ಸೇಡಂ: ಕಾಗಿಣಾ ನದಿ ಪ್ರವಾಹ ಈಗ ಸ್ವಲ್ಪ ತಗ್ಗಿದೆ. ಆದರೆ ಪ್ರವಾಹದಿಂದ ಜಲಾವೃತ್ತಗೊಂಡಿದ್ದ ಸೇತುವೆಗಳು, ರಸ್ತೆಗಳ ಡಾಂಬಾರು ಸಮೇತವಾಗಿ ಕಿತ್ತುಕೊಂಡು ಹೋಗಿವೆ. ಹೀಗಾಗಿ ಅನೇಕ ರಸ್ತೆಗಳಲ್ಲಿ ಸಂಚಾರ ಈಗಲೂ ಸರಾಗವಿಲ್ಲ.
ಕಾಗಿಣಾ ನದಿ ಪ್ರವಾಹ ರಭಸಕ್ಕೆ ತಾಲ್ಲೂಕಿನ ತೆಲ್ಕೂರ-ಯಡ್ಡಳ್ಳಿ ಗ್ರಾಮ ಸಂಪರ್ಕಿಸುವ ರಸ್ತೆ ಕೊಚ್ಚಿ ಹೋಗಿದೆ. ಹೀಗಾಗಿ ಹಲವು ದಿನಗಳಿಂದ ಈ ಗ್ರಾಮಗಳ ಮಧ್ಯೆ ಸಂಪರ್ಕ ಸ್ಥಗಿತವಾಗಿದೆ. ಗ್ರಾಮಸ್ಥರು ಅನ್ಯ ಮಾರ್ಗಗಳಿಂದ ಸುತ್ತುವರಿದು ಸಂಚರಿಸುವಂತಾಗಿದೆ. 3 ಕಿ.ಮೀ ದೂರವಿರುವ ತೆಲ್ಕೂರ ಗ್ರಾಮಕ್ಕೆ ಯಡ್ಡಳ್ಳಿ ಗ್ರಾಮಸ್ಥರು ತೆರಳಬೇಕಾದರೆ 15 ಕಿ.ಮೀ ದೂರ ಕ್ರಮಿಸಬೇಕಾದ ಅನಿವಾರ್ಯತೆ ಬಂದಿದೆ. ದಸರಾ ರಜೆ ಮುಗಿಯುತ್ತಿರುವುದರಿಂದ ಬೇರೆ ಕಡೆ ಶಾಲಾ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಂಕಷ್ಟವಾಗಲಿದೆ.
ತಾಲ್ಲೂಕಿನ ಮಳಖೇಡ-ಚಿತ್ತಾಪುರ ಸಂಪರ್ಕಿಸುವ ದರ್ಗಾ ರಸ್ತೆಯ ಮಾರ್ಗವೂ ಸಂಪೂರ್ಣ ಹದಗೆಟ್ಟಿದ್ದು, ಅಲ್ಲಲ್ಲಿ ಬಹುದೊಡ್ಡ ತಗ್ಗು ಗುಂಡಿಗಳು ಬಿದ್ದಿವೆ. ‘ರಾಜಶ್ರೀ ಸಿಮೆಂಟ್ ಕಂಪೆನಿಗೆ ಸಂಚರಿಸುವ ಭಾರಿ ವಾಹನಗಳ ಓಡಾಟ, ಕಾಗಿಣಾ ನದಿ ನೀರಿನ ಪ್ರವಾಹಕ್ಕೆ ಮತ್ತಷ್ಟು ತಗ್ಗು ಬಿದ್ದು, ಹೊಂಡಗಳಾಗಿ ಮಾರ್ಪಟ್ಟಿವೆ. ಹೀಗಾಗಿ ಮಳಖೇಡದಿಂದ ಚಿತ್ತಾಪುರ ಮತ್ತು ರಾಜಶ್ರೀ ಸಿಮೆಂಟ್ ಕಂಪನಿ ಕಡೆಗೆ ತೆರಳುವ ಪ್ರಯಾಣಿಕರು ಪರದಾಡುತ್ತಿದ್ದಾರೆ. ಕೂಡಲೇ ರಸ್ತೆ ದುರಸ್ತಿಗೊಳಿಸಬೇಕು’ ಎಂದು ಮಳಖೇಡ ಗ್ರಾಮ ಪಂಚಾಯಿತಿ ಸದಸ್ಯ ಉಮೇಶ ಚವಾಣ್ ಆಗ್ರಹಿಸುತ್ತಾರೆ.
ಜೊತೆಗೆ ಬೀರನಳ್ಳಿ, ಸಮೀಪದಲ್ಲಿಯೂ ಪ್ರವಾಹದಿಂದ ನೀರಿನಿಂದ ತಗ್ಗು ಗುಂಡಿಗಳು ಬಿದ್ದಿವೆ. ಜೊತೆಗೆ ತಾಲ್ಲೂಕಿನ ಲಾಹೋಡ್ ಗ್ರಾಮದ ರಸ್ತೆಯೂ ಅಲ್ಲಲ್ಲಿ ತಗ್ಗು ಬಿದ್ದಿದೆ. ಅಲ್ಲದೇ ತಾಲ್ಲೂಕಿನ ಮಲ್ಕಾಪಲ್ಲಿ ಗ್ರಾಮದಿಂದ ಸೋನಾರ್ ತಾಂಡಾದವರೆಗೆ ಸಂಪರ್ಕಿಸುವ ರಸ್ತೆ ಹಳ್ಳದ ನೀರಿನ ಒತ್ತಡಕ್ಕೆ ಕಿತ್ತುಕೊಂಡು ಹೋಗಿದೆ. ‘ತಾಂಡಾ ಜನರು ನಿತ್ಯ ಹೊಲಗದ್ದೆಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ ಕೂಡಲೇ ರಸ್ತೆ ನಿರ್ಮಿಸಬೇಕು’ ಎಂದು ಮಲ್ಕಾಪಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನವಾದರೆಡ್ಡಿ ಆಗ್ರಹಿಸಿದ್ದಾರೆ.
ಯಡ್ಡಳ್ಳಿ-ತೆಲ್ಕೂರ ಮಧ್ಯೆ ರಸ್ತೆ ಕೊಚ್ಚಿ ಹೋಗಿರುವುದರ ಕುರಿತು ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಕ್ರೀಯಾಯೋಜನೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಡಾ.ಶರಣಪ್ರಕಾಶ ಪಾಟೀಲ ಸಚಿವ
ಮಳಖೇಡದಿಂದ ಚಿತ್ತಾಪುರ ಕಡೆಗೆ ಸಂಪರ್ಕಿಸುವ ದರ್ಗಾ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಜನಸಂಚಾರಕ್ಕೆ ನಿತ್ಯವು ತೊಂದರೆಯಾಗುತ್ತಿದೆ. ಕೂಡಲೇ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಬೇಕು.ಉಮೇಶ ಚವಾಣ್ ಗ್ರಾಮ ಪಂಚಾಯಿತಿ ಸದಸ್ಯ ಮಳಖೇಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.