ಕಲಬುರಗಿ: ‘ವಚನ ಸಂಶೋಧನಾ ಪಿತಾಮಹ ಫ.ಗು.ಹಳಕಟ್ಟಿ ಅವರು ಪರಿಶ್ರಮದಿಂದ ಬಸವಾದಿ ಶರಣರ ವಚನ ಸಾಹಿತ್ಯ ಸಂರಕ್ಷಿಸಿದರು. ಅವರಿಂದಾಗಿ ವಚನ ಸಾಹಿತ್ಯ ಮರು ಹುಟ್ಟು ಪಡೆಯಿತು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಬಾಬಣ್ಣ ಹೂವಿನಭಾವಿ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಕಸಾಪ ಜಿಲ್ಲಾ ಘಟಕ ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಜಂಟಿಯಾಗಿ ಭಾನುವಾರ ಆಯೋಜಿಸಿದ್ದ 2025ನೇ ಸಾಲಿನ ವಚನ ಪಿತಾಮಹ ಫ.ಗು.ಹಳಕಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಹಳಕಟ್ಟಿ ಅವರು ಇಡೀ ಜೀವನವೇ ವಚನಗಳ ಸಂಗ್ರಹಿಸಿ ಮುದ್ರಿಸಿ ಪ್ರಚಾರ ಮಾಡುವುದಾಗಿತ್ತು. ಅವರು ಅಂದು ವಚನ ಸಾಹಿತ್ಯ ಸಂರಕ್ಷಿಸದಿದ್ದರೆ ಇಂದು ಓದಲು ಸಾಧ್ಯವಾಗುತ್ತಿರಲಿಲ್ಲ’ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ‘ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಕೀರ್ತಿ ಹೆಚ್ಚಿಸಿದ ಶ್ರೇಯ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.
ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ, ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಸಂದೀಪ ಹರಷಿಣಿಗಿ, ಹೂಗಾರ ಸಮಾಜದ ಮುಖಂಡ ಸೂರ್ಯಕಾಂತ ಫುಲಾರಿ, ರಾಜೀವಗಾಂಧಿ ವಿಶ್ವವಿದ್ಯಾಲಯದ ಸಿನೆಟ್ ಸದಸ್ಯ ಡಾ.ಅರವಿಂದ ಕಟ್ಟಿ ಮಾತನಾಡಿದರು.
ಪ್ರಶಸ್ತಿ ಪುರಸ್ಕೃತರು: ಬಸವಾದಿ ಶರಣರ ಅನುಯಾಯಿಗಳಾದ ವಿಶ್ವನಾಥ ಮಂಗಲಗಿ, ಅಮೃತರಾವ ಪಾಟೀಲ ಅಫಜಲಪುರ, ಮರಿಯಪ್ಪ ಹಳ್ಳಿ ಶಹಾಬಾದ್, ಡಾ.ಶಿವಲೀಲಾ ಚಟ್ನಳ್ಳಿ, ಲಕ್ಷ್ಮೀಕಾಂತ ಹುಬಳಿ, ಶಿವಲಿಂಗಪ್ಪ ಅಷ್ಟಗಿ, ಡಾ.ಗೌಸುದ್ದೀನ್ ತುಮಕೂರಕರ್, ನಾಗೇಂದ್ರಪ್ಪ ನಿಂಬರ್ಗಿ, ಸಿದ್ಧರಾಮ ಯಳವಂತಗಿ, ಕಾವೇರಿ ಪಾಟೀಲ ಅವರಿಗೆ ಫ.ಗು.ಹಳಕಟ್ಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾ ಕಸಾಪದ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್.ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಅಕಾಡೆಮಿ ಅಧ್ಯಕ್ಷ ಬಿ.ಎಂ.ಪಾಟೀಲ ಕಲ್ಲೂರ, ಸಿದ್ಧಲಿಂಗ ಬಾಳಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ನಾಗಪ್ಪ ಸಜ್ಜನ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.