
ಕಲಬುರಗಿ: ಪ್ರತಿ ಕ್ವಿಂಟಲ್ ತೊಗರಿಗೆ ₹12,500 ಎಂಎಸ್‌ಪಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳ ಜಂಟಿ ಒಕ್ಕೂಟವಾದ ಸಂಯುಕ್ತ ಹೋರಾಟ ಕರ್ನಾಟಕ (ಎಸ್‌ಕೆಎಂ) ಜಿಲ್ಲಾ ಸಮಿತಿ ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಶುಕ್ರವಾರ ತಾತ್ಕಾಲಿಕವಾಗಿ ಹಿಂಪಡೆದಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಐವಾನ್–ಎ–ಶಾಹಿ ಅತಿಥಿಗೃಹದತ್ತ ಸಾಗುವ ರಸ್ತೆಯಲ್ಲಿ ಟ್ರ್ಯಾಕ್ಟರ್‌ಗಳು, ಎತ್ತಿನ ಬಂಡಿಗಳೊಂದಿಗೆ ಗುರುವಾರ ಧರಣಿ ಆರಂಭಗೊಂಡಿತ್ತು. ದಿನವಿಡೀ ಧರಣಿ ಬಳಿಕ ರೈತ ಮುಖಂಡರು ರಸ್ತೆಯಲ್ಲೇ ರಾತ್ರಿ ಕಳೆದಿದ್ದರು. ಎರಡನೇ ದಿನವಾದ ಶುಕ್ರವಾರ ಮಧ್ಯಾಹ್ನ 3 ಗಂಟೆ ತನಕವೂ ಧರಣಿನಿರತರು ರಸ್ತೆಯಲ್ಲೇ ಕುಳಿತಿದ್ದರು.
ಮಧ್ಯಾಹ್ನ 3 ಗಂಟೆಯಿಂದ 4 ಗಂಟೆ ತನಕ ಸರ್ದಾರ್ ಪಟೇಲ್ ವೃತ್ತ ಹಾಗೂ ಜಗತ್ ವೃತ್ತ ಸಂಪರ್ಕಿಸುವ ಎರಡು ಬದಿಯ ರಸ್ತೆಗಳಲ್ಲಿ ಟ್ರ್ಯಾಕ್ಟರ್, ಎತ್ತಿನ ಬಂಡಿಗಳೊಂದಿಗೆ ರೈತರು ಮಾನವ ಸರಪಳಿ ನಿರ್ಮಿಸಿದರು. ವಾಹನಗಳ ಸಂಚಾರ ತಡೆದು ಘೋಷಣೆ ಮೊಳಗಿಸಿದರು. ಬಾರಕೋಲ ಝಳಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಮೌಲಾ ಮುಲ್ಲಾ, ಭೀಮಾಶಂಕರ ಮಾಡಿಯಾಳ, ಸಿದ್ದು ಎಸ್.ಎಲ್., ಎ.ಬಿ.ಹೊಸಮನಿ ಸೇರಿದಂತೆ ಹಲವರು ಮಾತನಾಡಿದರು. ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಸೇಡಂ ಉಪವಿಭಾಗಾಧಿಕಾರಿ ಪ್ರಭು ರೆಡ್ಡಿ ಅವರಿಗೆ ಒಂಬತ್ತು ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಹೋರಾಟಗಾರ ಶರಣಬಸಪ್ಪ ಮಮಶೆಟ್ಟಿ, ‘ತೊಗರಿ ಎಂಎಸ್‌ಪಿ ಹೆಚ್ಚಳ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ ತಲಾ ₹1 ಸಾವಿರ ಪ್ರೋತ್ಸಾಹಧನ ಸೇರಿದಂತೆ ರೈತರ ಹಿತಾಸಕ್ತಿ ಕಾಯುವ ಬೇಡಿಕೆಗಳನ್ನು ಜನವರಿ 26ರೊಳಗೆ ಈಡೇರಿಸಬೇಕು. ಇಲ್ಲದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು. ಅಲ್ಲಿಯ ತನಕ ತಾತ್ಕಾಲಿಕವಾಗಿ ಹೋರಾಟ ಹಿಂಪಡೆಯಲಾಗಿದೆ’ ಎಂದರು.