ಸೇಡಂ: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿಯಲ್ಲಿ ಇತ್ತೀಚೆಗೆ ವಿತರಿಸಿದ ತ್ರಿಚಕ್ರ ವಾಹನದ ಪೆಟ್ರೋಲ್ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಫಲಾನುಭವಿ ಹಾಗೂ ಅವರ ಸಹೋದರ ಗಾಯಗೊಂಡ ಘಟನೆ ಸೇಡಂ-ರಿಬ್ಬನಪಲ್ಲಿ ರಸ್ತೆಯ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಬಳಿ ಮಂಗಳವಾರ ನಡೆದಿದೆ.
ತಾಲ್ಲೂಕಿನ ಸೀತ್ಯಾನಾಯಕ ತಾಂಡಾ ನಿವಾಸಿ ಹಾಗೂ ಫಲಾನುಭವಿ ಅನ್ನಿಬಾಯಿ ಮೆಗ್ಯಾನಾಯಕ (32) ಮತ್ತು ಸಹೋದರ ಪಾಟೀಲ ಮಂಗ್ಯಾನಾಯಕ (31) ಗಾಯಗೊಂಡಿದ್ದಾರೆ. ಕಲಬುರಗಿಯಲ್ಲಿ ಇತ್ತೀಚೆಗೆ ನಡೆದಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲಾಗಿತ್ತು. ತ್ರಿಚಕ್ರ ವಾಹನ ಪಡೆದು ಕಲಬುರಗಿಯಿಂದ ಸೀತ್ಯಾನಾಯಕ ತಾಂಡಾಕ್ಕೆ ಬೈಕ್ ಮೇಲೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಬಳಿ ವಾಹನದ ಪೆಟ್ರೋಲ್ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು, ಸ್ಫೋಟಗೊಂಡಿದೆ ಎನ್ನಲಾಗಿದೆ. ವಾಹನದ ನಿಯಂತ್ರಣ ತಪ್ಪಿ, ಕಲ್ಲಿಗೆ ಗುದ್ದಿದೆ.
ಗಾಯಗೊಂಡ ಅನ್ನಿಬಾಯಿ ಮತ್ತು ಪಾಟೀಲ ಇಬ್ಬರು ಸೇಡಂ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.