ADVERTISEMENT

ಮಹಿಳೆಯರು ಆರೋಗ್ಯದ ಕಡೆ ಗಮನಹರಿಸಿ

ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಶೋಭಾ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:12 IST
Last Updated 8 ಅಕ್ಟೋಬರ್ 2024, 16:12 IST
ಕಲಬುರಗಿ ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಸಿಆರ್‌ಸಿ ಸ್ನೇಹ ಬಳಗದ ಸಹಯೋಗದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಶೋಭಾ ಉದ್ಘಾಟಿಸಿದರು
ಕಲಬುರಗಿ ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಸಿಆರ್‌ಸಿ ಸ್ನೇಹ ಬಳಗದ ಸಹಯೋಗದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಶೋಭಾ ಉದ್ಘಾಟಿಸಿದರು   

ಕಲಬುರಗಿ: ‘ಮಹಿಳೆಯರು ಒತ್ತಡದ ನಡುವೆಯೂ ಆರೋಗ್ಯದ ಕಡೆ ಗಮನಹರಿಸಬೇಕಾದ ಅಗತ್ಯವಿದೆ’ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಶೋಭಾ ಜಿ. ಸಲಹೆ ನೀಡಿದರು.

ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಸಿಆರ್‌ಸಿ ಸ್ನೇಹ ಬಳಗದ ಸಹಯೋಗದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಹಿಳೆಯರ ಆರೋಗ್ಯ ಮತ್ತು ಅತ್ಯಗತ್ಯ ಪೋಷಕಾಂಶಗಳು’ ವಿಷಯ ಕುರಿತು ಮಾತನಾಡಿದರು.

‘ಮಹಿಳೆ ಜೈವಿಕವಾಗಿ ಪುರುಷನಿಗಿಂತ ಭಿನ್ನವಾಗಿದ್ದಾಳೆ. ಆದ್ದರಿಂದ ಆರೋಗ್ಯ ಬಹಳ ಮುಖ್ಯ. ಒತ್ತಡದ ಬದುಕು ಹಾಗೂ ಉತ್ತಮವಲ್ಲದ ಆಹಾರ ಶೈಲಿಯ ಕಾರಣಕ್ಕೆ ಪಿಸಿಒಡಿಯಂಥ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾಳೆ. ಈ ಕಾಯಿಲೆಗಳು ಅವಳನ್ನು ಮಾನಸಿಕ ಹಾಗೂ ದೈಹಿಕವಾಗಿ ಕುಸಿಯುವಂತೆ ಮಾಡುತ್ತಿವೆ’ ಎಂದರು.

ADVERTISEMENT

‘ಕುಟುಂಬ ನಿರ್ವಹಣೆ ನಡುವೆ ಮಹಿಳೆಗೆ ತನ್ನನ್ನು ತಾನು ನೋಡಿಕೊಳ್ಳಲೂ ಸಮಯ ಸಿಗುವುದಿಲ್ಲ. ಒತ್ತಡ ಹೆಚ್ಚಾಗಿ ಹೃದಯಾಘಾತ, ಕ್ಯಾನ್ಸರ್‌ನಂಥ ಕಾಯಿಲೆಗಳು ಹೆಚ್ಚುತ್ತಿವೆ’ ಎಂದು ಹೇಳಿದರು.

‘ನಿಮಗಾಗಿ ಸಮಯ ಮಾಡಿಕೊಂಡು ಉತ್ತಮ ಆಹಾರ ಶೈಲಿ, ವ್ಯಾಯಾಮ ಹಾಗೂ ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಉತ್ತಮ ಆರೋಗ್ಯದಲ್ಲಿ ಆಹಾರದ ಪಾತ್ರ ದೊಡ್ಡದು. ಆದ್ದರಿಂದ ಆಹಾರಕ್ಕೆ ಭಾರತ ದೈವದ ಸ್ಥಾನ ನೀಡಿದೆ. ಅನ್ನ ಬ್ರಹ್ಮ ಎನ್ನುವ ಮಾತು ಈ ಹಿನ್ನೆಲೆಯಲ್ಲಿಯೇ ಹುಟ್ಟಿಕೊಂಡಿದೆ. ಉತ್ತಮ ಆಹಾರ ತಾಯಿಯ ಎದೆ ಹಾಲಿನಿಂದಲೇ ಪ್ರಾರಂಭವಾಗುತ್ತದೆ’ ಎಂದರು.

‘ಮಹಿಳೆಯರು ಉತ್ತಮ ಆಹಾರ ಶೈಲಿ ರೂಢಿಸಿಕೊಳ್ಳಬೇಕು. ಆಹಾರದಲ್ಲಿ ವೈವಿಧ್ಯತೆ ಇರಬೇಕು. ತಿಂಗಳಿಗೆ 16 ವಿಧದ ಕಾಳುಗಳನ್ನು ಸೇವಿಸಬೇಕು. ಹಣ್ಣು, ತರಕಾರಿ, ಸಿರಿಧಾನ್ಯ, ಮೊಟ್ಟೆ, ಹಾಲಿನಂಥ ಪದಾರ್ಥಗಳನ್ನು ಸೇವಿಸಬೇಕು. ಇದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ದೊರಕುತ್ತವೆ’ ಎಂದರು.

‘ದಿನದ ಸ್ವಲ್ಪ ಸಮಯವನ್ನು ವ್ಯಾಯಾಮಕ್ಕೆ ಮೀಸಲಿಡಬೇಕು. ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಪೌಷ್ಟಿಕತೆ, ವಿಶ್ರಾಂತಿ ಹಾಗೂ ಉತ್ತಮ ಮಾನಸಿಕ ಆರೋಗ್ಯ ನಮ್ಮನ್ನು ಚೆನ್ನಾಗಿಡುತ್ತದೆ’ ಎಂದರು.

ಕಾಲೇಜಿನ ಪ್ರಾಚಾರ್ಯ ರಾಜೇಂದ್ರ ಕೊಂಡಾ ಮಾತನಾಡಿ, ‘ಮಹಾವಿದ್ಯಾಲಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಶಿವಶರಣ ಬಿ.ಗೊಳ್ಳೆ, ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಶಶಿಶೇಖರ ರೆಡ್ಡಿ, ಮಹಾವಿದ್ಯಾಲಯದ ಉಪ ಪ್ರಾಚಾರ್ಯೆ ವೀಣಾ, ಪದವಿ ಮಹಾವಿದ್ಯಾಲಯದ ಉಪ ಪ್ರಾಚಾರ್ಯೆ ಉಮಾ ರೇವೂರ, ಇನ್ನರ್ ವೀಲ್ ಕ್ಲಬ್‌ನ ಸರಿತಾ, ಸಿಆರ್‌ಸಿ ಸ್ನೇಹ ಬಳಗದ ಎಚ್‌.ಎಸ್‌.ಹಿರೇಮಠ ಹಾಜರಿದ್ದರು.

‘ಪೌಷ್ಟಿಕತೆಯಿಂದ ಕೂಡಿದ ಉ.ಕ ಆಹಾರ’ ‘

ಉತ್ತರ ಕರ್ನಾಟಕದ ಆಹಾರ ಪೌಷ್ಟಿಕತೆಯಿಂದ ಕೂಡಿದೆ. ಇಲ್ಲಿಯ ಊಟದಲ್ಲಿ ವೈವಿಧ್ಯತೆ ಇದೆ. ಕಾಳು ಸೊಪ್ಪು ಹಾಗೂ ತರಕಾರಿಯನ್ನು ಹೆಚ್ಚು ಬಳಸಲಾಗುತ್ತದೆ. ಜೋಳ ಮತ್ತು ಸಜ್ಜೆಯಂಥ ಸಿರಿಧಾನ್ಯವನ್ನೂ ಬಳಸಲಾಗುತ್ತದೆ’ ಎಂದು ಶೋಭಾ ಹೇಳಿದರು. ‘ಇಂಥ ಆಹಾರ ಸೇವನೆಯಿಂದ ಪೌಷ್ಟಿಕಾಂಶ ದೊರಕುತ್ತದೆ. ಆದರೆ ನಾವು ಈ ತರಹದ ಊಟದ ಸೇವನೆ ಕಡಿಮೆ ಮಾಡುತ್ತಿದ್ದೇವೆ. ಜಂಕ್ ಫುಡ್‌ನ ಬೆನ್ನು ಬಿದ್ದಿದ್ದೇವೆ. ಇಂಥ ಫುಡ್‌ನಲ್ಲಿ ಫೈಬರ್‌ ಇರುವುದಿಲ್ಲ. ಸೇವಿಸಿದರೂ ಪೋಷಕಾಂಶ ದೊರಕುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.