ADVERTISEMENT

ಆಳಂದ: ಜನ್ಮದಿನದಂದೇ ವಿದ್ಯಾರ್ಥಿನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 5:32 IST
Last Updated 31 ಜುಲೈ 2025, 5:32 IST
   

ಕಲಬುರಗಿ: ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ ವಿದ್ಯಾರ್ಥಿನಿಯೊಬ್ಬರು ತಮ್ಮ ಜನ್ಮದಿನದಂದೇ ಹಾಸ್ಟೆಲ್‌ ಕೊಠಡಿಯ ಫ್ಯಾನ್‌ಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿಎಸ್ಸಿ ಭೂಗರ್ಭವಿಜ್ಞಾನ ಪದವಿ ಅಂತಿಮ ವರ್ಷದ 5ನೇ ಸೆಮಿಸ್ಟರ್‌ ವಿದ್ಯಾರ್ಥಿನಿ, ಒಡಿಶಾ ಮೂಲದ ಜಯಶ್ರೀ ನಾಯಕ್‌ (21) ಮೃತರು. ಅವರು ವಿಶ್ವವಿದ್ಯಾಲಯದ ಯಮುನಾ ಹಾಸ್ಟೆಲ್‌ನ ಕೊಠಡಿ ಸಂಖ್ಯೆ ‘ಎ1’ರಲ್ಲಿ ನೆಲೆಸಿದ್ದರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಆಳಂದ ಡಿವೈಎಸ್ಪಿ ತಮ್ಮರಾಯ ಪಾಟೀಲ, ಸಿಪಿಐ ಪ್ರಕಾಶ ಯಾತನೂರ, ನಿಂಬರ್ಗಾ ಠಾಣೆ ಪಿಎಸ್‌ಐ ಇಂದುಮತಿ ಪಾಟೀಲ ಹಾಗೂ ನರೋಣಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ADVERTISEMENT

‘ಸಹ ವಿದ್ಯಾರ್ಥಿಗಳು ಕರೆದರೂ ಜಯ‌ಶ್ರೀ ಬುಧವಾರ ತರಗತಿಗೆ ಹಾಜರಾಗಿರಲಿಲ್ಲ. ವಿದ್ಯಾರ್ಥಿಗಳು ಮಧ್ಯಾಹ್ನ ಹೊತ್ತಿಗೆ ತರಗತಿಗಳಿಂದ ಊಟಕ್ಕೆ ಮರಳಿದಾಗ ಆತ್ಮಹತ್ಯೆ ಸಂಗತಿ ಬೆಳಕಿಗೆ ಬಂದಿದೆ’ ಎಂದು ಮೂಲಗಳು ಹೇಳಿವೆ.

‘ಮೃತ ವಿದ್ಯಾರ್ಥಿನಿ ಪೋಷಕರು ಓಡಿಶಾದಿಂದ ಹೊರಟ್ಟಿದ್ದು, ಅವರು ನೀಡುವ ದೂರು ಆಧರಿಸಿ ಮುಂದಿನ ತನಿಖೆ ಕೈಗೊಳ್ಳಲಾಗುವುದು. ಸದ್ಯ ಮೃತದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದೆ’ ಎಂದು ಎಸ್‌.ಪಿ ಅಡ್ಡೂರು ಶ್ರೀನಿವಾಸುಲು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.