ADVERTISEMENT

ಬದುಕು ಅರಳಿಸಿದ ಅಣಬೆ ಕೃಷಿ

ಓಕಳಿ ಗ್ರಾಮದ ರೈತ ಮಹಾದೇವ ಅವರ ವಿಶಿಷ್ಟ ಬೇಸಾಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 4:22 IST
Last Updated 14 ನವೆಂಬರ್ 2020, 4:22 IST
ಓಕಳಿ ಗ್ರಾಮದ ರೈತ ಮಹಾದೇವಪ್ಪ ಮುಗಳಿ ಅವರ ಅಣಬೆ ಬೇಸಾಯ
ಓಕಳಿ ಗ್ರಾಮದ ರೈತ ಮಹಾದೇವಪ್ಪ ಮುಗಳಿ ಅವರ ಅಣಬೆ ಬೇಸಾಯ   

ಕಮಲಾಪುರ: ಅತಿವೃಷ್ಟಿ, ನೆರೆ, ಪ್ರವಾಹದಿಂದ ಬೆಳೆ ಹಾನಿ ಅನುಭವಿಸುತ್ತಿರುವ ರೈತರು ಈಚೆಗೆ ಪರ್ಯಾಯ ಬೇಸಾಯದತ್ತ ವಾಲುತ್ತಿದ್ದಾರೆ.

ಈ ನಿಟ್ಟಿನಲ್ಲಿ ಅತಿವೃಷ್ಟಿಯಿಂದ ಹಾನಿಯಾಗದಂತಹ ಮತ್ತು ಹೆಚ್ಚು ಆದಾಯ ತಂದುಕೊಡುವ ಅಣಬೆ ಬೇಸಾಯ ಒಳಿತು ಎನ್ನುತ್ತಾರೆ ಓಕಳಿ ಗ್ರಾಮದ ಯುವ ರೈತ ಮಹಾದೇವ. ಅವರೂ ಸಹ ಈ ಬೇಸಾಯ ಕೈಗೊಂಡಿದ್ದು ಆರಂಭಿಕ ಹಂತದಲ್ಲಿದೆ. ತಕ್ಕ ಮಟ್ಟಿಗೆ ಆದಾಯ ಸಹ ಪಡೆದಿದ್ದಾರೆ.

‘ಈ ಮೊದಲು ಸಿರಿ ಧಾನ್ಯಗಳನ್ನು ಬೆಳೆಯುತ್ತಿದ್ದೆ. ಮಾರಾಟಕ್ಕೆ ತೋಟಗಾರಿಕೆ ಇಲಾಖೆ ಹಾಗೂ ಕಲಬುರ್ಗಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಹೋಗಿದ್ದೆ. ಈ ರೀತಿಯ ಹೊಸತನ ಗಮನಿಸಿದ ಅಧಿಕಾರಿಗಳು ಅಣಬೆ ಬೇಸಾಯ ಕೈಗೊಳ್ಳುವಂತೆ ಹೇಳಿದರು. ಅವರ ಸಲಹೆ ಮೇರೆಗೆ ಬೆಂಗಳೂರಿನ ಹುಳಿಮಾವುನಲ್ಲಿರುವ ತೋಟಗಾರಿಕೆ ಇಲಾಖೆ ಜೈವಿಕ ಕೇಂದ್ರದಲ್ಲಿ ಅಣಬೆ ಕೃಷಿ ಕುರಿತು ಒಂದು ವಾರ ತರಬೇತಿ ಪಡೆದೆ ಗ್ರಾಮಕ್ಕೆ ಮರಳಿ ಬೇಸಾಯ ಆರಂಭಿಸಿದ್ದೇನೆ’ ಎಂದು ಮಹಾದೇವ ತಿಳಿಸಿದರು.

ADVERTISEMENT

‘ಈ ಬೇಸಾಯಕ್ಕೆ ಜಮೀನಿನ ಅಗತ್ಯವಿಲ್ಲ. ಮನೆಯ ಒಂದು ಕೊಠಡಿಯಲ್ಲೂ ಅಣಬೆ ಬೆಳೆಯಬಹುದು. 45 ದಿನದ ಬೇಸಾಯ ಇದಾಗಿದ್ದು, ನಾಟಿ ಮಾಡಿದ 20 ದಿನಕ್ಕೆ ಅಣಬೆ ಬಿಡಿಸಿಕೊಳ್ಳಬಹುದು. ನನಗೆ 8 ಎಕರೆ ಜಮೀನಿದ್ದು, ಮೊದಲೇ ನಿರ್ಮಿಸಿದ 20 ಚದರ ಅಡಿಯ ಕೊಠಡಿ ಇತ್ತು. ಈ ಕೊಠಡಿಯನ್ನು ಅಣಬೆ ಕೃಷಿಗೆ ಬಳಸಿಕೊಂಡಿದ್ದೇನೆ. ಕೊಠಡಿಯಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವುದು ಅವಶ್ಯಕವಾಗಿದ್ದು, ಸುಮಾರು ಅರ್ಧ ಅಡಿಯವರೆಗೆ ನೀರು ಸಂಗ್ರಹಿಸಿಡಬೇಕು’ ಎಂದರು.

‘ತೊಗರಿ, ಉದ್ದು, ಹೆಸರು ರಾಶಿಯ ನಂತರ ನಿರುಪಯುಕ್ತ ಹೊಟ್ಟು, ಕಬ್ಬಿನ ವಾಡೆ ಅಥವಾ ಹುಲ್ಲು ಯಾವುದಾದರೊಂದನ್ನು 5 ಕೆ.ಜಿ ಸಂಗ್ರಹ ಸಾಮರ್ಥ್ಯದ ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಹಾಕಬೇಕು. ಬ್ಯಾಗ್‍ನಲ್ಲಿ 50 ಗ್ರಾಂ ಸ್ಪಾನ್ (ಅಣಬೆ ಬೀಜ) ಹಾಕಬೇಕು. ಈ ಬ್ಯಾಗ್‍ಗಳನ್ನು ಒಂದರ ಕೆಳಗೆ ಒಂದರಂತೆ ಜೋತು ಬಿಡಬೇಕು. ಬ್ಯಾಗ್‍ಗಳಿಗೆ ಸುತ್ತಲೂ ರಂಧ್ರ ಕೊರೆಯಬೇಕು. ಅಲ್ಲಿಂದಲೇ ಅಣಬೆ ನಾಟಿಯಾಗುತ್ತದೆ’ ಎಂದು ಹೇಳಿದರು.

‘ಅಣಬೆ ಕೃಷಿಗೆ ಬಳಸುವ ಹೊಟ್ಟು, ಹಲ್ಲಿನಲ್ಲಿ ದೇಶಿ ವಿಷಕಾರಿ ಅಣಬೆ ಬೆಳೆಯುವ ಸಾಧ್ಯತೆ ಇರುತ್ತದೆ. ಮುಂಚೆಯೆ ಹೊಟ್ಟನ್ನು ಸುಮಾರು ಎರಡು ಗಂಟೆಗಳ ಕಾಲ ನೀರಿನಲ್ಲಿ ಕುದಿಸಬೇಕು. ಇದರಿಂದ ಶಿಲೀಂಧ್ರಗಳು ಸಾಯುತ್ತವೆ. ವಿಷಕಾರಿ ಅಣಬೆ ಬೆಳಯುವುದಿಲ್ಲ’ ಎಂದರು.

‘ತರಬೇತಿ ಪಡೆದು ಮರಳುವಾಗ ಪ್ರತಿ ಕೆ.ಜಿ.ಗೆ ₹80 ಕೊಟ್ಟು ಅಲ್ಲಿಂದಲೇ 10 ಕೆ.ಜಿ. ಸ್ಪಾನ್ ಕೊಂಡು ತಂದಿದ್ದೆ. ಲಾಕ್‍ಡೌನ್ ಸಮಯದಲ್ಲಿ ಪ್ರತಿ ಕೆ.ಜಿಗೆ ₹200 ಬೆಲೆ ಸಿಕ್ಕಿದೆ. ಪ್ರತಿ ದಿನ ಮೂರ್ನಾಲ್ಕು ಕೆ.ಜಿ. ಸಿಗುತ್ತದೆ. ಈಗ ಮತ್ತೆ 20 ಕೆ.ಜಿ ಬೀಜ ತಂದು ಕೃಷಿ ಮಾಡಿದ್ದೇನೆ’ ಎಂದುಅವರು ತಿಳಿಸಿದರು.

‘ಈ ಬೇಸಾಯ ಕೈಗೊಳ್ಳುವವರಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ಸರ್ಕಾರದಿಂದ ಸಹಾಯಧನ ದೊರೆಯುತ್ತದೆ. ಸಹಾಯಧನಕ್ಕಾಗಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ, ಜಂಟಿ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೇವಲ ಕಾಗದದಲ್ಲಿ ತೋರಿಸುವವರೇ ಸಹಾಯಧನ ಪಡೆಯುತ್ತಾರೆ. ನೈಜ ರೈತರಿಗೆ ಸರ್ಕಾರದ ಸಹಾಯ ದೊರೆಯುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.