ADVERTISEMENT

ರಮೇಶ ಸಂಗಾ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 2:55 IST
Last Updated 7 ಮಾರ್ಚ್ 2021, 2:55 IST

ಕಲಬುರ್ಗಿ: ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ನಿಯಮಗಳನ್ನು ಮೀರಿ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡ ಆರೋಪ ಎದುರಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಮೇಶ ಸಂಗಾ ಅವರ ವಿರುದ್ಧ ಇಲ್ಲಿನ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಶನಿವಾರ ಎಫ್‌ಐಆರ್‌ ದಾಖಲಿಸಲಾಗಿದೆ.

ಕಲಬುರ್ಗಿಯ ಗ್ರೇಡ್‌–2 ತಹಶೀಲ್ದಾರ್‌ ಜಗನ್ನಾಥ ಅವರು ದೂರು ಸಲ್ಲಿಸಿದ್ದು ‘ವಿಪತ್ತು ನಿರ್ವಹಣಾ ಕಾಯ್ದೆ–2005’ರ ಉಲ್ಲಂಘನೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ರಮೇಶ ಸಂಗಾ ಅವರು 2020ರ ಜುಲೈ 10ರಂದು ಹಾಸ್ಟೆಲ್‌ನಲ್ಲಿ 50 ಜನರನ್ನು ಸೇರಿಸಿ, ಬ್ಯಾನರ್‌ ಹಾಕಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆಗ ಕೋವಿಡ್‌ ಲಾಕ್‌ಡೌನ್‌ ನಿಯಮಗಳು ಜಾರಿಯಲ್ಲಿದ್ದರೂ ಅವುಗಳನ್ನು ಉಲ್ಲಂಘಿಸಿ ಕಾರ್ಯಕ್ರಮ ನಡೆಸಿದ್ದಾರೆ. ಅವರ ಮೇಲೆ ಕ್ರಮಕೈಗೊಳ್ಳಬೇಕು’ ಎಂದು ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಕಲಬುರ್ಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ಕೋವಿಡ್–19 ನಿಯಮ ಉಲ್ಲಂಘನೆ ಮಾಡಿದ್ದರಿಂದ ರಮೇಶ ಸಂಗಾ ಅವರ ಮೇಲೆ ರಾಷ್ಟ್ರೀಯ ವಿಪ್ಪತ್ತು ನಿಯಂತ್ರಣ ಕಾಯ್ದೆ ಅಡಿಯಲ್ಲಿ, ಆದೇಶ ಬಂದ 15 ದಿನಗಳ ಒಳಗಾಗಿ ಪ್ರಕರಣ ದಾಖಲಿಸುವಂತೆ ಹೈಕೋರ್ಟ್‌ ಆದೇಶದಲ್ಲಿ ತಿಳಿಸಿತ್ತು. ಅದರ ಪ್ರಕಾರ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.