ADVERTISEMENT

ಟೇಕಾಫ್‌ ಆಗದ ನೂತನ ವಿಶ್ವವಿದ್ಯಾಲಯಗಳು!

ಮಾತೃ ವಿ.ವಿ.ಗಳಿಂದ ಇನ್ನೂ ಸಿಬ್ಬಂದಿ ಹಂಚಿಕೆ ಇಲ್ಲ; ವಿದ್ಯಾರ್ಥಿಗಳಿಗೆ ಅತಿಥಿ ಪ್ರಾಧ್ಯಾಪಕರೇ ಗತಿ

ಮನೋಜ ಕುಮಾರ್ ಗುದ್ದಿ
Published 12 ನವೆಂಬರ್ 2023, 20:01 IST
Last Updated 12 ನವೆಂಬರ್ 2023, 20:01 IST
ಕೊಪ್ಪಳ ವಿ.ವಿ. ಆರಂಭವಾಗಿರುವ ಕುಕನೂರು ತಾಲ್ಲೂಕಿನ ತಳಕಲ್‌ನ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಕಟ್ಟಡ
ಕೊಪ್ಪಳ ವಿ.ವಿ. ಆರಂಭವಾಗಿರುವ ಕುಕನೂರು ತಾಲ್ಲೂಕಿನ ತಳಕಲ್‌ನ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಕಟ್ಟಡ   

ಕಲಬುರಗಿ: ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸರ್ಕಾರ 2017ರಲ್ಲಿ ರಾಯಚೂರು ವಿಶ್ವವಿದ್ಯಾಲಯ ಹಾಗೂ ಹಿಂದಿನ ಬಿಜೆಪಿ ಸರ್ಕಾರ ತನ್ನ ಅವಧಿ ಮುಗಿಯುವ ಕೊನೆ ಗಳಿಗೆಯಲ್ಲಿ ಕೊಪ್ಪಳ ಹಾಗೂ ಬೀದರ್ ವಿಶ್ವವಿದ್ಯಾಲಯಗಳನ್ನು ರಚಿಸಿ ಆದೇಶ ಹೊರಡಿಸಿದೆ. ಇವುಗಳಿಗೆ ಇನ್ನೂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಸುಸಜ್ಜಿತ ಕಟ್ಟಡ, ಹೊಸ ಕೋರ್ಸ್‌ಗಳು ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಪರದಾಡುವಂತಾಗಿದೆ.

ನಾಲ್ಕು ದಶಕಗಳ ಹಿಂದೆ ಕಲ್ಯಾಣ ಕರ್ನಾಟಕದ ಏಕೈಕ ವಿಶ್ವವಿದ್ಯಾಲಯವಾಗಿ ಗುಲಬರ್ಗಾ ವಿ.ವಿ. ಆರಂಭವಾಯಿತು. ಅದಾದ ಬಳಿಕ ಸಂಶೋಧನಾ ಚಟುವಟಿಕೆಗಳಿಗೆಂದೇ ಹಂಪಿ ಕನ್ನಡ ವಿಶ್ವವಿದ್ಯಾಲಯ ಆರಂಭವಾಯಿತಾದರೂ ಪದವಿ ಕಾಲೇಜುಗಳ ಸಂಯೋಜನೆ ಹೊಂದಿರಲಿಲ್ಲ. ಹೀಗಾಗಿ, ಗುಲಬರ್ಗಾ ವಿ.ವಿ.ಯೇ ನಾಲ್ಕು ದಶಕ ಕಲ್ಯಾಣ ಕರ್ನಾಟಕದ ಸಾವಿರಾರು ಕಾಲೇಜುಗಳಿಗೆ ಸಂಯೋಜನೆಯನ್ನು ಹೊಂದಿತ್ತು. ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿ.ವಿ. ಹಾಗೂ ರಾಯಚೂರು ವಿಶ್ವವಿದ್ಯಾಲಯಗಳು ಆರಂಭಗೊಂಡ ಬಳಿಕ ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿ ಕಡಿಮೆಯಾಗುತ್ತ ಬಂತು. ಇತ್ತೀಚೆಗೆ ಹೊಸದಾಗಿ ಕೊಪ್ಪಳ, ಬೀದರ್ ವಿಶ್ವವಿದ್ಯಾಲಯಗಳು ಆರಂಭವಾಗಿದ್ದರಿಂದ ಗುಲ್ಬರ್ಗ ವಿ.ವಿ ವ್ಯಾಪ್ತಿ ಕಲಬುರಗಿ ಜಿಲ್ಲೆಗೆ ಮಾತ್ರ ಸೀಮಿತಗೊಂಡಂತಾಗಿದೆ.

ಗುಲಬರ್ಗಾ ವಿ.ವಿ.ಯಲ್ಲಿ ಶೇ 70ರಷ್ಟು ಕಾಯಂ ಸ್ವರೂಪದ ಬೋಧಕ, ಬೋಧಕೇತರ ಸಿಬ್ಬಂದಿಯ ಕೊರತೆ ಇದೆ. ಹೊಸ ಹುದ್ದೆಗಳನ್ನು ನೀಡುವಂತೆ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗಿದೆ. ಇನ್ನೂ ಬೋಧಕ ಸಿಬ್ಬಂದಿ ನೇಮಕಕ್ಕೆ ಅನುಮೋದನೆ ಸಿಕ್ಕಿಲ್ಲ.

ADVERTISEMENT

ಇದರ ಮಧ್ಯೆ ಹೊಸದಾಗಿ ಆರಂಭವಾದ ವಿ.ವಿ.ಗಳು ಹೆಸರಿಗೆ ಮಾತ್ರ ವಿ.ವಿ.ಗಳಾಗಿದ್ದು, ಇನ್ನೂ ಸ್ನಾತಕೋತ್ತರ ಕೇಂದ್ರಗಳ ಸ್ವರೂಪದಲ್ಲೇ ಕೆಲಸ ಮಾಡುತ್ತಿವೆ ಎಂಬ ಆರೋಪ ಶಿಕ್ಷಣ ಪ್ರೇಮಿಗಳಿಂದ ಕೇಳಿ ಬರುತ್ತಿದೆ.

ಕೊಪ್ಪಳ ವಿಶ್ವವಿದ್ಯಾಲಯವು ಜಿಲ್ಲೆಯ ಕುಕನೂರು ತಾಲ್ಲೂಕಿನ ತಳಕಲ್‌ನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕಟ್ಟಡದಲ್ಲಿ ಹಾಗೂ ಬೀದರ್ ವಿಶ್ವವಿದ್ಯಾಲಯವು ಸ್ನಾತಕೋತ್ತರ ಕೇಂದ್ರದ ಕಟ್ಟಡದಲ್ಲಿ ಕಳೆದ ಏಳು ತಿಂಗಳಿಂದ ಕಾರ್ಯನಿರ್ವಹಿಸುತ್ತಿವೆ.

ಕುಲಸಚಿವರಿಲ್ಲ: ವಿಶ್ವವಿದ್ಯಾಲಯದ ದೈನಂದಿನ ಆಡಳಿತವನ್ನು ನಡೆಸಿಕೊಂಡು ಹೋಗುವ ಆಡಳಿತ ಕುಲಸಚಿವರ ನೇಮಕ ಇನ್ನೂ ಆಗಿಲ್ಲ. ಕುಲಪತಿ ಹಾಗೂ ಮೌಲ್ಯಮಾಪನ ಕುಲಸಚಿವರ ನೇಮಕ ಮಾತ್ರ ಆಗಿದೆ. ಮೂಲ ವಿಶ್ವವಿದ್ಯಾಲಯದಲ್ಲಿದ್ದ ಆಯಾ ಜಿಲ್ಲೆಗಳ ಕಾಲೇಜುಗಳ ಸಂಯೋಜನೆಯನ್ನು ಬೀದರ್ ಹಾಗೂ ಕೊಪ್ಪಳ ವಿ.ವಿ.ಗಳಿಗೆ ನೀಡಲಾಗಿದೆ. ಪರೀಕ್ಷೆ, ಮೌಲ್ಯಮಾಪನ ಕೆಲಸಗಳು ಮೂಲ ವಿ.ವಿ.ಯ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಯ ನೆರವಿನಿಂದಲೇ ನಡೆಯಬೇಕಿದೆ.

ರಾಯಚೂರು, ಬೀದರ್ ಹಾಗೂ ಕೊಪ್ಪಳ ವಿ.ವಿ.ಗಳಿಗೆ ಗುಲಬರ್ಗಾ ವಿ.ವಿ.ಗೆ ಮಂಜೂರಾಗಿದ್ದ ಹುದ್ದೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಕೊಪ್ಪಳ ವಿ.ವಿ.ಗೆ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿ.ವಿ.ಯ ಕೆಲ ಹುದ್ದೆಗಳು ವರ್ಗಾವಣೆಯಾಗಲಿವೆ. ಆದರೆ, ಆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.

ಹೊಸ ವಿ.ವಿ.ಗೆ ಸದ್ಯಕ್ಕೆ ತಲಾ ₹ 2 ಕೋಟಿ ಮಾತ್ರ ಆಡಳಿತ ವೆಚ್ಚವೆಂದು ಹಂಚಿಕೆ ಮಾಡಲಾಗಿದೆ. ಉಳಿದಂತೆ ಹೊಸ ಹುದ್ದೆಗಳ ಸೃಜನೆ, ಹೊಸ ಕೋರ್ಸುಗಳ ಆರಂಭಕ್ಕೆ ಅನುಮತಿ ನೀಡಿಲ್ಲ ಎಂದು ವಿ.ವಿ.ಯ ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರ ನಿರಾಸಕ್ತಿ: ಹಿಂದಿನ ಬಿಜೆಪಿ ಸರ್ಕಾರ ಕೊನೆ ಗಳಿಗೆಯಲ್ಲಿ ಹೊಸದಾಗಿ ಏಳು ವಿ.ವಿ.ಗಳನ್ನು ರಚಿಸಿ ಆದೇಶ ಹೊರಡಿಸಿದ್ದರಿಂದ ಹೊಸದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಇವುಗಳ ಅಭಿವೃದ್ಧಿಗೆ ನೆರವು ನೀಡಲು ಯಾವುದೇ ಆಸಕ್ತಿ ಇಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇತ್ತೀಚೆಗೆ ಗುಲಬರ್ಗಾ ವಿ.ವಿ.ಗೆ ಭೇಟಿ ನೀಡಿದ್ದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು, ‘ಹಿಂದಿನ ಸರ್ಕಾರದ ಅವಧಿಯಲ್ಲಿ ಹಲವು ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದಿವೆ. ಅವುಗಳಿಗೆ ಅಗತ್ಯವಾದ ಹಣಕಾಸಿನ ನೆರವು, ಮೂಲಸೌಕರ್ಯ ಕಲ್ಪಿಸುವಲ್ಲಿ ಆಸಕ್ತಿ ತೋರಿಲ್ಲ. ಇದರಿಂದ ಹೊಸ ವಿಶ್ವವಿದ್ಯಾಲಯಗಳು ಆರ್ಥಿಕ ಸಂಕಷ್ಟದಲ್ಲಿವೆ’ ಎಂದಿದ್ದರು. ಅವುಗಳಿಗೆ ಮೂಲಸೌಕರ್ಯ ಕಲ್ಪಿಸುವ ಬಗ್ಗೆಯೂ ನಿರ್ದಿಷ್ಟ ಭರವಸೆ ನೀಡಿರಲಿಲ್ಲ.

ಒಂದು ಸ್ನಾತಕೋತ್ತರ ವಿಭಾಗ ಪೂರ್ಣಪ್ರಮಾಣದಲ್ಲಿ ಶುರುವಾಗಬೇಕಾದರೆ ಒಬ್ಬ ಪ್ರಾಧ್ಯಾಪಕರು, ಇಬ್ಬರು ಸಹ ಪ್ರಾಧ್ಯಾಪಕರು, ನಾಲ್ವರು ಸಹಾಯಕ ಪ್ರಾಧ್ಯಾಪಕರ ಅಗತ್ಯವಿದೆ. ಈ ಲೆಕ್ಕದಲ್ಲಿ ಸುಮಾರು 15 ವಿಭಾಗಗಳಿಗೆ 105 ಬೋಧಕ ಸಿಬ್ಬಂದಿ ಹಾಗೂ 200 ಬೋಧಕೇತರ ಸಿಬ್ಬಂದಿ ಅಗತ್ಯವಿದೆ. ಆರು ವರ್ಷಗಳ ಹಿಂದೆ ಆರಂಭವಾದ ರಾಯಚೂರು ವಿ.ವಿ.ಗೂ ಇಷ್ಟು ಪ್ರಮಾಣದ ಸಿಬ್ಬಂದಿಯನ್ನು ಒದಗಿಸಿಲ್ಲ. ಇನ್ನು ಹೊಸ ವಿ.ವಿ.ಗಳಿಗೆ ಯಾವುದೇ ಹೊಸ ಹುದ್ದೆಗಳ ಸೃಜನೆಯಾಗಿಲ್ಲ. ಹೀಗಾಗಿ, ವಿದ್ಯಾರ್ಥಿಗಳ ಕಲಿಕೆಗೆ ಸಾಕಷ್ಟು ಪೆಟ್ಟು ಬೀಳಲಿದೆ ಎನ್ನುತ್ತಾರೆ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಮುಖಂಡ, ರಾಯಚೂರಿನ ರಜಾಕ್ ಉಸ್ತಾದ್.

ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಿಂದ ಕೊಪ್ಪಳ ವಿ.ವಿ.ಗೆ ಕೆಲ ಸಿಬ್ಬಂದಿಯ ಹಂಚಿಕೆ ಆಗುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಿಬ್ಬಂದಿ ಬಂದ ಬಳಿಕ ಖಾಲಿ ಹುದ್ದೆಗಳ ಭರ್ತಿಗೆ ಪ್ರಸ್ತಾವ ಸಲ್ಲಿಸಲಿದ್ದೇವೆ -ಪ್ರೊ.ಬಿ.ಕೆ. ರವಿ ಕುಲಪತಿ ಕೊಪ್ಪಳ ವಿ.ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.