ADVERTISEMENT

ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯಿರಿ: ಹಮಾಲಿ ಕಾರ್ಮಿಕರ ಪ್ರತಿಭಟನೆ

ಜೇವರ್ಗಿ: ಹಮಾಲಿ ಕಾರ್ಮಿಕರ ಮುಷ್ಕರ, ವರ್ತಕರಿಂದ ವ್ಯಾಪಾರ ಸ್ಥಗಿತ, ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 1:57 IST
Last Updated 24 ಸೆಪ್ಟೆಂಬರ್ 2020, 1:57 IST
ಜೇವರ್ಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಹಮಾಲಿ ಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು
ಜೇವರ್ಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಹಮಾಲಿ ಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು   

ಜೇವರ್ಗಿ: ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಹಮಾಲಿ ಕಾರ್ಮಿಕರ ಉದ್ಯೋಗವನ್ನು ಕಸಿಯುವ ಮತ್ತು ಸೌಲಭ್ಯಗಳಿಂದ ವಂಚಿಸಲಿರುವ ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಕೂಡಲೇ ಹಿಂದಕ್ಕೆ ಪಡೆದುಕೊಳ್ಳುವಂತೆ ಆಗ್ರಹಿಸಿ ಬುಧವಾರ ಇಲ್ಲಿ ಅಖಂಡೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹಮಾಲಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಹಮಾಲಿ ಕಾರ್ಮಿಕರ ಮುಷ್ಕರ ನಿಮಿತ್ತ ಅಖಂಡೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯ ವರ್ತಕರು ದೈನಂದಿನ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಿದ್ದರು.

ಕೋವಿಡ್ ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾದ ಎಲ್ಲಾ ಹಮಾಲಿ ಕಾರ್ಮಿಕರಿಗೆತಿಂಗಳಿಗೆ ₹7,500 ಆರ್ಥಿಕ ನೆರವು ನೀಡಬೇಕು. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಎಲ್ಲಾ ನಗರ, ಗ್ರಾಮೀಣ, ಬಜಾರ ಹಮಾಲಿ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಪಿಂಚಣಿ ಜಾರಿ ಮಾಡಬೇಕು. ನನೆಗುದಿಗೆ ಬಿದ್ದಿರುವ ವಸತಿ ಯೋಜನೆ ಅಡಿಯಲ್ಲಿ ಹಮಾಲಿ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು. ಹಮಾಲಿ ಕಾರ್ಮಿಕರಿಗೆ ಇಎಸ್‍ಐ, ಪಿ.ಎಫ್ ಹಾಗೂ ಕನಿಷ್ಠ ವೇತನ ಮತ್ತು ಬೋನಸ್ ಜಾರಿಗೊಳಿಸಬೇಕು ಎಂದು ಹಮಾಲಿ ಕಾರ್ಮಿಕರು ಒತ್ತಾಯಿಸಿದರು.

ADVERTISEMENT

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೃಷಿ ಕೂಲಿ ಕಾರ್ಮಿಕರಿಗೆ ದಿನವೊಂದಕ್ಕೆ₹ 600 ಕೂಲಿ ನೀಡಬೇಕು ಮತ್ತು 200 ದಿನ ಕೆಲಸ ನೀಡಬೇಕು, ಈ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ಪ್ರಮುಖ 8 ಬೇಡಿಕೆಗಳ ಮನವಿಪತ್ರವನ್ನು ತಹಶೀಲ್ದಾರ್‌ ಸಿದರಾಯ ಬೋಸಗಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು.

ಜೇವರ್ಗಿ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜ ಕೆಲ್ಲೂರ, ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಸುಭಾಷ ಹೊಸಮನಿ, ಲಕ್ಕಪ್ಪ ರದ್ದೇವಾಡಗಿ, ಮೌನೇಶ ಹನ್ನೂರ, ಸೈಯದ, ರಾಮಲಿಂಗ್, ಸುಲೇಮಾನ, ಈರಪ್ಪ, ನಿಂಗಣ್ಣ ಠಣಕೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.