ADVERTISEMENT

ಮುಳ್ಳುಹಂದಿಯನ್ನು ಕೊಂದು ಟಿಕ್ ಟಾಕ್‌ನಲ್ಲಿ ವಿಡಿಯೊ ಹಂಚಿಕೊಂಡ ಆರೋಪಿಗಳು

ಒಬ್ಬನ ಬಂಧನ; ತಲೆ ಮರೆಸಿಕೊಂಡ ಮೂವರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 16:36 IST
Last Updated 1 ಮಾರ್ಚ್ 2020, 16:36 IST
   

ಕಲಬುರ್ಗಿ: ನಾಲ್ವರು ಯುವಕರು ಅಳಿವಿನಂಚಿನಲ್ಲಿರುವ ಮುಳ್ಳುಹಂದಿಯನ್ನು ಕೊಂದು ಸುಟ್ಟು ಹಾಕಿದ ವಿಡಿಯೊವನ್ನು ಟಿಕ್‌ ಟಾಕ್‌ನಲ್ಲಿ ಹರಿಬಿಟ್ಟಿದ್ದನ್ನು ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ವರ ಪೈಕಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಬಿರಾಳ ಹಿಸ್ಸಾ ಗ್ರಾಮದ ಮಂಜುನಾಥ ಬಡಿಗೇರ (23) ಎಂಬಾತನನ್ನು ಭಾನುವಾರ ಬಂಧಿಸಿದ್ದಾರೆ.

ಟಿಕ್‌ ಟಾಕ್‌ನಲ್ಲಿದ್ದ ವಿಡಿಯೊವನ್ನು ಬೆಂಗಳೂರಿನ ಅರಣ್ಯ ಇಲಾಖೆಯ ಕೇಂದ್ರ ಕಚೇರಿ ಅಧಿಕಾರಿಗಳು ಗಮನಿಸಿದ್ದಾರೆ. ತಕ್ಷಣ ನಾಲ್ವರೂ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಕಲಬುರ್ಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ) ಎಂ.ಎಂ.ವಾನತಿ ಅವರಿಗೆ ಸೂಚನೆ ನೀಡಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ವಾನತಿ ಅವರು ವಲಯ ಅರಣ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮಂಜುನಾಥನನ್ನು ಬಂಧಿಸಿದ್ದಾರೆ.

ಪರಾರಿಯಾಗಿರುವ ಭಾಗಪ್ಪ (23), ಭೀಮಪ್ಪ (19) ಹಾಗೂ ನಾಗೇಶ್‌ (20) ಎಂಬುವವರ ಪತ್ತೆಗೆ ಜಾಲ ಬೀಸಲಾಗಿದೆ.

ADVERTISEMENT

ಯಡ್ರಾಮಿ ತಾಲ್ಲೂಕು ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ಗಡಿಗೆ ಹೊಂದಿಕೊಂಡಿದೆ. ಹೊನ್ನಳ್ಳಿಯ ಕುರುಚಲು ಕಾಡಿನಲ್ಲಿ ಮುಳ್ಳು ಹಂದಿ ಇದ್ದುದನ್ನು ಪತ್ತೆಹಚ್ಚಿದ ನಾಲ್ವರೂ ಆರೋಪಿಗಳು ಅದನ್ನು ಹಿಡಿದು ಕೊಂದು ಹಾಕಿ, ಮುಳ್ಳುಗಳನ್ನು ಕಿತ್ತು ನಂತರ ಸುಟ್ಟು ತಿಂದಿದ್ದಾರೆ. ಇವೆಲ್ಲವನ್ನೂ ಮೂರು ವಿಡಿಯೊಗಳನ್ನು ಮಾಡಿ ಟಿಕ್‌ಟಾಕ್‌ನಲ್ಲಿ ಹರಿಬಿಟ್ಟಿದ್ದರು.

ಘಟನೆ ಕುರಿತು ಮಾಹಿತಿ ನೀಡಿದ ವಾನತಿ, ‘ಮುಳ್ಳು ಹಂದಿಯನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಪನಿಯಮ 4ರ ಪ್ರಕಾರ ಸಂರಕ್ಷಿತ ಪ್ರಾಣಿ ಎಂದು ಗುರುತಿಸಲಾಗಿದೆ. ಹೀಗಾಗಿ, ಅಧಿಕಾರಿಗಳ ಸೂಚನೆಯಂತೆ ಯುವಕನನ್ನು ವಶಕ್ಕೆ ಪಡೆದಿದ್ದೇವೆ. ಮಂಜುನಾಥನನ್ನು ವಿಜಯಪುರ ಅರಣ್ಯ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.