ADVERTISEMENT

ಕಲಬುರ್ಗಿಗೆ ಬಂದಿಳಿದ ಸ್ಟಾರ್ ಏರ್ ವಿಮಾನ

ಲಾಕ್ ಡೌನ್‍ನಿಂದ ಸ್ಥಗಿತಗೊಂಡಿದ್ದ ವಿಮಾನ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 25 ಮೇ 2020, 12:51 IST
Last Updated 25 ಮೇ 2020, 12:51 IST
ಬೆಂಗಳೂರಿನಿಂದ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರನ್ನು ಸೋಮವಾರ ತಪಾಸಣೆ ಮಾಡಲಾಯಿತು
ಬೆಂಗಳೂರಿನಿಂದ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರನ್ನು ಸೋಮವಾರ ತಪಾಸಣೆ ಮಾಡಲಾಯಿತು   

ಕಲಬುರ್ಗಿ: ಕೊರೊನಾ ವೈರಾಣು ಹರಡುವ ಭೀತಿಯಿಂದ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದದೇಶಿಯ ವಿಮಾನಯಾನ ಸಂಚಾರ ಪುನರಾರಂಭಗೊಂಡಿದ್ದು, ಸೋಮವಾರ ಬೆಂಗಳೂರಿನಿಂದ ಸ್ಟಾರ್ ಏರ್ ಸಂಸ್ಥೆಯ ವಿಮಾನವು ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿತು.

ಬೆಳಿಗ್ಗೆ 8.40ಕ್ಕೆ 25 ಜನ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ಟೇಕಾಫ್‌ ಆದ ವಿಮಾನ 9.45ಕ್ಕೆ ಕಲಬುರ್ಗಿ ನೆಲದಲ್ಲಿ ಲ್ಯಾಂಡ್ ಆಯಿತು. ತದನಂತರ 10.20ಕ್ಕೆ ಇಲ್ಲಿಂದ 20 ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಿತು.

ದೇಶಿಯ ವಿಮಾನಯಾನ ಸೇವೆಗೆ ಕೆಲ ದಿನಗಳ ಹಿಂದೆ ವಿಮಾನಯಾನ ಸಚಿವಾಲಯ ಹಸಿರು ನಿಶಾನೆ ತೋರಿದ ಪರಿಣಾಮ ಸೋಮವಾರದಿಂದ (ಮೇ 25) ದೇಶದಾದ್ಯಂತ ಕೊರೋನಾ ಹರಡದಂತೆ ಸುರಕ್ಷತಾ ಕ್ರಮದೊಂದಿಗೆ ವಿಮಾನಯಾನ ಸಂಚಾರವು ಆರಂಭಗೊಂಡಿದೆ.

ADVERTISEMENT

ಭಾರತೀಯ ವಿಮಾನಯಾನ ಪ್ರಾಧಿಕಾರದ ಮಾರ್ಗಸೂಚಿಯಂತೆ ಕಲಬುರ್ಗಿ ವಿಮಾನ ನಿಲ್ದಾಣದಿಂದ ಹೋಗುವ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಪ್ರತಿ ಪ್ರಯಾಣಿಕನಿಂದ ಅರೋಗ್ಯದ ಬಗ್ಗೆ ಸ್ವಯಂ ದೃಢೀಕರಣ ಪಡೆದುಕೊಳ್ಳಲಾಗುತ್ತಿದೆ. ಆರೋಗ್ಯ ಸೇತು ಆ್ಯಪ್ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಪ್ರಯಾಣಿಕರ ಲಗೇಜ್‍ಗಳಿಗೆ ಸೋಂಕು ನಿರೋಧಕ ರಾಸಾಯನಿಕ ಸಿಂಪಡಿಸಿ ವಿಮಾನಕ್ಕೆ ಹತ್ತಿಸಲಾಗುತ್ತದೆ ಎಂದು ಕಲಬುರ್ಗಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್‌. ಜ್ಞಾನೇಶ್ವರ ರಾವ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.