ADVERTISEMENT

ಸಾಲ ಮನ್ನಾ ಮಾಡದಿದ್ದರೆ ಅಧಿವೇಶನ ನಡೆಯಲು ಬಿಡಲ್ಲ: ಯಡಿಯೂರಪ್ಪ ಗುಡುಗು

​ಪ್ರಜಾವಾಣಿ ವಾರ್ತೆ
Published 13 ಮೇ 2019, 10:33 IST
Last Updated 13 ಮೇ 2019, 10:33 IST
   

ಕಲಬುರ್ಗಿ: ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡದಿದ್ದರೆ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಗುಡುಗಿದರು.

ಚಿಂಚೋಳಿ ತಾಲ್ಲೂಕು ಚಿಮ್ಮನಚೋಡದಲ್ಲಿ ಸೋಮವಾರ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ ಜಾಧವ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಮೇ 27ರಂದು ಪಕ್ಷದ ಮುಖಂಡರು, ಶಾಸಕರ ಜತೆ ಸಭೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ADVERTISEMENT

ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ಬದ್ಧನಾಗಿದ್ದೇನೆ. ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಾಬುರಾವ ಚಿಂಚನಸೂರು ಕನಸು ನನಸಾಗಲಿದೆ ಎಂದರು.

ಕುಡಚಿ ಶಾಸಕ ಪಿ.ರಾಜೀವ್ ಮಾತನಾಡಿ, ಕಾಂಗ್ರೆಸ್ ತಿಗಣಿ ಇದ್ದಂತೆ. 50 ವರ್ಷಗಳಿಂದ ನಿರಂತರವಾಗಿ ದೇಶದ ಜನತೆಯ ರಕ್ತ ಹೀರುತ್ತಿದೆ. ಮನೆಯಲ್ಲಿ ಇರುವ ಒಂದೆರಡು ತಿಗಣಿಗಳ ಕಾಟ ತಾಳಲು ಆಗುತ್ತಿಲ್ಲ. ದೇಶದಲ್ಲಿರುವ ಲಕ್ಷಾಂತರ ಕಾಂಗ್ರೆಸ್ ತಿಗಣಿಗಳನ್ನು ನಿಯಂತ್ರಿಸಲು ಮೋದಿ ಅವರು ದಿವ್ಯ ಔಷಧಿ, ರಾಮ ಬಾಣವಾಗಿದ್ದಾರೆ ಎಂದು ಚಾಟಿ ಬೀಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಇಡೀ ರಾಜ್ಯ ಸರ್ಕಾರ ಚಿಂಚೋಳಿಯಲ್ಲಿ ಬೀಡು ಬಿಟ್ಟಿದೆ. ಒಬ್ಬ ಡಾ. ಅವಿನಾಶ ಜಾಧವ ಸೋಲಿಸಲು ಸರ್ಕಾರವೇ ಚಿಂಚೋಳಿಗೆ ಬಂದಿದೆ. ಎಲ್ಲಾ ಸಚಿವರು ಇಲ್ಲೇ ವಾಸ್ತವ್ಯ ಹೂಡಿದ್ದಾರೆ ಎಂದು ದೂರಿದರು.

ವಿಧಾನ ಸೌಧದಿಂದ ರಾಜ್ಯಭಾರ ಮಾಡಬೇಕಾದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೆಸಾರ್ಟ್ ನಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಭ್ಯರ್ಥಿ ಡಾ. ಅವಿನಾಶ ಜಾಧವ ಮಾತನಾಡಿ, ಒಂದು ವರ್ಷದಿಂದ ಚಿಂಚೋಳಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಅಭಿವೃದ್ಧಿಗಾಗಿ ನನಗೆ ಆಶೀರ್ವಾದ ಮಾಡಬೇಕು. 24 ಗಂಟೆ ನಿಮ್ಮ ಮನೆಯ ಮಗನಾಗಿ ಸೇವೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಚಿಂಚೋಳಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.