ADVERTISEMENT

ಯಡ್ರಾಮಿ: ಪಿಡಿಒ ವಿರುದ್ಧ ಕ್ರಿಮಿನಲ್‌ ಪ್ರಕರಣ

ಪತ್ನಿಯ ಬಳ್ಳಾರಿ ಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಮಾಡಿಕೊಂಡಿದ್ದ ನಾಗಪ್ಪ ಹೈಯಾಳ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 11:23 IST
Last Updated 2 ಮಾರ್ಚ್ 2020, 11:23 IST
ಪಿಡಿಓ ನಾಗಪ್ಪ ಹೈಯಾಳ
ಪಿಡಿಓ ನಾಗಪ್ಪ ಹೈಯಾಳ   

ಯಡ್ರಾಮಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಯಲಗೋಡ ಹಾಗೂ ಸಾತಖೇಡ ಗ್ರಾಮ ಪಂಚಾಯಿತಿಗಳಲ್ಲಿ ₹ 1.10 ಕೋಟಿಗೂ ಅಧಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇರೆಗೆಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನಾಗಪ್ಪ ಹೈಯ್ಯಾಳ ವಿರುದ್ಧ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಈ ಎರಡು ಗ್ರಾ.ಪಂ. ಗಳಲ್ಲಿ ಹಣ ದುರ್ಬಳಕೆ ಮಾಡಿಕೊಂಡ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಡಾ.ರಾಜಾ ಪಿ. ಅವರಿಗೆ ಗ್ರಾಮಸ್ಥರು ಅನೇಕ ಬಾರಿ ಮನವಿ ನೀಡಿ ತನಿಖೆಗೆ ಒತ್ತಾಯಿಸಿದ್ದರು. ಪ್ರಾಥಮಿಕ ತನಖೆಯಲ್ಲಿ ಹಣದ ಅವ್ಯವಹಾರ ಕಂಡು ಬಂದಿದ್ದರಿಂದ ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶಿಸಿದ್ದರು. ಇದರನ್ವಯ ಯಡ್ರಾಮಿ ಠಾಣೆಯಲ್ಲಿ ಪಿಡಿಒ ವಿರುದ್ಧ ವಂಚನೆ ಹಾಗೂ ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಯಲಗೋಡ ಹಾಗೂ ಸಾತಖೇಡ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಮಯದಲ್ಲಿ ಪಿಡಿಒ ಮತ್ತು ಅಧ್ಯಕ್ಷರು ಸೇರಿ ಹಣದ ದುರುಪಯೋಗ ಪಡಿಸಿಕೊಂಡಿದ್ದಾರೆ. ಬಸಮ್ಮ ಜವಳಗಾ ಅವರು ಅಧ್ಯಕ್ಷೆ ಇದ್ದರೂ ಬಹುತೇಕ ಚೆಕ್‌ಗಳ ಮೇಲೆ ಅವರ ಪತಿ ಬಾಪುಗೌಡ ಸಹಿ ಇದೆ ಎಂಬುದು ಗೊತ್ತಾಗಿದೆ.

ADVERTISEMENT

ಯಲಗೋಡ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಎರಡು ಅಂಗನವಾಡಿ ಕಟ್ಟಡದ ಅನುದಾನ ₹ 36 ಲಕ್ಷ ಹಾಗೂ ಸಾತಖೇಡ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಅನುದಾನ ₹ 18 ಲಕ್ಷ, 14ನೇ ಹಣಕಾಸು ಯೋಜನೆಯಡಿಯಲ್ಲಿ ₹ 22 ಲಕ್ಷ, ಕರವಸೂಲಿಯ ಹಣ ಸೇರಿದಂತೆ ಪಂಚಾಯಿತಿಗೆ ಜಮಾಗೊಂಡ ಎಲ್ಲ ಖಾತೆಗಳ ಹಣವನ್ನು ನಾಗಪ್ಪ ತಮ್ಮ ಪತ್ನಿಯ ಬಳ್ಳಾರಿ ಜಿಲ್ಲೆಯ ಬ್ಯಾಂಕ್‍ನಲ್ಲಿ ಡ್ರಾ ಮಾಡಿಕೊಂಡಿದ್ದಾರೆ. ಹೀಗೆ ಹಲವಾರು ಯೋಜನೆಗಳಲ್ಲಿ ₹ 1.10 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಪಿಡಿಒ ಹೆಸರು ಮತ್ತು ತನ್ನ ಪತ್ನಿಯ ಹೆಸರಿನ ಮೇಲೆ ಅವ್ಯವಹಾರ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಯಲಗೋಡ, ಸಾತಖೇಡ ಎರಡು ಗ್ರಾಮ ಪಂಚಾಯಿತಿಗಳ ಬ್ಯಾಂಕ್ ಖಾತೆಗಳ ಹಣಕಾಸಿನ ವ್ಯವಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸಂಬಂಧಿಸಿದ ಬ್ಯಾಂಕ್‍ಗಳ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿದ್ದು ಇದರ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಮಾಹಿತಿ ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರದಲ್ಲಿ ತಿಳಿಸಲಾಗಿದೆ.

ನಾಗಪ್ಪ ಹೈಯ್ಯಾಳ ಹಣಕಾಸಿನ ಅವ್ಯವಹಾರ ಮಾಡಿರುವುದು ಮೇಲ್ನೊಟಕ್ಕೆ ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಬಾಕಿ ಇಟ್ಟು ಈಗಾಗಲೇ ಅಮಾನತ್ತಿನಲ್ಲಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.