ADVERTISEMENT

ಹಸಿ ಬರ ಘೋಷಣೆಗೆ ಆಗ್ರಹ

ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ ರೈತ ಮುಖಂಡರು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 3:02 IST
Last Updated 4 ಅಕ್ಟೋಬರ್ 2025, 3:02 IST
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ಸಾರ್ವಜನಿಕ ಉದ್ಯಾನದ ಗಾಂಧೀಜಿ ಪುತ್ಥಳಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು      ಪ್ರಜಾವಾಣಿ ಚಿತ್ರ
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ಸಾರ್ವಜನಿಕ ಉದ್ಯಾನದ ಗಾಂಧೀಜಿ ಪುತ್ಥಳಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು      ಪ್ರಜಾವಾಣಿ ಚಿತ್ರ    

ಕಲಬುರಗಿ: ‘ಅತಿವೃಷ್ಟಿ ಹಾಗೂ ಪ್ರವಾಹದಿಂದ ನಲುಗಿರುವ ಕಲಬುರಗಿ ಜಿಲ್ಲೆಯನ್ನು ಹಸಿ ಬರಗಾಲ ಬಾಧಿತ ಎಂದು ಘೋಷಿಸಬೇಕು’ ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ರೈತ, ದಲಿತ, ಕನ್ನಡ, ಕಾರ್ಮಿಕ, ಮಹಿಳಾ ಸಂಘಟನೆಗಳ ಮುಖಂಡರು ನಗರದಲ್ಲಿ ಗುರುವಾರ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಮಹಾತ್ಮ ಗಾಂಧಿ ಜಯಂತಿ ದಿನವಾದ ಗುರುವಾರ ನಗರದ ಪಾಲಿಕೆ ಉದ್ಯಾನದಲ್ಲಿರುವ ಗಾಂಧೀಜಿ ಪುತ್ಥಳಿ ಎದುರು ಬೆಳಿಗ್ಗೆಯಿಂದ ಮಧ್ಯಾಹ್ನ 3 ಗಂಟೆ ತನಕ ಧರಣಿ ನಡೆಯಿತು. ಈ ಅನಿರ್ದಿಷ್ಟ ಧರಣಿಯು ಶುಕ್ರವಾರದಿಂದ ಜಗತ್ ವೃತ್ತದಲ್ಲಿ ನಡೆಯಲಿದೆ.

ಧರಣಿಯಲ್ಲಿ ಪಾಲ್ಗೊಂಡಿದ್ದ ಮುಖಂಡರಾದ ಮೌಲಾ ಮುಲ್ಲಾ, ದಯಾನಂದ ಪಾಟೀಲ, ಶರಣಬಸಪ್ಪ ಮಮಶೆಟ್ಟಿ ಮಾತನಾಡಿದರು.

ADVERTISEMENT

‘ರಾಜ್ಯ ಮತ್ತು ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ರೈತರ ನೆರವಿಗೆ ಧಾವಿಸಬೇಕು. ಅತಿವೃಷ್ಟಿಯಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯಲ್ಲಿ ಹಸಿ ಬರಗಾಲ ಘೋಷಿಸಿ, ರೈತರ ಸಾಲ ಮನ್ನಾ ಮಾಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರವು ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಮಾಡಲು ಏನೂ ಉಳಿದಿಲ್ಲ. ಸಮೀಕ್ಷೆ ನೆಪದಲ್ಲಿ ಕಾಲಹರಣ ಮಾಡದೇ, ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣವೇ ಪರಿಹಾರ ನೀಡಬೇಕು. ಹಿಂಗಾರು ಬಿತ್ತನೆಗಾಗಿ ಉಚಿತ ಬಿತ್ತನೆ ಬೀಜ, ರಸಗೊಬ್ಬರ ಕೊಡಬೇಕು’ ಎಂದು ಆಗ್ರಹಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಭೀಮಶೆಟ್ಟಿ ಯಂಪಳ್ಳಿ, ಆದಿನಾಥ ಹೀರಾ, ಉಮಾಪತಿ ಪಾಟೀಲ, ಎಂ.ಬಿ.ಸಜ್ಜನ್, ಜಗದೇವಿ ಹೆಗಡೆ, ಭೀಮಾಶಂಕರ ಮಾಡಿಯಾಳ, ಪದ್ಮಿನಿ ಕಿರಣಗಿ, ಮಲ್ಲಿಕಾರ್ಜುನ ಪಾಟೀಲ, ನಾಗನಾಥ್ ಥಂಬೆ, ದೇವು ಬಿರಾದಾರ, ದಿಲೀಪ ನಾಗೂರೆ, ಯಶವಂತ ಪಾಟೀಲ, ನಾಗಯ್ಯ ಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.