
ಯಡ್ರಾಮಿ: ‘ಕಬ್ಬಿಗೆ ₹3,110 ಕಾರ್ಖಾನೆ ನೀಡಬೇಕು, ರಾಜ್ಯ ಸರ್ಕಾರದಿಂದ ₹50 ನಿಗದಿ ಇದಕ್ಕೆ ಬದ್ದವಾಗಿರುತ್ತದೆ. ಜಿಲ್ಲಾ ಆಡಳಿತದ ನಿಗದಿ ಮಾಡಿರುವ ₹3,160 ನಂತೆ ನೀಡುತ್ತೇವೆ‘ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ (ಡಿಡಿ) ಭೀಮರಾಯ ಹೇಳಿದರು.
ಕಬ್ಬಿಗೆ ₹3,500 ನಿಗದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಾಗರಹಳ್ಳಿ ದಿ ಉಗರ್ ಸುಗರ್ ಕಾರ್ಖಾನೆ ಮುಂದೆ ರೈತರು ಹಾಗೂ ವಿವಿಧ ಸಂಘಟನೆಗಳು ನಡೆಸುತ್ತಿರುವ ಐದನೇ ದಿನದ ಧರಣಿಗೆ ಮಂಗಳವಾರ ರಾತ್ರಿ ಭೇಟಿ ನೀಡಿ ಅವರು ಮಾತನಾಡಿದರು.
ಒಂದು ವೇಳೆ ಸರ್ಕಾರ ನಿಗದಿ ಮಾಡಿರುವಷ್ಟು ಕಬ್ಬಿನ ದರ ಕಾರ್ಖಾನೆಯವರು ನೀಡದಿದ್ದರೆ ಕಾರ್ಖಾನೆಗೆ ಎನ್‌ಒಸಿ ಕೊಡುವುದಿಲ್ಲ. ಅದನ್ನು ಮೀರಿ ಕಾರ್ಖಾನೆ ಆರಂಭಗೊಂಡರೆ ಕಾರ್ಖಾನೆ ಬಂದ್ ಮಾಡಿಸುತ್ತೇವೆ ಎಂದು ಮುಖಂಡರ ಮನವೊಲಿಸಲು ಯತ್ನಿಸಿದರು ಕಾರ್ಯಸಾಧುವಾಗಿಲ್ಲ. ಡಿಡಿ ಅಥವಾ ಕಾರ್ಖಾನೆಯವರು ಬರಹದ ರೂಪದಲ್ಣಿ ಭರವಸೆ ನೀಡಬೇಕು ಎಂದು ಹೋರಾಟಗಾರರು ಪಟ್ಟು ಹಿಡಿದರು.
ಕಡಕೋಳ ರುದ್ರಮುನಿ ಶಿವಚಾರ್ಯ ಸ್ವಾಮೀಜಿ ಹೋರಾಟ ಬೆಂಬಲಿಸಿ ಮಾತನಾಡಿ, ‘ರೈತರಿಗೆ ಒಂದು ವೇಳೆ ನಿಗದಿತ ಬೆಲೆ ನೀಡದಿದ್ದರೆ ಯಡ್ರಾಮಿ ತಾಲ್ಲೂಕಿನ ಎಲ್ಲಾ ರೈತರನ್ನು ಸೇರಿಸಿ ಉಗ್ರ ಹೋರಾಟ ಕೈಗೊಳ್ಳಲಾಗುವುದು‘ ಎಂದು ಎಚ್ಚರಿಕೆ ನೀಡಿದರು
ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್, ಯಂಕಂಚಿ ಶ್ರೀಗಳು, ತಾ.ಪಂ ಮಲ್ಲನಗೌಡ, ಕ.ರ.ವೇ ಮುಖಂಡರಾದ ಸಾಹೇಬಗೌಡ ದೇಸಾಯಿ, ಸಾಂಬಶಿವ ಹಿರೇಮಠ, ಹಸಿರು ಸೇನೆ ಅಧ್ಯಕ್ಷ ಈರಣ್ಣ ಭಜಂತ್ರಿ, ಬಿಸಿಲು ನಾಡಿನ ಹಸಿರು ಸೇನೆ ರಾಜ್ಯಾಧ್ಯಕ್ಷ ಶಫೀಉಲ್ಲಾ ದಖನಿ ಸೇರಿದಂತೆ ಅನೇಕರಿದ್ದರು.
ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ಒತ್ತಾಯ
ಯಡ್ರಾಮಿ: ಪ್ರತಿ ಟನ್ ಕಬ್ಬಿಗೆ ₹3500 ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಯಡ್ರಾಮಿ ತಾಲ್ಲೂಕಿನ ನಾಗರಹಳ್ಳಿ ಮಳ್ಳಿಯಲ್ಲಿರುವ ಉಗರ್ ಶುಗರ್ ಸಕ್ಕರೆ ಕಾರ್ಖಾನೆಯ ಮುಂದೆ ಕಬ್ಬು ಬೆಳೆಗಾರರ ಧರಣಿ ಮುಂದುವರೆದಿದೆ. ಜತೆಗೆ ಈ ಕಾರ್ಖಾನೆಯಿಂದ ಬರುವ ತ್ಯಾಜ್ಯ ಸಿಕ್ಕಸಿಕ್ಕಲ್ಲಿ ಬಿಸಾಡುವವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಆತಂಕ ಉಂಟಾಗಿದೆ. ಅಲ್ಲದೇ ಕಾರ್ಖಾನೆಯ ಆವರಣದಲ್ಲಿರುವ ಶೌಚಗೃಹ ಸ್ನಾನಗೃಹ ಉಪಾಹಾರ ಮಂದಿರ ಕಬ್ಬಿನ ಬೆಲೆಯೆ ನಾಮಫಲಕ ತೂಕದ ಯಂತ್ರ ಗುಣಮಟ್ಟದಿಂದ ಕೂಡಿಲ್ಲ. ಈ ಎಲ್ಲಾ ಸಮಸ್ಯೆಗಳು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರುಗಳು ತಮ್ಮ ಅಧ್ಯಕ್ಷತೆಯಲ್ಲಿ ಸಭೆ ಕರೆದು ಚರ್ಚಿಸಬೇಕು ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಾಧ್ಯಕ್ಷರಾದ ಬಸವರಾಜಗೌಡ ರೇ.ಪಾಟೀಲ ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.