ಕಾಳಗಿ: ತಾಲ್ಲೂಕು ಆದ ನಂತರ ಇದೆ ಮೊದಲ ಬಾರಿಗೆ ಇಲ್ಲಿನ ಪಟ್ಟಣ ಪಂಚಾಯಿತಿಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಚಿಂಚೋಳಿ ಬಿಜೆಪಿ ಶಾಸಕ ಡಾ.ಅವಿನಾಶ ಜಾಧವ ಮತ್ತು ಸ್ಥಳೀಯ ಕಾಂಗ್ರೆಸ್ ಎಂ.ಎಲ್.ಸಿ ಜಗದೇವ ಗುತ್ತೇದಾರ ನಡುವೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಕಾಳಗಿ ಪಟ್ಟಣದಲ್ಲಿ 11ವಾರ್ಡ್‌ಗಳಿಗೆ ಆ.17ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಅಧಿಕಾರದ ಗದ್ದುಗೆ ಏರಲು ರಾಜಕೀಯ ಪಕ್ಷಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟ ಜೋರಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಇಗಾಗಲೇ ಎರಡು ಸುತ್ತಿನ ಸಭೆ ನಡೆಸಿದೆ. ಆಕಾಂಕ್ಷಿಗಳಿಂದ ಅರ್ಜಿ ಪಡೆದಿವೆಯಾದರೂ ಇನ್ನು ಯಾವ ಪಕ್ಷವೂ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿಲ್ಲ. ಸದ್ಯ ಬಿಜೆಪಿ ಹಾಗೂ ಕಾಂಗ್ರೆಸ್ ಆಕಾಂಕ್ಷಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಆಗಿರುವ ಶಾಸಕ ಡಾ.ಅವಿನಾಶ ಜಾಧವ ಮೂಲತಃ ಕಾಳಗಿ ತಾಲ್ಲೂಕಿನ ಬೆಡಸೂರ ಎಂ. ತಾಂಡಾದವರಾಗಿದ್ದು, ತಂದೆ ಮಾಜಿ ಸಂಸದ ಡಾ.ಉಮೇಶ ಜಾಧವ್ ಅವರ ಹಾದಿಯಲ್ಲಿ ಮಗ ಪ.ಪಂ ಚುನಾವಣೆ ಮೂಲಕ ಗುತ್ತೇದಾರಗೆ ಟಕ್ಕರ್ ಕೊಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ಎಂಎಲ್‌ಸಿ ಜಗದೇವ ಗುತ್ತೇದಾರ ಮೂಲತಃ ಕಾಳಗಿ ಪಟ್ಟಣದವರಾಗಿದ್ದು, 2017ರಿಂದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದಾರೆ. 2013 ಮತ್ತು 2018ರಲ್ಲಿ ಡಾ.ಉಮೇಶ ಜಾಧವ್ ಕಾಂಗ್ರೆಸ್ ಪಕ್ಷದಿಂದ ಚಿಂಚೋಳಿ ಶಾಸಕರಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಒಟ್ಟಾರೆ, ಕಾಳಗಿ ಎಂ.ಎಲ್.ಸಿ ಜಗದೇವ ಗುತ್ತೇದಾರ ತವರುದಾಗಿದ್ದರೆ, ಇನ್ನೊಂದೆಡೆ ಶಾಸಕ ಡಾ.ಅವಿನಾಶ ಜಾಧವ ತಾಲ್ಲೂಕಿನದ್ದಾಗಿದ್ದು, ಜಾಧವ-ಗುತ್ತೇದಾರ ನಡುವೆ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿದೆ.
ಗುತ್ತೇದಾರ ಕಣಕ್ಕಿಳಿಸಲು ಜನರ ಒಲವು!
ಕಾಳಗಿ ಪಟ್ಟಣ ಪಂಚಾಯಿತಿ ಅಸ್ತಿತ್ವಕ್ಕೆ ಬಂದ 6 ವರ್ಷದಿಂದ ಚುನಾವಣೆ ದಾರಿ ಕಾಯುತ್ತಿದ್ದ ಆಕಾಂಕ್ಷಿಗಳು ಟಿಕೆಟ್‌ಗಾಗಿ ಅನೇಕ ಕಸರತ್ತುಗಳನ್ನು ನಡೆಸಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಬಿರುಸಿನ ಚಟುವಟಿಕೆಗಳು ಶುರುವಾಗಿವೆ. ಈ ಮೊದಲು ಗ್ರಾಮ ಪಂಚಾಯಿತಿಯಲ್ಲಿ ಹಲವು ಬಾರಿ ಅಧಿಕಾರದ ರುಚಿ ಉಂಡವರೇ ಈಗಲೂ ಅಧಿಕಾರಕ್ಕಾಗಿ ನಾ ಮುಂದು ತಾ ಮುಂದು ಎನ್ನುತ್ತಿರುವುದು ಕಂಡುಬರುತ್ತಿದೆ.
ಊರಿನ ಕೆಲ ಹಿರಿಯರು ಯುವಕರು ವಿ.ಪ ಸದಸ್ಯ ಜಗದೇವ ಗುತ್ತೇದಾರ ಅವರ ಕಿರಿಯ ಪುತ್ರ ನೀಲಕಂಠ ಗುತ್ತೇದಾರ ಅವರನ್ನು ಸ್ಪರ್ಧೆಗಿಳಿಸಲು ಉತ್ಸಾಹಕರಾಗಿದ್ದು ಜಗದೇವ ಗುತ್ತೇದಾರ ಮೇಲೆ ಒತ್ತಡ ತರುತ್ತಿದ್ದಾರೆ ಎನ್ನಲಾಗಿದೆ. ಆದರೆ ಗುತ್ತೇದಾರ ‘ತಂದೆ-ಮಗ’ ಒಪ್ಪುತ್ತಿಲ್ಲ ಎಂದು ತಿಳಿದುಬಂದಿದೆ.
ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ನಮ್ಮೂರನ್ನು ಹೆಚ್ಚು ಅಭಿವೃದ್ಧಿಪಡಿಸಲು ಇದೊಂದು ಒಳ್ಳೆಯ ಅವಕಾಶವಿದೆ. ಹಾಗಾಗಿ ಈ ಚುನಾವಣೆ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇನೆ. ನನ್ನ ಕಿರಿಯ ಪುತ್ರ ಸ್ಪರ್ಧಿಸುವುದಿಲ್ಲ.–ಜಗದೇವ ಗುತ್ತೇದಾರ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ
ಸಾಕಷ್ಟು ಜನ ಆಕಾಂಕ್ಷಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಪರಿಶೀಲಿಸಿ ಟಿಕೆಟ್ ಹಂಚಿಕೆ ಮಾಡಲಾಗುವುದು. ನಮ್ಮ ಕಾರ್ಯಕರ್ತರ ಪ್ರಯತ್ನ ಮತ್ತು ಮತದಾರರ ತೀರ್ಪಿನಂತೆ ಬಹುಮತ ಪಡೆಯಲು ಉತ್ಸಾಹಕರಾಗಿದ್ದೇವೆ.–ಡಾ.ಅವಿನಾಶ ಜಾಧವ, ಶಾಸಕ, ಚಿಂಚೋಳಿ ಕ್ಷೇತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.