ADVERTISEMENT

ಕಲಬುರಗಿ | ಸಿಎಂ ಬೆಳೆ ಹಾನಿ ವೀಕ್ಷಣೆ ಯಾವ ಪುರುಷಾರ್ಥಕ್ಕೆ?: ಅವ್ವಣ್ಣ ಮ್ಯಾಕೇರಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 6:42 IST
Last Updated 19 ಸೆಪ್ಟೆಂಬರ್ 2025, 6:42 IST
ಅವ್ವಣ್ಣ ಮ್ಯಾಕೇರಿ
ಅವ್ವಣ್ಣ ಮ್ಯಾಕೇರಿ   

ಕಲಬುರಗಿ: ‘ಕಲ್ಯಾಣ ಕರ್ನಾಟಕದ ಉತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಭಟನಾನಿರತ ರೈತರ ಅಳಲು ಆಲಿಸದೇ ಅವಮಾನಿಸಿದ್ದು ಖಂಡನೀಯ’ ಎಂದು ಜಿಲ್ಲಾ ರೈತ ಹೋರಾಟ ಸಮಿತಿ ಮುಖಂಡ ಅವ್ವಣ್ಣ ಮ್ಯಾಕೇರಿ ಅಸಮಾಧಾನ ವ್ಯಕ್ತಪಡಿಸಿದರು.‌

‘ಬೆಳೆ ಹಾನಿಯಿಂದ ಸಂಕಷ್ಟದಲ್ಲಿರುವ ನೂರಾರು ರೈತರು ನಗರದಲ್ಲೇ ಪ್ರತಿಭಟಿಸುತ್ತಿದ್ದರು. ಅನ್ನದಾತರ ಅಳಲು ಆಲಿಸಲು ಬರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಫರಹತಾಬಾದ್‌ಗೆ ಹೋಗಿ ಬೆಳೆಹಾನಿ ವೀಕ್ಷಿಸಿದ್ದು ಯಾವು ಪುರುಷಾರ್ಥಕ್ಕಾಗಿ?’ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿಭಟನಾನಿರತ ರೈತರ ಮೇಲೆ ಹಲ್ಲೆ ನಡೆಸಿ, ಬಂಧಿಸಲಾಗಿದೆ. ಇದೊಂದು ತುಘಲಕ್‌ ಸರ್ಕಾರ, ಭಂಡ ಸರ್ಕಾರ, ಗೂಂಡಾ ಸರ್ಕಾರವಾಗಿದೆ. ರೈತರ ಹಿಂದಿನ ವರ್ಷದ ಬೆಳೆ ವಿಮೆ ಹಣ ಈಗಲೂ ಅನ್ನದಾತರ ಖಾತೆಗೆ ಬಂದಿಲ್ಲ. ಅಂಥವರ ಅಹವಾಲು ಆಲಿಸದ ಮುಖ್ಯಮಂತ್ರಿ ಯಾರನ್ನು ಖುಷಿಪಡಿಸಲು ಫರಹತಾಬಾದ್‌ಗೆ ಹೋದರು? ಈ ಸರ್ಕಾರಕ್ಕೆ ರೈತರ ಬಗೆಗೆ ಕಾಳಜಿ ಇದ್ದಿದ್ದರೆ, ಹಿಂದಿನ ವರ್ಷದ ಬೆಳೆವಿಮೆ ಪರಿಹಾರ ಹಣ ಘೋಷಿಸಬೇಕಿತ್ತು’ ಎಂದು ಪ್ರತಿಪಾದಿಸಿದರು.

ADVERTISEMENT

‘ಮತ್ತೊಂದೆಡೆ ಪ್ರತಿಭಟನಾನಿರತ ರೈತ ಹೋರಾಟಗಾರರನ್ನು ನಿಯಂತ್ರಿಸಲು ಸರ್ಕಾರ ಬಂದೂಕುಧಾರಿ ಕ್ಷಿಪ್ರ ಕಾರ್ಯಪಡೆಯನ್ನು (ಆರ್‌ಎಎಫ್‌) ನಿಯೋಜಿಸಿತ್ತು. ವಿಧ್ವಂಸಕ ಕೃತ್ಯಗಳು, ಕೋಮುಗಲಭೆಗಳು ನಡೆದಾಗ ಈ ಪಡೆಯನ್ನು ನಿಯೋಜಿಸಲಾಗುತ್ತದೆ. ಅಂಥ ಪಡೆಯನ್ನು ನಿಯೋಜಿಸಿ ಹೋರಾಟ ಹತ್ತಿಕ್ಕಲು ಯತ್ನಿಸಲಾಗಿದೆ’ ಎಂದು ದೂರಿದರು.

‘ರಾಜ್ಯ ಸರ್ಕಾರ ರೈತರ ಹಿಂದಿನ ವರ್ಷದ ಬಾಕಿಬೆಳೆ ವಿಮೆ ಹಣವನ್ನು ಶೇ15ರಷ್ಟು ಬಡ್ಡಿಯೊಂದಿಗೆ ಕೂಡಲೇ ಅನ್ನದಾತರ ಖಾತೆಗಳಿಗೆ ಜಮೆ ಮಾಡಬೇಕು. ಕಲಬುರಗಿಯಲ್ಲಿ ವ್ಯಾಪಕ ಮಳೆಯಾಗಿ ಬೆಳೆಹಾನಿಯಾಗಿದ್ದು, ಜಿಲ್ಲೆಯನ್ನು ಅತಿವೃಷ್ಟಿ ಬಾಧಿತ ಜಿಲ್ಲೆಯನ್ನಾಗಿ ಘೋಷಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಈ ಬೇಡಿಕೆಗಳು ಈಡೇರುವ ತನಕ ಹೋರಾಟ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದರು.

‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ರೈತರ ಸಮಸ್ಯೆ ಆಲಿಸಲಿಲ್ಲವೇಕೆ’ ಎಂಬ ಪ್ರಶ್ನೆಗೆ ಅವ್ವಣ್ಣ ಮ್ಯಾಕೇರಿ ಸ್ಪಷ್ಟ ಉತ್ತರ ನೀಡಲಿಲ್ಲ.

ಪತ್ರಿಕಾಗೋಷ್ಠಿಯಲ್ಲಿ ಎಂ.ಎಸ್‌.ಪಾಟೀಲ ನರಿಬೋಳ, ಬಸವರಾಜ ಸಪ್ಪನಗೋಳ, ಶಿವಾನಂದ ಮಠ, ಗಿರೀಶ ಪಾಟೀಲ, ಬಸವರಾಜ ಪಾಟೀಲ, ಭೀಮಶೆಟ್ಟಿ ಮುದ್ದಾ, ಮಹೇಶ ಪಾಟೀಲ, ಎಚ್‌.ಎಸ್‌.ಬರಗಾಲಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ರೈತರ ಬೇಡಿಕೆಗಳ ಈಡೇರಿಕೆಗಾಗಿ ಶೀಘ್ರವೇ ಮತ್ತೊಮ್ಮೆ 2025ರ ಮಾರ್ಚ್‌ನಲ್ಲಿ ನಡೆಸಿದ್ದ ಮಾದರಿಯಲ್ಲಿ ಉಗ್ರ ಹೋರಾಟ ನಡೆಸಲಾಗುವುದು
ಅವ್ವಣ್ಣ ಮ್ಯಾಕೇರಿ ಜಿಲ್ಲಾ ರೈತ ಹೋರಾಟ ಸಮಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.