ADVERTISEMENT

ಕಲಬುರಗಿ: ‘ಹೋರಾಟಗಾರರು ರಾಜಕೀಯ ಪಕ್ಷಗಳ ಕೈಗೊಂಬೆಯಾಗಬಾರದು’

​ಪ್ರಜಾವಾಣಿ ವಾರ್ತೆ
Published 22 ಮೇ 2025, 13:22 IST
Last Updated 22 ಮೇ 2025, 13:22 IST
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಕಲಬುರಗಿಯಲ್ಲಿ ಆಯೋಜಿಸಿದ್ದ ಶೋಷಿತ ಜನಜಾಗೃತಿ ವೇದಿಕೆಯ ನೂತನ ಜಿಲ್ಲಾಧ್ಯಕ್ಷ ಲಕ್ಕಪ್ಪ ಎಸ್. ಜವಳಿ ಅವರನ್ನು ಸನ್ಮಾನಿಸಲಾಯಿತು. ದಶರಥ ಕಲಗುರ್ತಿ, ಬಸವರಾಜ ಜವಳಿ ಇತರರು ಭಾಗವಹಿಸಿದ್ದರು
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಕಲಬುರಗಿಯಲ್ಲಿ ಆಯೋಜಿಸಿದ್ದ ಶೋಷಿತ ಜನಜಾಗೃತಿ ವೇದಿಕೆಯ ನೂತನ ಜಿಲ್ಲಾಧ್ಯಕ್ಷ ಲಕ್ಕಪ್ಪ ಎಸ್. ಜವಳಿ ಅವರನ್ನು ಸನ್ಮಾನಿಸಲಾಯಿತು. ದಶರಥ ಕಲಗುರ್ತಿ, ಬಸವರಾಜ ಜವಳಿ ಇತರರು ಭಾಗವಹಿಸಿದ್ದರು   

ಕಲಬುರಗಿ: ‘ಹೋರಾಟಗಾರರು ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಯಾಗಬಾರದು. ಬುದ್ಧ, ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳ ಮೇಲೆ ಗಟ್ಟಿಯಾದ ಹೋರಾಟ ಮಾಡಿದಾಗ ಮಾತ್ರ ದಲಿತರ ಮೇಲಾಗುವಂತಹ ದೌರ್ಜನ್ಯಗಳನ್ನು ತಡೆಯಲು ಸಾಧ್ಯ’ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ದಶರಥ ಕಲಗುರ್ತಿ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಮಾಜಿಕ ನ್ಯಾಯಕ್ಕಾಗಿ) ವತಿಯಿಂದ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಶೋಷಿತ ಜನಜಾಗೃತಿ ವೇದಿಕೆಯ ನೂತನ ಜಿಲ್ಲಾಧ್ಯಕ್ಷ ಲಕ್ಕಪ್ಪ ಎಸ್. ಜವಳಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಓದು, ಬರಹ ಕಲಿತ ಶಿಕ್ಷಣವಂತರು ಸಮುದಾಯದ ಕಡೆಗೆ ನೋಡಬೇಕು. ಅಂದಾಗ ಮಾತ್ರ ದಲಿತ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮೇಲೆ ಬರಲು ಸಾಧ್ಯ’ ಎಂದರು.

ADVERTISEMENT

ಮುಖ್ಯ ಅತಿಥಿಯಾಗಿ ಮಾತನಾಡಿದ ದಲಿತ ಮಾದಿಗ ಸಮನ್ವಯ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ, ‘ಅನ್ಯಾಯ ನಡೆದಾಗ ನೀವು ತಟಸ್ಥರಾಗಿ ಉಳಿದರೆ ಶೋಷಕರ ಪರವಾಗಿ ಇದ್ದೀರಿ ಎಂದು ಅರ್ಥ. ಡಾ.ಅಂಬೇಡ್ಕರ್ ಅವರ ಆಸೆಯಂತೆ 70ರ ದಶಕದ ಪ್ರೊ.ಬಿ. ಕೃಷ್ಣಪ್ಪನವರ ಹೋರಾಟ ಶಕ್ತಿ ಮರು ಸ್ಥಾಪನೆಯಾಗಬೇಕು. ಆವಾಗ ಮಾತ್ರ ದಲಿತರ ಮೇಲಿನ ದೌರ್ಜನ್ಯ ಮತ್ತು ಹೆಣ್ಣು ಮಕ್ಕಳ ಮೇಲಾಗುತ್ತಿರುವ ಅತ್ಯಾಚಾರ ತಡೆಯಲು ಸಾಧ್ಯ’ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಲಕ್ಕಪ್ಪ ಎಸ್. ಜವಳಿ, ‘ಸಮುದಾಯದ ನೊಂದ ಜನರಿಗೆ ಕಣ್ಣೊರೆಸುವ ಕೆಲಸ ಮಾಡಿ ಸಮುದಾಯಕ್ಕೂ ಕೆಟ್ಟ ಹೆಸರು ಬಾರದಂತೆ ಮಾದರಿಯಾಗುವಂತಹ ಹೋರಾಟ ನಡೆಸಲಾಗುವುದು’ ಎಂದರು. 

ಸಮಾಜ ಚಿಂತಕ ಮಾಣಿಕರಾವ ಕಟ್ಟಿಮನಿ, ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಯುವ ಮುಖಂಡರಾದ ರಾಜು ಹದನೂರ, ಗುರುರಾಜ ಭಂಡಾರಿ, ಮಾದಿಗ ಸಮಾಜದ ಜಿಲ್ಲಾ ಮುಖಂಡರಾದ ಶರಣು ಸಗರಕರ, ಗಣೇಶ ಕಟ್ಟಿಮನಿ, ಸಚಿನ ಕಟ್ಟಿಮನಿ, ಜಿಲ್ಲಾ ಕಾಂಗ್ರೆಸ್ ಯುವ ಮುಖಂಡರಾದ ಪರಶುರಾಮ ನಾಟಿಕರ, ಅಲೆಮಾರಿ ಸಂಘದ ಜಿಲ್ಲಾ ಮುಖಂಡರಾದ ಶರಣಬಸಪ್ಪ ಭಜಂತ್ರಿ, ರಂಜಿತ ಮೂಲಿಮನಿ, ಅಮೃತ ಕೊರಳ್ಳಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.