ಕಲಬುರಗಿ: ‘ಅತಿವೃಷ್ಟಿ ಹಾಗೂ ಪ್ರವಾಹದಂಥ ಆಕಸ್ಮಿಕಗಳು ಸಂಭವಿಸಿದ ಸಂದರ್ಭಗಳಲ್ಲಿ ಅಧಿಕಾರಿಗಳು ವಿವೇಚನೆಯಿಂದ ವರ್ತಿಸಿ, ಲಭ್ಯವಿರುವ ಅನುದಾನ ಬಳಸಿ ತುರ್ತು ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.
ಜಿಲ್ಲೆಯ ಹಲವೆಡೆ ಪ್ರವಾಹ ಏರ್ಪಟ್ಟ ಪರಿಸ್ಥಿತಿ ಕುರಿತು ಜಿಲ್ಲೆ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳೊಂದಿಗೆ ಬೆಂಗಳೂರಿನಿಂದ ಮಂಗಳವಾರ ವಿಡಿಯೊ ಸಂವಾದದ ಮೂಲಕ ಸಭೆ ನಡೆಸಿದರು.
‘ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಶೇ 69ರಷ್ಟು ಹಾಗೂ ಸೆಪ್ಟೆಂಬರ್ 22ರ ತನಕ ಶೇ 52ರಷ್ಟು ವಾಡಿಕೆಗಿಂತಲೂ ಹೆಚ್ಚಿನ ಮಳೆ ಸುರಿದಿದೆ. ಮಳೆಯಿಂದ ತೊಂದರೆ ಎದುರಿಸಿದ ಜನರಿಗೆ ತಾತ್ಕಾಲಿಕ ವಸತಿ, ಆಹಾರ ಸರಬರಾಜು ಸೇರಿದಂತೆ ಮೂಲ ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕು’ ಎಂದರು.
‘ನಗರ ಮತ್ತು ಗ್ರಾಮೀಣ ಪ್ರದೇಶದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಗುರುತಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಗುರುತಿಸಲಾದ ಕಾಳಜಿ ಕೇಂದ್ರಗಳಲ್ಲಿ ಮೂಲಸೌಕರ್ಯ ಖಚಿತಪಡಿಸಿಕೊಳ್ಳಬೇಕು’ ಎಂದರು.
‘ನದಿ, ಹಳ್ಳ, ಕೆರೆ ದಡಗಳಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ದನ–ಕರುಗಳನ್ನು ಬಿಡುವುದು ಹಾಗೂ ಅಪಾಯಕಾರಿ ಸೇತುವೆಗಳಲ್ಲಿ ಸಂಚರಿಸದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ನದಿ, ಹಳ್ಳ, ಕೆರೆ ದಡದಲ್ಲಿರುವ ಗುಡಿ, ಮಸೀದಿ, ಚರ್ಚ್ ಮುಂತಾದ ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ, ಪ್ರಾರ್ಥನೆ ಹಾಗೂ ಬಾಗಿನ ಸಲ್ಲಿಸುವವರ ಮನವೊಲಿಸಿ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.
ಮಳೆ ಸಂಬಂಧಿತ ಅವಘಡಗಳಲ್ಲಿ ಮೃತರಾದವರ ಕುಟುಂಬಗಳ ಅವಲಂಬಿತರಿಗೆ ತಕ್ಷಣ ಪರಿಹಾರ ಒದಗಿಸಲು ಕ್ರಮವಹಿಸಬೇಕು. ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳು, ಒಆರ್‌ಎಸ್, ಪ್ರಥಮ ಚಿಕಿತ್ಸಾ ಸಾಮಗ್ರಿಗಳನ್ನು ದಾಸ್ತಾನು ಇರಿಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.
‘ಅತಿವೃಷ್ಟಿಯಿಂದ ನೀರು ತುಂಬಿ ಸಂಚಾರಕ್ಕೆ ಅಡ್ಡಿಯಾಗಿರುವ ಸೇತುವೆಗಳಿಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು. ಜನರು ಅಂಥ ಸೇತುವೆಗಳ ಮೇಲೆ ಸಂಚರಿಸದಂತೆ ನಿಗಾ ವಹಿಸುವುದು. ಗ್ರಾಮೀಣ ಭಾಗದಲ್ಲಿ ಡಂಗೂರ ಸಾರಿಸಬೇಕು’ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಎಸ್ಪಿ ಅಡ್ಡೂರು ಶ್ರೀನಿವಾಸುಲು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲ್ಲೂಕುಗಳ ತಹಶೀಲ್ದಾರ್‌ಗಳು, ತಾಲ್ಲೂಕು ಪಂಚಾಯಿತಿ ಇ.ಒಗಳು ಭಾಗವಹಿಸಿದ್ದರು.
‘ನಿರಾಶ್ರಿತರ ಕಾಳಜಿ ವಹಿಸಿ’
‘ಮನೆ ಕಳೆದುಕೊಂಡಿರುವ ನಿರಾಶ್ರಿತರನ್ನು ಆಯಾ ಗ್ರಾಮಗಳ ವ್ಯಾಪ್ತಿಯೊಳಗಿನ ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸಬೇಕು. ಅಪಾಯದ ಸ್ಥಿತಿಯಲ್ಲಿರುವ ಕಟ್ಟಡಗಳಲ್ಲಿ ವಾಸ ಮಾಡುವವರನ್ನು ಸಹ ಕಾಳಜಿ ಕೇಂದ್ರಗಳಲ್ಲಿರಿಸಬೇಕು. ಬಿಇಒಗಳು ತೊಂದರೆಗೀಡಾದ ಗ್ರಾಮಗಳಿಗೆ ಭೇಟಿ ನೀಡಿ ಶಾಲಾ ಕಟ್ಟಡಗಳು ಶಿಥಿಲವಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಹೊಳೆ ಹರಿಯುವ ಹಾಗೂ ನೀರು ನಿಂತ ಸ್ಥಳಗಳತ್ತ ಮಕ್ಕಳನ್ನು ಕಳುಹಿಸದಂತೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕು’ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.