ADVERTISEMENT

ಜೇವರ್ಗಿ: ಹಬ್ಬದ ಸಂಭ್ರಮದಿಂದ ಸಂತ್ರಸ್ತರು ದೂರ

ಜೇವರ್ಗಿ ತಾಲ್ಲೂಕಿನಲ್ಲಿ ಭೀಮಾ ನದಿಯ ಪ್ರವಾಹಕ್ಕೆ ಬಲಿಯಾದ ಹಬ್ಬದ ಸಡಗರ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 6:31 IST
Last Updated 3 ಅಕ್ಟೋಬರ್ 2025, 6:31 IST
<div class="paragraphs"><p>ಜೇವರ್ಗಿ ತಾಲ್ಲೂಕಿನ ರದ್ದೇವಾಡಗಿ ಗ್ರಾಮದ ಹತ್ತಾರು ಮನೆಗಳು ಇನ್ನೂ ಜಲಾವೃತಗೊಂಡಿವೆ</p></div>

ಜೇವರ್ಗಿ ತಾಲ್ಲೂಕಿನ ರದ್ದೇವಾಡಗಿ ಗ್ರಾಮದ ಹತ್ತಾರು ಮನೆಗಳು ಇನ್ನೂ ಜಲಾವೃತಗೊಂಡಿವೆ

   

ಜೇವರ್ಗಿ: ನಾಡಿನೆಲ್ಲೆಡೆ ದಸರಾ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಆದರೆ, ತಾಲ್ಲೂಕಿನ ಭೀಮಾ ನದಿ ತೀರದ 30ಕ್ಕೂ ಹೆಚ್ಚು ಗ್ರಾಮಗಳ ಪ್ರವಾಹ ಸಂತ್ರಸ್ತರು ಮಾತ್ರ ಕಣ್ಣೀರಲ್ಲೇ ಹಬ್ಬ ಆಚರಿಸುವಂತಾಯಿತು.

ಭೀಮಾ ನದಿ ತೀರದ ತಾಲ್ಲೂಕಿನ ರದ್ದೇವಾಡಗಿ, ಕೂಡಿ, ಕೋಬಾಳ, ಮಂದರವಾಡ, ಕೋನಾಹಿಪ್ಪರಗಾ, ಕಟ್ಟಿಸಂಗಾವಿ, ಮದರಿ, ಯನಗುಂಟಿ, ನರಿಬೋಳ, ಮಲ್ಲಾ.ಕೆ, ಮಲ್ಲಾ.ಬಿ, ರಾಜವಾಳ, ಹೋತಿನಮಡು, ‌ಹೊನ್ನಾಳ, ರಾಂಪೂರ, ಮಾಹೂರ, ಯಂಕಂಚಿ, ಕೂಡಲಗಿ, ಕಲ್ಲೂರ.ಬಿ, ಬಳ್ಳುಂಡಗಿ, ಹರವಾಳ, ಇಟಗಾ ಸೇರಿದಂತೆ ತಾಲ್ಲೂಕಿನ 30 ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ಸಿಲುಕಿ ಮನೆಗಳನ್ನುನ ಕಳೆದುಕೊಂಡಿರುವ ಸಂತ್ರಸ್ತರಿಗೆ ದಸರಾ ಹಬ್ಬದ ಸಂಭ್ರಮ ಇಲ್ಲವಾಗಿದೆ.

ADVERTISEMENT

ಹಬ್ಬದ ದಿನ ಪ್ರತಿಯೊಬ್ಬರ ಮನೆಯಲ್ಲಿ ಸಿಹಿಯೂಟ ಸಾಮಾನ್ಯ. ಆದರೆ, ಸಂತ್ರಸ್ತರಿಗೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಕನಿಷ್ಠ ಶುದ್ಧ ನೀರು ಸಿಗದೆ, ಪ್ರವಾಹದ ಗಲೀಜು ನೀರನ್ನೇ ಕುಡಿಯುವಂತಾಗಿದೆ. ಹಬ್ಬದ ಸಂಭ್ರಮದಲ್ಲಿ ಇರಬೇಕಾದ ಮಹಿಳೆಯರು ಪ್ರವಾಹದಿಂದ ಕೊಳಚೆಯಂತೆ ಆಗಿರುವ ಮನೆಯ ಸ್ವಚ್ಛತೆಯಲ್ಲಿ ನಿರತರಾಗಿದ್ದಾರೆ. 

‘ದಸರಾ ಹಬ್ಬ ಇದ್ದರೂ ಪ್ರವಾಹದಿಂದ ನಾವು ಹಬ್ಬ ಮಾಡದಂತಾಗಿದೆ. ನಾವು ಅಡುಗೆ ಮಾಡಿಕೊಳ್ಳಲು ಹಿಡಿ ಅಕ್ಕಿ ಕೂಡ ಇಲ್ಲ’ ಎಂದು ರದ್ದೇವಾಡಗಿ ಗ್ರಾಮದ ಶಾಂತಮ್ಮ ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ ಎರಡು ತಿಂಗಳಿನಿಂದ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹದಿಂದ ನಾವು ಸಾಕಷ್ಟು ಸಂಕಷ್ಟದಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಿ ಹಬ್ಬ ಆಚರಣೆ ಮಾಡೋಣ’ ಎಂದು ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡರು.

ತಾಲ್ಲೂಕಿನ ಮಂದರವಾಡ ಗ್ರಾಮಕ್ಕೆ ತೆರಳಲು ಇನ್ನೂ ಸಾಧ್ಯವಾಗದೇ ಜನ ಪರದಾಡುವಂತಾಯಿತು. ಪ್ರವಾಹದ ನೀರು ಗ್ರಾಮ ಸುತ್ತುವರೆದು ರಸ್ತೆ ಕಾಣದಂತಾಗಿದೆ. ತಾಲ್ಲೂಕಿನ ಬಹುತೇಕ ಗ್ರಾಮಗಳ ಸಂತ್ರಸ್ತರು ಇಲ್ಲಿಯವರೆಗೂ ಗಲೀಜು ನೀರೇ ಕುಡಿಯುತ್ತಿದ್ದು, ಸಾಂಕ್ರಾಮಿಕ ರೋಗಗಳು ತಗಲುವ ಭೀತಿಯಲ್ಲಿದ್ದಾರೆ.

  • 30ಕ್ಕೂ ಹೆಚ್ಚು ಗ್ರಾಮಗಳ ಪ್ರವಾಹ ಸಂತ್ರಸ್ತರು ಸಂಕಷ್ಟದಲ್ಲಿ

  • ಕೊಳಚೆಯಾದ ಮನೆ ಸ್ವಚ್ಛತೆಯಲ್ಲಿ ಮಹಿಳೆಯರು ನಿರತ

  • ಮಂದರವಾಡ ಗ್ರಾಮಕ್ಕೆ ತೆರಳಲು ಇನ್ನೂ ಸಾಧ್ಯವಾಗದ ಸ್ಥಿತಿ

ಪ್ರವಾಹದಿಂದ ಮನೆಯಲ್ಲಿನ ಎಲ್ಲಾ ವಸ್ತುಗಳು, ಹೊದಿಕೆ, ವಿದ್ಯುತ್ ಸಾಮಗ್ರಿ ಕೆಟ್ಟು ಹೋಗಿವೆ. ಹಬ್ಬದ ದಿನ ಹೋಳಿಗೆ ಬಿಡಿ, ನಮಗೆ ಕುಡಿಯಲು ಶುದ್ಧ ನೀರು ಸಿಗ್ತಾ ಇಲ್ಲ
ಲಕ್ಷ್ಮಿಬಾಯಿ, ಸಂತ್ರಸ್ತೆ
ಪ್ರವಾಹದಿಂದ ಮನೆಯಲ್ಲಿನ ಟಿವಿ ಹಾಳಾಗಿ, ಅಕ್ಕಿ, ಬೇಳೆ, ಜೋಳ ಕೊಳೆತು ಹೋಗಿದೆ. ಶಿಥಿಲಗೊಂಡ ಮನೆಗಳಿಗೆ ಹಾಗೂ ಹಾಳಾದ ಬೆಳೆಗಳಿಗೆ ಪರಿಹಾರ ಕೊಡಬೇಕು
ಮಲ್ಲಪ್ಪ ಹೊಸಮನಿ, ಸಂತ್ರಸ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.