ಕಲಬುರಗಿ: ‘ಕೆಲಸಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ, ಕೋಚಿಂಗ್ ಸೆಂಟರ್‌ಗೆ ಸೇರಿದ ಯುವಕರನ್ನು ಗುರಿಯಾಗಿಸಿಕೊಂಡು ಸಾವಿರಾರು ರೂಪಾಯಿ ಪಡೆದು ನಕಲಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಮಾರುತ್ತಿದ್ದ ಅಂತರರಾಜ್ಯ ಜಾಲವನ್ನು ನಗರ ‘ಸೆನ್’ ಠಾಣೆಯ ಪೊಲೀಸರು ಭೇದಿಸಿ, ಒಬ್ಬನನ್ನು ಬಂಧಿಸಿದ್ದಾರೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ತಿಳಿಸಿದರು.
ನಗರದ ಆಯುಕ್ತರ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಕಲಿ ಅಂಕಪಟ್ಟಿ ಮಾರುತ್ತಿದ್ದ ಆರೋಪದಲ್ಲಿ ದೆಹಲಿಯ ರಾಜೀವ್ ಸಿಂಗ್ ಅರೋರಾನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಕಲಿ ಅಂಕಪಟ್ಟಿಗಳಲ್ಲಿ ದೇಶದ 28 ವಿಶ್ವವಿದ್ಯಾಲಯಗಳು, 68 ಶಿಕ್ಷಣ ಸಂಸ್ಥೆಗಳ ಹೆಸರುಗಳು ಇರುವುದರಿಂದ, ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು’ ಎಂದರು.
‘ದೆಹಲಿಯಲ್ಲಿ ಕಚೇರಿ ತೆರೆದಿದ್ದ ರಾಜೀವ್, ನೌಕರರನ್ನು ನೇಮಿಸಿಕೊಂಡು ವ್ಯವಸ್ಥಿತವಾಗಿ ಈ ಕೃತ್ಯ ಎಸಗುತ್ತಿದ್ದ. ನಕಲಿ ಅಂಕಪಟ್ಟಿ ತಯಾರಿಕೆಗೆ ಬೇಕಾದ ಹಾಲೊಗ್ರಾಮ್, ಸೀಲ್‌ಗಳನ್ನು ತಾನೇ ಸಿದ್ಧಪಡಿಸಿದ್ದ. ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದ. ನಕಲಿ ಮತ್ತು ಅಧಿಕೃತ ವಿವಿಗಳ ಸೀಲ್, ಹಾಲೊಗ್ರಾಮ್‌ಗಳು ಪತ್ತೆಯಾಗಿವೆ. ಹೀಗಾಗಿ, ಅವುಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ಹಾಗೂ ಯುಜಿಸಿಗೆ ಪತ್ರ ಬರೆದು, ಸಮಗ್ರವಾಗಿ ತನಿಖೆ ಮಾಡಬೇಕಾಗುತ್ತದೆ’ ಎಂದು ಹೇಳಿದರು.
‘ಏಳೆಂಟು ವರ್ಷಗಳಿಂದ ಕೃತ್ಯದಲ್ಲಿ ತೊಡಗಿರುವ ರಾಜೀವ್, ಜಾಣ್ಮೆಯಿಂದ ನಕಲಿ ಅಂಕಪಟ್ಟಿ ಸಿದ್ಧಪಡಿಸುತ್ತಿದ್ದ. ಸರ್ಕಾರಿ ನೌಕರಿ ಸಲ್ಲಿಕೆಗೆ ಅಂಕಪಟ್ಟಿಗಳು ನೀಡದೆ, ಖಾಸಗಿ ನೌಕರಿಗಾಗಿ ಮಾತ್ರವೇ ಮಾರುತ್ತಿದ್ದ. ಹೀಗಾಗಿ, ಎಲ್ಲಿಯೂ ಸಿಕ್ಕಿ ಹಾಕಿಕೊಳ್ಳಲಿಲ್ಲ. 2020ರಲ್ಲಿ ನಗರದಲ್ಲಿ ಮೊಹಮದ್ ಖಾನ್ ಎಂಬಾತ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಬಿಇ, ಬಿಟೆಕ್‌ನ ನಕಲಿ ಅಂಕಪಟ್ಟಿ ತಯಾರಿಸಿ ವಿದ್ಯಾರ್ಥಿಗಳಿಗೆ ಮಾರಿ ವಂಚಿಸಿದ್ದ. ಈ ಪ್ರಕರಣದ ತನಿಖೆಯನ್ನು ಮತ್ತೆ ಕೈಗೆತ್ತಿಕೊಂಡಾಗ ದೆಹಲಿವರೆಗೆ ಕರೆದೊಯ್ದಿದೆ’ ಎಂದು ತಿಳಿಸಿದರು.
‘ನಾಲ್ಕು ವರ್ಷದ ಕೋರ್ಸ್‌ಗಳಿಗೆ 3–4 ತಿಂಗಳಲ್ಲಿ ನಕಲಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ಕೊಡುತ್ತಿದೆ. ಇನ್ನಷ್ಟು ತ್ವರಿತವಾಗಿ ಬೇಕೆಂದರೆ ಹೆಚ್ಚಿನ ಹಣ ವಿಧಿಸುತ್ತಿದ್ದ. ಪಿಯುಸಿ, ಡಿಪ್ಲೊಮಾ, ಫಾರ್ಮಸಿ, ಸೋಶಿಯಲ್ ನೆಟ್‌ವರ್ಕ್, ಬಿ.ಇಡಿ, ಬಿಕಾಂ, ಎಲ್‌ಎಲ್‌ಬಿ, ಬಿಟೆಕ್, ಪಿಎಚ್‌ಡಿ ಸೇರಿ 26 ಕೋರ್ಸ್‌ಗಳ ಅಂಕಪಟ್ಟಿ ಪಡೆಯಬಹುದು. ಒಂದು ವರ್ಷದ ಕೋರ್ಸ್‌ನ ಅಂಕಪಟ್ಟಿಗೆ ₹10 ಸಾವಿರದಿಂದ ₹50 ಸಾವಿರ ತನಕ ಹಣ ಪಡೆಯುತ್ತಿದ್ದ. ಮದುವೆಗಾಗಿ ಉನ್ನತ ಶಿಕ್ಷಣದ ಪ್ರಮಾಣ ಪತ್ರವನ್ನು ಕೊಡಲು ಭೌತಿಕವಾಗಿ ಇಲ್ಲದ ವಿಶ್ವವಿದ್ಯಾಲಯನ್ನು ಮಹಾರಾಷ್ಟ್ರದಲ್ಲಿ ಸೃಷ್ಟಿದ್ದ’ ಎಂದು ಮಾಹಿತಿ ನೀಡಿದರು.
ತನಿಖಾ ತಂಡಕ್ಕೆ ಪ್ರಶಂಸೆ: ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ ‘ಸೆನ್’ ಠಾಣೆಯ ಎಸಿಪಿ ಮಡೋಳಪ್ಪ, ಪಿಐ ಸಂಜೀವಕುಮಾರ ಎನ್.ಕುಂಬಾರಗೇರೆ, ಎಎಸ್‌ಐ ದೇವಿಂದ್ರಪ್ಪ, ಸಿಬ್ಬಂದಿ ಹೊನ್ನುರ ಸಾಬ್, ಅಮರನಾಥ, ಚನ್ನವೀರೇಶ, ಅರಣುಕುಮಾರ್ ಅವರನ್ನು ಕಮಿಷನರ್ ಅಭಿನಂದಿಸಿ ಪ್ರಶಂಸೆ ಪತ್ರಗಳನ್ನು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ ಎಚ್. ನಾಯಕ್ ಉಪಸ್ಥಿತರಿದ್ದರು.
ಪ್ರತಿಯೊಂದು ರಾಜ್ಯ ಹಾಗೂ ವಿವಿಗೆ ಪ್ರತ್ಯೇಕ ಮೊಬೈಲ್ ನಂಬರ್ ಇರಿಸಿದ್ದ ರಾಜೀವ್ ಅದಕ್ಕಾಗಿ ಒಬ್ಬೊಬ್ಬ ಪ್ರತಿನಿಧಿಯನ್ನು ನೇಮಿಸಿದ್ದ. ಮಧ್ಯವರ್ತಿಗಳಿಂದ ಬಂದ ನಕಲಿ ಅಂಕಪಟ್ಟಿಗಳ ಆರ್ಡರ್ ಪಡೆದು ಅವರಿಗೆ ಕಮಿಷನ್ ಕೊಟ್ಟು ಮಾರುತ್ತಿದ್ದಶರಣಪ್ಪ ಎಸ್.ಡಿ. ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.