ADVERTISEMENT

26919 ಮನೆಗಳಿಗೆ ಬೆಳಕು ಯೋಜನೆ: ರಾಹುಲ ಪಾಂಡ್ವೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 3:54 IST
Last Updated 16 ಆಗಸ್ಟ್ 2022, 3:54 IST
ಕಲಬುರಗಿ ನಗರದ ಜೆಸ್ಕಾಂ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ ಪಾಂಡ್ವೆ
ಕಲಬುರಗಿ ನಗರದ ಜೆಸ್ಕಾಂ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ ಪಾಂಡ್ವೆ   

ಕಲಬುರಗಿ: ‘ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ವತಿಯಿಂದ ಬೆಳಕು ಯೋಜನೆಯಡಿ ಗ್ರಾಮೀಣ ಭಾಗದ 26,919 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ ಪಾಂಡ್ವೆ ಹೇಳಿದರು.

ನಗರದ ಜೆಸ್ಕಾಂ ಆವರಣದಲ್ಲಿ ಸೋಮವಾರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಪ್ರಸಕ್ತ ಸಾಲಿನಲ್ಲಿ 6,437 ವಿಫಲವಾದ ಪರಿವರ್ತಕಗಳನ್ನು 24 ಗಂಟೆಯೊಳಗೆ ಬದಲಾಯಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ 947 ಕೃಷಿ ಪಂಪ್ ಸೆಟ್‌ ಮತ್ತು 130 ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ’ ಎಂದರು.

ADVERTISEMENT

‘20 ವರ್ಷಗಳ ಜೆಸ್ಕಾಂ ಇತಿಹಾಸದಲ್ಲಿ ಈ ವರ್ಷ ಕಂದಾಯ ವಸೂಲಾತಿ ಶೇ 100ರಷ್ಟು ತಲುಪಿದೆ. 2003ನೇ ಸಾಲಿನಲ್ಲಿ 16.78 ಲಕ್ಷ ವಿದ್ಯುತ್ ಗ್ರಾಹಕರಿಂದ ₹364 ಕೋಟಿ ವಸೂಲಿ ಮಾಡಲಾಗಿತ್ತು. 2022ನೇ ಸಾಲಿನಲ್ಲಿ 34.57 ಲಕ್ಷ ಗ್ರಾಹಕರಿಂದ ₹5,835 ಕೋಟಿ ಕಂದಾಯ ವಸೂಲಿ ಆಗಿದೆ’ ಎಂದು ಹೇಳಿದರು.

ಉತ್ತಮವಾಗಿ ಕೆಲಸ ನಿರ್ವಹಿಸಿದ ಸಿಬ್ಬಂದಿ, ಅಧಿಕಾರಿಗಳಿಗೆ ಪ್ರಶಂಸಾ ಪತ್ರ ನೀಡಲಾಯಿತು. ಉತ್ತಮ ಚಿತ್ರಕಲೆ ಬಿಡಿಸಿದ ಮಕ್ಕಳಿಗೆ ಪ್ರಮಾಣ ಪತ್ರ ಕೊಡಲಾಯಿತು. ಜೆಸ್ಕಾಂ ನಿರ್ದೇಶಕ ಬಿ. ಸೋಮಶೇಖರ್, ಮುಖ್ಯ ಆರ್ಥಿಕ ಅಧಿಕಾರಿ ಅಬ್ದುಲ್ ವಾಜಿದ್, ಪ್ರಧಾನ ವ್ಯವಸ್ಥಾಪಕಿ ಪ್ರಮಿಳಾ ಎಂ.ಕೆ, ವಿಜಿಲೆನ್ಸ್ ಎಸ್.ಪಿ. ಸವಿತಾ ಹೂಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.