ADVERTISEMENT

ಕಲಬುರಗಿ | ಸಾಲದ ಶೂಲ; ನಿಲ್ಲದ ರೈತರ ಆತ್ಮಹತ್ಯೆ

ಎರಡು ವರ್ಷಗಳಲ್ಲಿ 151 ಪ್ರಕರಣಗಳ ವರದಿ: 108 ಪ್ರಕರಣಗಳು ದೃಢ, 12 ಪ್ರಕರಣಗಳ ಪರಿಹಾರ ಬಾಕಿ

ಮಲ್ಲಿಕಾರ್ಜುನ ನಾಲವಾರ
Published 25 ಮಾರ್ಚ್ 2025, 5:20 IST
Last Updated 25 ಮಾರ್ಚ್ 2025, 5:20 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕಲಬುರಗಿ: ಬೇಸಾಯದ ಬದುಕಿನಲ್ಲಿ ಅನುಭವಿಸಿದ ಸೋಲು ಮತ್ತು ಸಾಲದ ಶೂಲ ರೈತರನ್ನು ಆತ್ಮಹತ್ಯೆಯ ಕೂಪಕ್ಕೆ ನೂಕುತ್ತಿವೆ. ಕೃಷಿ ನೆರವಿಗಾಗಿ ಸರ್ಕಾರದ ಹತ್ತಾರು ಯೋಜನೆಗಳು ಇದ್ದರೂ ರೈತರನ್ನು ಆತ್ಮಹತ್ಯೆಯ ದವಡೆಯಿಂದ ಪಾರು ಮಾಡಲು ಆಗುತ್ತಿಲ್ಲ.

ಕೃಷಿ ಇಲಾಖೆಯ ಮಾಹಿತಿ ಪ್ರಕಾರ ತೊಗರಿ ಕಣಜ ಕಲಬುರಗಿಯಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ 151 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ 108 ರೈತರ ಆತ್ಮಹತ್ಯೆ ಪ್ರಕರಣಗಳನ್ನು ಅರ್ಹವೆಂದು ಪರಿಗಣಿಸಲಾಗಿದೆ.

ಬರಗಾಲದ ವರ್ಷವಾದ 2023–24ನೇ ಸಾಲಿನಲ್ಲಿನ 88 ಪ್ರಕರಣಗಳಲ್ಲಿ 19 ಪ್ರಕರಣಗಳು ತಿರಸ್ಕೃತಗೊಂಡಿವೆ. 69 ರೈತರ ಆತ್ಮಹತ್ಯೆಯನ್ನು ಅರ್ಹವೆಂದು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. 2024–25ನೇ (ಮಾರ್ಚ್ 12ರ ವರೆಗೆ) ಸಾಲಿನಲ್ಲಿ 63 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ 39 ರೈತರ ಆತ್ಮಹತ್ಯೆಗಳು ಅರ್ಹವಾಗಿ ಪರಿಗಣಿಸಿದ್ದು, 14 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. 10 ಪ್ರಕರಣಗಳು ಬಾಕಿ ಇದ್ದು, ಒಂಬತ್ತು ಪ್ರಕರಣಗಳ ಎಫ್‌ಎಸ್‌ಎಲ್‌ ವರದಿ ಬರಬೇಕಿದೆ.

ADVERTISEMENT

ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಉಂಟಾದ ಬೆಳೆ ಹಾನಿಯಿಂದಾಗಿ ಕೃಷಿ ಬದುಕಿನಲ್ಲಿ ಭರವಸೆ ಕಳೆದಕೊಂಡು, ಆರ್ಥಿಕ ಹೊರೆಯನ್ನು ತಾಳಲಾರದೆ ರೈತರು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ ಎಂಬುದನ್ನು ಈ ಅಂಕಿಅಂಶ ಸೂಚಿಸುವಂತಿದೆ. ಇದರ ಜತೆಗೆ ಕಳೆದ ಮೂರು ವರ್ಷಗಳಿಂದ ತೊಗರಿ ಬೆಳೆಗೆ ನೆಟೆ ರೋಗ ಕಾಡುತ್ತಿದ್ದು, ರೋಗಕ್ಕೆ ಶಾಶ್ವತ ಮದ್ದು ಸಿಗದೆ ರೈತರು ಕಂಗಾಲಾಗಿದ್ದಾರೆ.

‘ಮಳೆಯಾಶ್ರಿತ ಜಮೀನಿನನಲ್ಲಿ ತೊಗರಿ, ಹೆಸರು, ಉದ್ದು, ಜೋಳ, ಹತ್ತಿ, ಕಡಲೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಬಿತ್ತನೆ ಬೀಜ, ರಸಗೊಬ್ಬರ, ಉಳಿಮೆ, ಕೂಲಿಗಾಗಿ ಸಾಲ ಮಾಡಿ ತಂದಂತಹ ಹಣವನ್ನು ಖರ್ಚು ಮಾಡಿ, ದಿನ ಕಳೆದಂತೆ ಅದರ ಬಡ್ಡಿಯೂ ಹೆಚ್ಚಾಗುತ್ತದೆ. ನಿರೀಕ್ಷಿತ ಮಟ್ಟದಲ್ಲಿ ಫಸಲು ಬಾರದೆ, ಬೆಲೆಯೂ ಸಿಗದೆ ಹತಾಶೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದ ಖೇದನೀಯ’ ಎನ್ನುತ್ತಾರೆ ರೈತ ಮುಖಂಡರು.

12 ಪ್ರಕರಣಗಳು ಬಾಕಿ: ಕಂದಾಯ ಇಲಾಖೆಯ ಮಾಹಿತಿ ಅನ್ವಯ, 2023–24ರಲ್ಲಿನ 68 ಅರ್ಹ ರೈತರ ಆತ್ಮಹತ್ಯೆ ಪ್ರಕರಣಗಳ ಕುಟುಂಬಸ್ಥರಿಗೆ ಪರಿಹಾರ ಧನ ವಿತರಣೆ ಮಾಡಲಾಗಿದೆ. 2024–25ರಲ್ಲಿನ 38 ಅರ್ಹ ಪ್ರಕರಣಗಳಲ್ಲಿ 26 ರೈತರ ಕುಟುಂಬಸ್ಥರ ಪರಿಹಾರ ನೀಡಲಾಗಿದ್ದು, 12 ಪ್ರಕರಣಗಳು ಬಾಕಿ ಉಳಿದಿವೆ.

ನೆಟೆ ರೋಗದಿಂದ ಒಣಗಿದ ತೊಗರಿ (ಸಂಗ್ರಹ ಚಿತ್ರ)

‘ಆತ್ಮಹತ್ಯೆ ಪ್ರಕರಣ ಇಳಿಮುಖ’

‘ಈ ಹಿಂದೆ ವರ್ಷದಲ್ಲಿ 100ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಕಳೆದು ಎರಡ್ಮೂರು ವರ್ಷಗಳಿಂದ ಇಳಿಮುಖವಾಗುತ್ತಿದೆ. ಬೆಳೆ ಸಮೀಕ್ಷೆ ಕಿಟ ಸರ್ವೇಕ್ಷಣದಂತಹ ಕೆಲಸಕ್ಕೆ ಹಳ್ಳಿಗಳಿಗೆ ಹೋದಾಗ ರೈತರಿಗೆ ಆತ್ಮಸ್ಥೈರ್ಯನ್ನು ತುಂಬುವಂತಹ ಕೆಲಸ ಮಾಡುತ್ತಿದ್ದೇವೆ’ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕಳೆದ ವರ್ಷ 88 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ 63ಕ್ಕೆ ತಲುಪಿ ಇಳಿಕೆಯಾಗಿದ್ದು ಶೇ 30ರಷ್ಟು ಪ್ರಕರಣಗಳು ತಗ್ಗಿದೆ. ಈ ಹಿಂದಿನ ವರ್ಷ ₹736 ಕೋಟಿ ಅದಕ್ಕೂ ಮುನ್ನ ₹363 ಕೋಟಿ ಪರಿಹಾರವನ್ನು ರೈತರಿಗೆ ಕೊಡಿಸಿದ್ದೇವೆ. ಈ ವರ್ಷ ₹80 ಕೋಟಿ ಬೆಳೆ ವಿಮೆ ಪರಿಹಾರ ಹಾಗೂ ₹13 ಕೋಟಿ ಬೆಳೆ ಹಾನಿ ಪರಿಹಾರ ನೀಡಲಾಗಿದೆ. ಸರ್ಕಾರ ರೈತರ ನೆರವಿಗೆ ಸದಾ ನಿಂತಿರುತ್ತದೆ. ಅವರಿಗಾಗಿ ಹತ್ತಾರು ಯೋಜನೆಗಳು ನೇರ ನಗದು ಪರಿಹಾರವೂ ಕೊಡುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.