ಆಳಂದ: ‘ಬ್ಯಾಂಕ್, ಮೈಕ್ರೋ ಫೈನಾನ್ಸ್ ಗಳ ಸಾಲದ ಹೊರೆಯಿಂದ ರೈತರೂ, ಕಾರ್ಮಿಕರು ಹಾಗೂ ಸ್ವಯಂ ಉದ್ಯೋಗಿಗಳನ್ನು ಬಿಡುಗಡೆಗೊಳಿಸಲ ಸಿಪಿಐ ಮತ್ತಿತರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ರೂಪಿಸಲಾಗುವುದು’ ಎಂದು ಸಿಪಿಐ ರಾಜ್ಯ ಸಮಿತಿ ಸದಸ್ಯ ಮೌಲಾ ಮುಲ್ಲಾ ತಿಳಿಸಿದರು.
ಪಟ್ಟಣದ ಸಿಪಿಐ ಪಕ್ಷದ ಕಚೇರಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ದೇಶದಲ್ಲಿ ಶೇ 80 ರಷ್ಟು ಜನರು ಸಾಲದ ಸುಳಿಗೆ ಸಿಲುಕಿದ್ದಾರೆ. ಮೈಕ್ರೋ ಫೈನಾನ್ಸ್‌ಗಳು, ಬ್ಯಾಂಕ್‌ಗಳು ಕಡಿಮೆ ಬಡ್ಡದರದಲ್ಲಿ ನೀಡುವ ಸಾಲವು ಯಾವದೇ ನೆರವಿಗೆ ಬರುತ್ತಿಲ್ಲ. ಸಣ್ಣಪ್ರಮಾಣದ ಸಾಲದ ಮೊತ್ತವು ಹೆಚ್ಚಿಸಬೇಕು, ಬಡ್ಡಿರಹಿತ ಆರ್ಥಿಕ ನೆರವು ಒದಗಿಸಲು ಆಗ್ರಹಿಸಿ ದೇಶವ್ಯಾಪಿ ಹೋರಾಟ ಕೈಗೊಳ್ಳಲಾಗುವುದು’ ಎಂದರು.
ಕಿಸಾನ ಸಭಾ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರೂ, ಕಾರ್ಮಿಕರ ಹಿತ ಕಾಪಾಡುವಲ್ಲಿ ವಿಫಲವಾಗಿವೆ. ನೌಕರರು, ಕಾರ್ಮಿಕರಿಗೆ ಕನಿಷ್ಠವೇತನ ಇಲ್ಲ. ಆದರೆ ಕೆಲಸದ ಅವಧಿ ಹೆಚ್ಚಳಕ್ಕೆ ಮುಂದಾಗಿದೆ. ರೈತರು, ಕಾರ್ಮಿಕರ ವಿವಿಧ ಬೇಡಿಕೆಗೆ ಹೋರಾಟ ರೂಪಿಸಲು ಈ ಸಮಾವೇಶ ದಿಕ್ಸೂಚಿಯಾಗಲಿದೆ’ ಎಂದರು.
ತಾಲ್ಲೂಕು ಸಮಾವೇಶ ಸಿದ್ದತೆ ನಿಮಿತ್ತ ನಿಂಬರ್ಗಾ, ಖಜೂರಿ, ಮಾದನ ಹಿಪ್ಪರಗಿ ವಲಯದ ವಿವಿಧ ಗ್ರಾಮಗಳಲ್ಲಿ ಸಿಪಿಐ ಹಾಗೂ ಕಿಸಾನ ಸಭಾ ಶಾಖೆಗಳ ಪದಾಧಿಕಾರಿಗಳ ನೇಮಕ ಮತ್ತು ಸಭೆ ನಡೆಸಲಾಯಿತು.
ಹೋರಾಟಗಾರ ಕಲ್ಯಾಣಿ ತುಕಾಣೆ, ಪಂಡಿತ ಸಲಗರೆ, ಅಸ್ಪಾಕ್ ಮುಲ್ಲಾ, ದತ್ತಾತ್ರೇಯ ಕಬಾಡೆ, ಶಿರಾಜ್ ಖಾಜಿ, ರಾಜಶೇಖರ ಬಸ್ಮೆ, ಚಂದ್ರಕಾಂತ ಕೋಬರೆ ಉಪಸ್ಥಿತರಿದ್ದರು.
ಸಮಾವೇಶ ಜು.16 ರಂದು
‘ಸಿಪಿಐ ತಾಲ್ಲೂಕು ಸಮಾವೇಶವು ಜುಲೈ 16 ರಂದು ಬೆಳಿಗ್ಗೆ 11ಕ್ಕೆ ಆಳಂದ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಪಟ್ಟಣದ ಗುರುಭವನದಿಂದ ಶಾಹೀನ್ ಪಂಕ್ಷನ್ ಹಾಲ್ ವರೆಗೆ ಕಾರ್ಯಕರ್ತರ ನೇತೃತ್ವದಲ್ಲಿ ಸಂಘಟನಾ ಜಾಥಾ ಜರುಗಲಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಪ್ರಭುದೇವ ಯಳಸಂಗಿ ತಿಳಿಸಿದರು. ‘ಸಮಾವೇಶವನ್ನು ರಾಜ್ಯ ಕಾರ್ಯದರ್ಶಿ ಬಿ.ಅಮ್ಜದ್ ಉದ್ಘಾಟಿಸಲಿದ್ದು ತಾಲ್ಲೂಕು ಕಾರ್ಯದರ್ಶಿ ಮೈಲಾರಿ ಜೋಗೆ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ ಮೌಲಾ ಮುಲ್ಲಾ ಪ್ರಭುದೇವ ಯಳಸಂಗಿ ಭೀಮಾಶಂಕರ ಮಾಡಿಯಾಳ ಪದ್ಮಾವತಿ ಮಾಲಿಪಾಟೀಲ ಭಾಗವಹಿಸಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.