ADVERTISEMENT

ಕಲಬುರಗಿ | ಕಾಳಸಂತೆಯಲ್ಲಿ ‘ಪಡಿತರ ಅಕ್ಕಿ’ ಸದ್ದು

ಬಡವರ ಅನ್ನಕ್ಕೆ ಕನ್ನ ಹಾಕುವ ಪ್ರವೃತ್ತಿಗೆ ಬೀಳದ ಬ್ರೇಕ್‌; ವರ್ಷದಿಂದ ವರ್ಷಕ್ಕೆ ಪ್ರಕರಣ ಹೆಚ್ಚಳ

ಬಸೀರ ಅಹ್ಮದ್ ನಗಾರಿ
Published 29 ಮಾರ್ಚ್ 2025, 5:58 IST
Last Updated 29 ಮಾರ್ಚ್ 2025, 5:58 IST
ಭೀಮರಾಯ ಕಲ್ಲೂರು
ಭೀಮರಾಯ ಕಲ್ಲೂರು   

ಕಲಬುರಗಿ: ಜಿಲ್ಲೆಯಲ್ಲಿ ಬಡವರ ‘ಅನ್ನ’ಕ್ಕೆ ಕನ್ನ ಹಾಕುವ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಪಡಿತರ ಧಾನ್ಯಗಳನ್ನು ಕಾಳಸಂತೆಯಲ್ಲಿ ಅಕ್ರಮ ಖರೀದಿ, ಮಾರಾಟ, ಸಾಗಣೆಗೆ ಸಂಬಂಧಿಸಿದಂತೆ 2024ರ ಏಪ್ರಿಲ್‌ನಿಂದ 2025ರ ಮಾರ್ಚ್ ಅಂತ್ಯದ ತನಕ 44 ಪ್ರಕರಣಗಳು ದಾಖಲಾಗಿವೆ. ಬರೋಬ್ಬರಿ ₹ 1.40 ಕೋಟಿ ಮೊತ್ತದ ಪಡಿತರ ಧಾನ್ಯಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಅವಧಿಯಲ್ಲಿ 2,923 ಕ್ವಿಂಟಲ್‌ ಅಕ್ಕಿ, 295 ಕ್ವಿಂಟಲ್‌ ಗೋಧಿ, 268 ಕ್ವಿಂಟಲ್‌ ಜೋಳವನ್ನು ಜಪ್ತಿ ಮಾಡಲಾಗಿದೆ. ಇದರ ಒಟ್ಟು ಮೌಲ್ಯ ₹ 1.40 ಕೋಟಿ. ಈ ಸಂಬಂಧ 85 ಆರೋಪಿಗಳ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಅಗತ್ಯ ವಸ್ತುಗಳ ಕಾಯ್ದೆ–1955ರಡಿ ಪ್ರಕರಣ ದಾಖಲಾಗಿವೆ.

‘ಪಡಿತರ ಧಾನ್ಯಗಳ ಅಕ್ರಮ ಸಾಗಣೆಗೆ ಬಳಸಿದ 24 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಅದರ ಒಟ್ಟು ಮೌಲ್ಯ ₹ 79.35 ಲಕ್ಷ. ಜಪ್ತಿ ಮಾಡಿರುವ ಧಾನ್ಯ ಹಾಗೂ ವಾಹನಗಳ ಒಟ್ಟು ಮೊತ್ತ ₹ 2.19 ಕೋಟಿ’ ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.

ADVERTISEMENT

ಅಕ್ರಮ ಪಡಿತರ ಧಾನ್ಯಕ್ಕೆ ಸಂಬಂಧಿಸಿದಂತೆ 2023–2024ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 37 ಪ್ರಕರಣಗಳು ವರದಿಯಾಗಿದ್ದವು. ಆಗ 1,621 ಕ್ವಿಂಟಲ್ ಅಕ್ಕಿ, 59 ಕ್ವಿಂಟಲ್ ಗೋಧಿ ಹಾಗೂ 22 ಕ್ವಿಂಟಲ್ ಜೋಳ ಜಪ್ತಿ ಮಾಡಲಾಗಿತ್ತು.

ದುಡ್ಡಿನ ಬದಲು ಅಕ್ಕಿ; ಕಾಳಸಂತೆಯಲ್ಲಿ ಸುಗ್ಗಿ?

ಅಕ್ಕಿ ಕೊರತೆ ಕಾರಣ ಸರ್ಕಾರ ಈವರೆಗೆ ರಾಜ್ಯದಾದ್ಯಂತ ಬಿಪಿಎಲ್‌ ಕಾರ್ಡ್‌ದಾರರಿಗೆ 5 ಕೆ.ಜಿ ಅಕ್ಕಿ ಮತ್ತು ಮಿಕ್ಕುಳಿದ 5 ಕೆ.ಜಿ ಅಕ್ಕಿ ಬದಲಿಗೆ ಹಣ ಕೊಡುತ್ತಿತ್ತು. ಫೆಬ್ರುವರಿಯಲ್ಲಿ 5 ಕೆ.ಜಿ ಅಕ್ಕಿ ಮಾತ್ರ ವಿತರಿಸಲಾಗಿದೆ. ಬಾಕಿಯಿರುವ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಯೊಂದಿಗೆ ಸೇರಿಸಿ ಮಾರ್ಚ್‌ನಲ್ಲಿ ಒಟ್ಟು 15 ಕೆ.ಜಿ ಅಕ್ಕಿ ಕೊಡಲಾಗಿದೆ. ಸರ್ಕಾರ ನೀಡುತ್ತಿರುವ ಅಕ್ಕಿಯ ಪ್ರಮಾಣ ಹೆಚ್ಚಿದ ಬೆನ್ನಲ್ಲೇ ಕಾಳಸಂತೆ ಚಟುವಟಿಕೆಗಳೂ ಬಿರುಸು ಪಡೆದಿವೆ.

ಮಾರ್ಚ್‌ ತಿಂಗಳೊಂದರಲ್ಲೇ 18 ಮಂದಿ ವಿರುದ್ಧ ಏಳು ಪ್ರಕರಣಗಳು ದಾಖಲಿಸಿ, ₹ 17.70 ಲಕ್ಷ ಮೌಲ್ಯದ 515 ಕ್ವಿಂಟಲ್ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿದೆ.

‘ಸಾರ್ವಜನಿಕರಿಂದ ಕಡಿಮೆ ಹಣಕ್ಕೆ ಅಕ್ಕಿ ಸಂಗ್ರಹಿಸುವ ದಂಧೆಕೋರರು ಅದನ್ನು ಮಿಲ್‌ಗಳು, ಹೋಟೆಲ್‌ಗಳು ಹಾಗೂ ಕಾಳಸಂತೆಯಲ್ಲಿ ಅಧಿಕ ಬೆಲೆಗೆ ಮಾರುತ್ತಿದ್ದಾರೆ. ಇದೊಂದು ವ್ಯವಸ್ಥಿತ ಜಾಲ. ಇದರೊಂದಿಗೆ ಕೆಲವು ಫಲಾನುಭವಿಗಳೂ ಇಂಥ ಚಟುವಟಿಕೆಯಲ್ಲಿ ಪಾಲ್ಗೊಂಡಿರುವುದು ಗಮನಕ್ಕೆ ಬಂದಿದ್ದು, ಎಂಟು ಕಾರ್ಡ್‌ದಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಅಂಕಿ– ಅಂಶ ತಾಲ್ಲೂಕು; ಪ್ರಕರಣಗಳ ಸಂಖ್ಯೆ; ವಶಕ್ಕೆ ಪಡೆದ ಧಾನ್ಯಗಳ ಮೌಲ್ಯ(₹ಲಕ್ಷಗಳಲ್ಲಿ) ಅಫಜಲಪುರ; 3; 2.22 ಆಳಂದ; 9;24.94 ಚಿಂಚೋಳಿ;2;14.28 ಚಿತ್ತಾಪುರ;2;1.87 ಜೇವರ್ಗಿ; 3;4.37 ಸೇಡಂ;2;11.65 ಕಲಬುರಗಿ ಗ್ರಾಮೀಣ;1; 1.41 ಕಲಬುರಗಿ ನಗರ; 21;75.17 ಶಹಾಬಾದ್; 1;4.33

‘ಚುರುಕಿನ ದಾಳಿಗೆ 8 ತಂಡಗಳ ರಚನೆ’ ‘ಪಡಿತರ ಧಾನ್ಯಗಳ ಅಕ್ರಮ ಸಂಗ್ರಹ ಮಾರಾಟ ಖರೀದಿ ಮೇಲೆ ಪೊಲೀಸರ ಜೊತೆಗೂಡಿ ಜಿಲ್ಲೆಯಲ್ಲಿ ಹದ್ದಿನ ಕಣ್ಣಿಡಲಾಗಿದೆ. ಈ ಸಂಬಂಧ ಆಹಾರ ಇಲಾಖೆಯಿಂದ ಎಂಟು ತಂಡಗಳನ್ನು ರಚಿಸಲಾಗಿದ್ದು ನಿರಂತರ ನಿಗಾ ವಹಿಸಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪಡಿತರ ಚೀಟಿದಾರರಿಗೆ ಹಂಚಿಕೆಯಾದ ಧಾನ್ಯ ಅಕ್ರಮವಾಗಿ ಸಂಗ್ರಹಿಸುವುದು ಅದನ್ನು ಖರೀದಿಸುವುದು ಹೆಚ್ಚಿನ ಬೆಲೆಗೆ ಮಾರುವುದು ಗಂಭೀರ ಅಪರಾಧ. ಪಡಿತರ ಚೀಟಿದಾರರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಅಂಥವರ ಪಡಿತರ ಚೀಟಿ ರದ್ದುಗೊಳಿಸಲು ಅವಕಾಶವಿದೆ’ ಎಂದು ಆಹಾರ ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಭೀಮರಾಯ ಕಲ್ಲೂರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಇಂಥ ಪ್ರಕರಣಗಳು ಕಂಡರೆ ಸಾರ್ವಜನಿಕರು 1967/ 18004259339/ 18004254445 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿದಾರರ ಮಾಹಿತಿ ಗೋಪ್ಯವಾಗಿ ಇಡಲಾಗುವುದು’ ಎಂದರು.

ಕಲಬುರಗಿ ಆಳಂದದಲ್ಲೇ ಹೆಚ್ಚು ಜಿಲ್ಲೆಯಲ್ಲಿ ಕಲಬುರಗಿ ತಾಲ್ಲೂಕು ಹಾಗೂ ಆಳಂದ ತಾಲ್ಲೂಕಿನಲ್ಲಿ ಪಡಿತರ ಧಾನ್ಯಗಳ ಕಾಳಸಂತೆ ವಹಿವಾಟು ಅವ್ಯಾಹತವಾಗಿ ನಡೆಯುತ್ತಿದೆ. ವಿಶೇಷವಾಗಿ ಕಲಬುರಗಿ ನಗರದ ಕೆಬಿಎನ್‌ ದರ್ಗಾ ಪ್ರದೇಶ ಎಂ.ಎಸ್‌.ಕೆ ಮಿಲ್ ಪ್ರದೇಶ ಆಳಂದ ಚೆಕ್‌ಪೋಸ್ಟ್‌ ಪ್ರದೇಶ ಹಾಗೂ ತಾರಫೈಲ್‌ ಪ್ರದೇಶದಲ್ಲಿ ಪಡಿತರ ಅಕ್ರಮ ವಹಿವಾಟು ಪ್ರಮಾಣ ಹೆಚ್ಚಿದೆ. ಕಲಬುರಗಿ ನಗರ ತಾಲ್ಲೂಕಿನಲ್ಲಿ ಕಳೆದೊಂದು ವರ್ಷದಲ್ಲಿ 21 ಪ್ರಕರಣ ದಾಖಲಾಗಿದ್ದು ₹75.17 ಲಕ್ಷ ಮೌಲ್ಯದ ಪಡಿತರ ಧಾನ್ಯ ವಶಕ್ಕೆ ಪಡೆಯಲಾಗಿದೆ. ಆಳಂದ ತಾಲ್ಲೂಕಿನಲ್ಲಿ 9 ಪ್ರಕರಣ ದಾಖಲಿಸಿ ₹24.94 ಲಕ್ಷ ಮೌಲ್ಯದ ಧಾನ್ಯಗಳನ್ನು ಜಪ್ತಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.