ADVERTISEMENT

ಪರೀಕ್ಷಾ ಅಕ್ರಮ: ಗುಲಬರ್ಗಾ ವಿವಿ ಕುಲಸಚಿವೆ ಸೇರಿ ಐವರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 7:35 IST
Last Updated 6 ಆಗಸ್ಟ್ 2024, 7:35 IST
   

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಇಡಿ ಪರೀಕ್ಷೆಗೆ ಹೊರ ರಾಜ್ಯದ ನಕಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ ಆರೋಪದಡಿ ವಿವಿಯ ಮೌಲ್ಯಮಾಪನ ಕುಲಸಚಿವೆ ಸೇರಿ ಐವರ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಗರಾಜ ಹಣಮಂತರಾಯ ಅವರು ನೀಡಿದ ದೂರಿನ ಅನ್ವಯ, ಮೌಲ್ಯಮಾಪನ ಕುಲಸಚಿವೆ ಮೇಧಾವಿನಿ ಕಟ್ಟಿ, ಅಲ್‌ಬದರ್ ಕಾಲೇಜಿನ ಪ್ರಾಂಶುಪಾಲ ಮಲ್ಲಮ್ಮ ಮಂಠಾಳೆ, ಬಿ.ಇಡಿ ವಿಷಯ ನಿರ್ವಹಕ ಸ್ವರೂಪ ಭಟ್ಟರ್ಕಿ, ಲಿಖಿತ ಪರೀಕ್ಷೆ ಹಿರಿಯ ಮೇಲ್ವಿಚಾರಕ ಮೌನೇಶ ಅಕ್ಕಿ ಮತ್ತು ಇಂದಿರಾ ಗಾಂಧಿ ಬಿ.ಇಡಿ ಕಾಲೇಜು ಅಧ್ಯಕ್ಷ ಮೌಲಾ ಪಟೇಲ್‌ ವಿರುದ್ಧ ಬಿಎನ್‌ಎಸ್‌ ಸೆಕ್ಷನ್ 319 (2), 318 (4), 336 (2) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2024ನೇ ಸಾಲಿನ ಜುಲೈ 1ರಿಂದ 7ರ ವರೆಗೆ ನಡೆದ ಬಿ.ಇಡಿ ಪರೀಕ್ಷೆಯ ಅಲ್‌ ಬದರ್ ಕಾಲೇಜಿನಲ್ಲಿ ಅಕ್ರಮವಾಗಿ ಹೊರ ರಾಜ್ಯದ 100 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ನ್ಯಾಯಾಲಯದ ಆದೇಶದ ಪ್ರಕಾರ, ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ 24ಸಿ46501ರಿಂದ 24ಸಿ46522 ವರೆಗಿನ (22 ವಿದ್ಯಾರ್ಥಿ) ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿಸಲಾಗಿತ್ತು. ಈ ಆದೇಶ ಉಲ್ಲಂಘಿಸಿ 24ಸಿ46501ರಿಂದ 24ಸಿ46600ವರೆಗೆ ನಕಲು ನೋಂದಣಿ ಸಂಖ್ಯೆಗಳ ಮೇಲೆ ಪರೀಕ್ಷೆ ಬರೆಯಲು ಅವಕಾಶ ನೀಡಿ, ಸರ್ಕಾರ ಮತ್ತು ವಿದ್ಯಾರ್ಥಿಗಳಿಗೆ ವಂಚಿಸಲಾಗಿದೆ ಎಂದು ದೂರನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಪರೀಕ್ಷೆ ಮುಗಿಯುವ ಅರ್ಧ ಗಂಟೆ ಮೊದಲೇ ವಿದ್ಯಾರ್ಥಿಗಳು ಹೊರ ಬರುತ್ತಿದ್ದರು. ಅವರ ಕೈಯಲ್ಲಿನ ಪ್ರವೇಶ ಪತ್ರಗಳು ಪರಿಶೀಲಿಸಿದಾಗ ಕೈ ಬರಹದಲ್ಲಿ ಇರುವುದು ಕಂಡುಬಂತು. ಯುಜಿಸಿ ಪ್ರಕಾರ ಯುಯುಸಿಎಂಎಸ್‌ನಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ಪ್ರವೇಶ ಪತ್ರ ನೀಡಬೇಕು ಎಂಬ ನಿಯಮವಿದೆ. ಆದರೆ, ಕೈ ಬರಹದ ಪ್ರವೇಶ ಪತ್ರ ನೋಡಿದರೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಕಂಡುಬರುತ್ತಿದೆ ಎಂದು ಆರೋಪಿಸಿ ನಾಗರಾಜ ಅವರು ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.