ADVERTISEMENT

ಪ್ರವಾಹದ ಸಮಸ್ಯೆಗೆ ಮುಕ್ತಿ ಯಾವಾಗ?

ಹುರಸಗುಂಡಗಿ ಗ್ರಾಮಸ್ಥರ ಸಂಕಷ್ಟ, 10 ವರ್ಷಗಳಿಂದ ಬಗೆಹರಿಯದ ಸಮಸ್ಯೆ, ಶಾಶ್ವತ ಪರಿಹಾರಕ್ಕೆ ಮನವಿ

ಟಿ.ನಾಗೇಂದ್ರ
Published 28 ಅಕ್ಟೋಬರ್ 2020, 4:58 IST
Last Updated 28 ಅಕ್ಟೋಬರ್ 2020, 4:58 IST
ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಭೀಮಾ ನದಿಯ ಪ್ರವಾಹದಿಂದ ಮನೆಯಲ್ಲಿ ನೀರು ನುಗ್ಗಿರುವುದು
ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಭೀಮಾ ನದಿಯ ಪ್ರವಾಹದಿಂದ ಮನೆಯಲ್ಲಿ ನೀರು ನುಗ್ಗಿರುವುದು   

ಶಹಾಪುರ: ಪ್ರತಿ ಸಲ ಪ್ರವಾಹ ಬಂದಾಗ ಇಲ್ಲಿನ ಹುರಸಗುಂಡಗಿ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಇದುವರೆಗೂ ಅವರ ಸಮಸ್ಯೆಗೆ ಸ್ಪಂದನೆ ದೊರೆತಿಲ್ಲ.

ಪ್ರವಾಹ ಸಂದರ್ಭ ಜನಪ್ರತಿನಿಧಿ ಗಳು ಆಗಮಿಸಿದಾಗ ಮನವಿ ಪತ್ರ ನೀಡಿ ಕೈ ಸೋತು ಹೋಗಿದೆ. ಅವರು ಕೊಟ್ಟ ಭರವಸೆ ಇಂದಿಗೂ ಈಡೇರಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮದಿಂದ ಕೂಗಳತೆಯ ದೂರದಲ್ಲಿ ಭೀಮಾ ನದಿಗೆ ಅಡ್ಡಲಾಗಿ ₹188 ಕೋಟಿ ವೆಚ್ಚದಲ್ಲಿ ಸನ್ನತಿ ಬ್ರೀಜ್ ಕಂ ಬ್ಯಾರೇಜ್ ನಿರ್ಮಿಸಿದ್ದಾರೆ. 4 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವನ್ನು ಹೊಂದಿದೆ. ಚಿತ್ತಾಪುರ ತಾಲ್ಲೂಕಿನ 8 ಹಾಗೂ ಯಾದಗಿರಿ ತಾಲ್ಲೂಕಿನ 19 ಗ್ರಾಮಗಳು ನೀರಾವರಿ ವ್ಯಾಪ್ತಿಗೆ ಒಳಪಟ್ಟಿವೆ. 17 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಿನ
ಭಾಗ್ಯ ದೊರೆಯುತ್ತಿದೆ.

ADVERTISEMENT

ಬ್ಯಾರೇಜಿನ ಹಿನ್ನೀರಿನಿಂದ ಹುರಸಗುಂಡಗಿ ಗ್ರಾಮದ 670 ಮನೆ ಮತ್ತು 430 ಎಕರೆ ಜಮೀನು ಮುಳುಗಡೆಯಾಗಿತ್ತಿರುವುದರಿಂದ ಸಂಪೂರ್ಣವಾಗಿ ಗ್ರಾಮವನ್ನು ಹತ್ತು ವರ್ಷದ ಹಿಂದೆ ಸ್ಥಳಾಂತರಿಸಿ 120 ಎಕರೆ ಜಮೀನು ಖರೀದಿಸಿ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ನವ ಗ್ರಾಮ ಹುರಸಗುಂಡಗಿ ನಿರ್ಮಿಸಲಾಗಿದೆ. ಮೊದಲನೆಯ ಹೆಜ್ಜೆಯಾಗಿ ಪುನರ್ವಸತಿ ಕಲ್ಪಿಸುವ ಭರದಲ್ಲಿ ಜೇಡಿಮಣ್ಣು ಮಿಶ್ರಿತ ಜಮೀನು ಸರ್ಕಾರ ಖರೀದಿಸಿದ್ದು, ಅಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯದ ಸಮಸ್ಯೆ ಉದ್ಭವಿಸಿತು.

‘ಆಳವಾಗಿ ಅಗೆದರೂ ಗಟ್ಟಿಮಣ್ಣು ಬರಲಿಲ್ಲ. ಆದರೂ ಮನೆ ನಿರ್ಮಿಸಿದೇವು. ಕೆಲ ವರ್ಷದಲ್ಲಿ ಮನೆ ಬಿರುಕು ಬಿಟ್ಟು ಬಾಯಿ ತೆರೆದು ನಿಂತಿವೆ’ ಎನ್ನುತ್ತಾರೆ ಗ್ರಾಮದ ಮುಖಂಡ ಈರಣ್ಣ ವಿಶ್ವಕರ್ಮ.

ಅಲ್ಲದೆ ಮನೆ, ಜಮೀನು ಕಳೆದುಕೊಂಡವರಿಗೂ ಸರ್ಕಾರ ಸಮರ್ಪಕವಾದ ಯೋಗ್ಯ ದರವನ್ನು ನೀಡದೆ ಸತಾಯಿಸಿತು. ಬಂದಷ್ಟು ಬರಲಿ ಎಂದು ಪಡೆದುಕೊಂಡವರು ಮತ್ತಷ್ಟು ಸಂಕಷ್ಟ ಸಿಲುಕಿದರು. ಬಾಗಲಕೋಟೆಯಲ್ಲಿ ಪುನರ್ವಸತಿ ಕಲ್ಪಿಸಿದಂತೆ ನಮ್ಮಲ್ಲಿಯೂ ಅಗತ್ಯ ಪ್ರಾಮಾಣಿಕ ಅಧಿಕಾರಿಯನ್ನು ನೇಮಿಸಲಿಲ್ಲ. ನವ ನಗರದಲ್ಲಿ ಅರೆ ಬರೆ ಕೆಲಸ ನಿರ್ವಹಿಸುವುದರ ಜತೆಗೆ ಕುಡಿಯುವ ನೀರು ಇನ್ನಿತರ ಕನಿಷ್ಠ ಸೌಲಭ್ಯಗಳನ್ನು ನೀಡಲಿಲ್ಲ. ಇದರಿಂದ ನಾವೆಲ್ಲರೂ ಅನಿವಾರ್ಯವಾಗಿ ಅದೆ ಹಳೆಯ ಮನೆಗೆ ಬಂದು ಜೀವನ ಸಾಗಿಸುತ್ತಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.

ಪ್ರತಿ ಪ್ರವಾಹ ಬಂದಾಗ ಅಧಿಕಾರಿಗಳು ಗ್ರಾಮಕ್ಕೆ ಬಂದು ಡಂಗೂರ ಸಾರಿ ಮನೆ ತೊರೆದು ಹೋಗುವಂತೆ ಒತ್ತಡ ಹಾಕುತ್ತಾರೆ. ಅಲ್ಲದೆ ಹೆಚ್ಚಿನ ನೀರು ನದಿಗೆ ಹರಿಬಿಡುತ್ತಿದ್ದಂತೆ ಹಿನ್ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿ ನೀರು ನಿಲ್ಲುವುದು ಸಾಮಾನ್ಯವಾಗಿದೆ. ರಾತ್ರೋರಾತ್ರಿ ಸಾಮಾನು ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಹೋಗುತ್ತೇವೆ. ನಮ್ಮ ಸಮಸ್ಯೆಗೆ ಮುಕ್ತಿ ಮಾತ್ರ ಸಿಕ್ಕಿಲ್ಲ. ಗ್ರಾಮದ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.