ಕಲಬುರಗಿ: ಇಲ್ಲಿನ ಹೈದರಾಬಾದ್ ಶಿಕ್ಷಣ ಸಂಸ್ಥೆಯ (ಎಚ್‌ಕೆಇ) ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ (ಎಂಆರ್‌ಎಂಸಿ) ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಸ್ಟೈಫಂಡ್, ಸೀಟು ಹಂಚಿಕೆ ಸಂಬಂಧ ₹65.17 ಕೋಟಿ ದುರ್ಬಳಕೆ ಮಾಡಿಕೊಂಡ ಆರೋಪದಡಿ ಸಂಸ್ಥೆಯ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂಸ್ಥೆಯ ಸದಸ್ಯ, ವಕೀಲ ಪ್ರದೀಪ್ ಸಂಗಪ್ಪ ಅವರು ನೀಡಿದ ದೂರಿನ ಅನ್ವಯ, ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಶಶೀಲ್ ಜಿ.ನಮೋಶಿ, ಮಾಜಿ ಅಧ್ಯಕ್ಷ ಬಸವರಾಜ ಶಿವಶರಣಪ್ಪ ಭೀಮಳ್ಳಿ, ಕಾಲೇಜಿನ ಮಾಜಿ ಡೀನ್‌ಗಳಾದ ಡಾ.ಮಲ್ಲಿಕಾರ್ಜುನ ಬಂಡಾರಿ, ಡಾ.ಸಾಯಿನಾಥ ಕೆ. ಆಂದೋಲ ಹಾಗೂ ಡಾ.ಶರಣಬಸಪ್ಪ ಆರ್. ಹರವಾಳ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಐವರು ಆರೋಪಿಗಳ ಅವಧಿಯ 2009ರ ಏಪ್ರಿಲ್ 1ರಿಂದ 2018ರ ಮಾರ್ಚ್ 31ರ ನಡುವೆ ಎಂಆರ್‌ಎಂಸಿ ಕಾಲೇಜಿನ ಪಿಜಿ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಹಣ ಪಾವತಿಸಿಲ್ಲ. ಕಾಯ್ದಿರಿಸಿದ ಅಭ್ಯರ್ಥಿಗಳ ಕಾಲೇಜಿನ ಸೀಟ್‌ಗಳನ್ನು ಕೆಲವು ವಿದ್ಯಾರ್ಥಿಗಳಿಗೆ ಹಣ ವಾಪಸ್ ಮಾಡಿದ್ದಾರೆ. ಮತ್ತೆ ಕೆಲವು ವಿದ್ಯಾರ್ಥಿಗಳಿಗೆ ಹಣ ವಾಪಸ್ ಕೊಡದೆ, ಹೆಚ್ಚಿನ ಹಣಕ್ಕೆ ಬೇರೆ ಅಭ್ಯರ್ಥಿಗಳಿಗೆ ಮಾರಾಟ ಮಾಡಿ ಸಂಸ್ಥೆಯ ಸುಮಾರು ₹65.17 ಕೋಟಿಯನ್ನು ಸ್ವಂತಕ್ಕೆ ಬಳಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
2018ರಿಂದ 2024ರವರೆಗೆ 282 ಪಿಜಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೇರಬೇಕಿದ್ದ ₹ 81.21 ಕೋಟಿ ಸ್ಟೈಫಂಡ್ ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಮಾಜಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಸೇರಿ ನಾಲ್ವರ ವಿರುದ್ಧವೂ ಈ ಹಿಂದೆ ದೂರು ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.