಯಿಕರ್ಪೂರ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಭೋವಿ ಸಮಾಜದ ಯುವಕರು, ಪುರುಷರು ಸಂಪ್ರದಾಯದಂತೆ ಪಲ್ಲಕ್ಕಿ ಹೊತ್ತುಕೊಂಡು ದೇವಿಗೆ ಭಕ್ತಿಯ ಸೇವೆ ಅರ್ಪಿಸಿದರು.

ಮಧ್ಯಾಹ್ನ ಶುರುವಾದ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ಚಿತಾವಲಿ ಚೌಕ್, ಜನತಾ ಚೌಕ್, ನಾಗಾವಿ ಚೌಕ್, ಒಂಟಿ ಕಮಾನ್ ಸೇತುವೆ ಮಾರ್ಗವಾಗಿ ದಿಗ್ಗಾಂವ ವೃತ್ತದ ಮೂಲಕ ಸಾಗಿ ಸಂಜೆ ದೇವಸ್ಥಾನಕ್ಕೆ ತಲುಪಿತು. ಉತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರೆಲ್ಲರೂ ಹಳದಿ ಭಂಡಾರದಲ್ಲಿ ಮಿಂದೆದ್ದರು. ಪಲ್ಲಕ್ಕಿ ಉತ್ಸವದ ಮೆರವಣಿಗೆ ದೇವಿಯ ಗರ್ಭಗುಡಿಗೆ ಪ್ರದಕ್ಷಿಣೆ ಹಾಕಿ, ಮಂಗಳಾರತಿ ಕಾರ್ಯಕ್ರಮದ ನಂತರ ಜಾತ್ರೆ ಸಂಪ್ರದಾಯ ಸಂಪನ್ನಗೊಂಡಿತು.

ಭಕ್ತರು ಸರದಿಯಲ್ಲಿ ನಿಂತು ದೇವಿಗೆ ಕಾಯಿಕರ್ಪೂರ, ನೈವೇದ್ಯ ಅರ್ಪಿಸಿ, ದರ್ಶನ ಪಡೆದರು. ದೇವಿಯ ಭಕ್ತರಿಗಾಗಿ ಪಟ್ಟಣದ ವಿವಿಧ ವ್ಯಾಪಾರಿಗಳು, ಸಂಘಟನೆಯವರು, ಯುವಕರ ತಂಡಗಳು ಪಲ್ಲಕ್ಕಿ ಸಾಗುವ ರಸ್ತೆಯುದ್ದಕ್ಕೂ ಟೆಂಟ್ ಹಾಕಿ ಬೆಳಗ್ಗೆಯಿಂದ ಸಂಜೆವರೆಗೆ ನಿರಂತರ ಅನ್ನದ ದಾಸೋಹ, ಕುಡಿಯುವ ನೀರು, ಬಾಳೆ ಹಣ್ಣು, ಹಾಲು ವ್ಯವಸ್ಥೆ ಮಾಡಿದ್ದರು.

ಬಿಗಿ ಬಂದೋಬಸ್ತ್: ಜಾತ್ರೆ ಮತ್ತು ಪಲ್ಲಕ್ಕಿ ಉತ್ಸವದ ವೇಳೆ ಅಹಿತಕರ ಘಟನೆ ಜರುಗದಂತೆ, ತೊಂದರೆ, ಸಮಸ್ಯೆಯಾಗದಂತೆ ಶಹಾಬಾದ್ ಡಿವೈಎಸ್‌ಪಿ ಶಂಕರಗೌಡ ಪಾಟೀಲ ಅವರ ನೇತೃತ್ವದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಶ್ರೀಶೈಲ ಅಂಬಾಟಿ ಅವರು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.

ಪಟ್ಟಣದಿಂದ ದೇವಸ್ಥಾನದವರೆಗೆ ಸಾರಿಗೆ ಸಂಚಾರಕ್ಕೆ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿದ್ದರಿಂದ ಭಕ್ತರು ನಿರಾಳವಾಗಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ರಸ್ತೆಯಲ್ಲಿ ಬೈಕ್, ಆಟೊ, ಇತರೆ ವಾಹನಗಳು ನಿಲ್ಲದಂತೆ ಕಟ್ಟೆಚ್ಚರ ವಹಿಸಿದ್ದರಿಂದ ಸಾರಿಗೆ ಸಂಚಾರ ಸುಗಮವಾಗಿತ್ತು.

ಚಿತ್ತಾಪುರ ಪಟ್ಟಣದ ಹೊರವಲಯದ ನಾಗಾವಿ ಕ್ಷೇತ್ರದಲ್ಲಿರುವ ನಾಗಾವಿ ಯಲ್ಲಮ್ಮ ದೇವಿಯ ಜಾತ್ರೆಯ ನಿಮಿತ್ತ ಗುರುವಾರ ದೇವಿಯ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನದ ಮುಂದೆ ನೆರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.