
ಚಿಂಚೊಳಿ: ನಿಜಾಮನ ಆಳ್ವಿಕೆಯ ಕಾಲದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ್ದ ಕ್ರೈಸ್ತ ಧರ್ಮಕ್ಕೆ ಸೇರಿದ ವೈದ್ಯರೊಬ್ಬರ ಸಮಾಧಿ ಪಟ್ಟಣದಲ್ಲಿ ಅನಾಥವಾಗಿದೆ. ಚಿಂಚೋಳಿಯ ಚರಿತ್ರೆ ಮತ್ತು ಸಂಸ್ಕೃತಿಗೆ ಪೂರಕ ದಾಖಲೆಯಾಗಿರುವ ಪಾರಂಪರಿಕ ತಾಣ ಪ್ರಸ್ತುತ ನಿರ್ಲಕ್ಷಕ್ಕೆ ಒಳಗಾಗಿದ್ದು ಅಳಿವಿನಂಚಿನಲ್ಲಿದೆ.
ಚಿಂಚೋಳಿಯನ್ನು ಭಾವೈಕ್ಯದ ನೆಲೆ ಎಂಬುದಕ್ಕೆ ಈ ಸಮಾಧಿ ಸಾಕ್ಷಿಯಾಗಿದೆ. ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿಯ ಗಾಂಧಿ ಭವನದ ಹಿಂದುಗಡೆ ಬರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಿಂದುಗಡೆಯಿರುವ ಈ ಸಮಾಧಿ ಸಂರಕ್ಷಣೆಯಿಲ್ಲದೆ ಹಾಳಾಗುತ್ತಿದೆ.
ಚಿಂಚೋಳಿಯಿಂದ ಕಲಬುರಗಿಗೆ ತೆರಳಲು ಆಗ ಮುಲ್ಲಾಮಾರಿ ನದಿಗೆ ಯಾವುದೇ ಸೇತುವೆ ಇರಲಿಲ್ಲ. ಹೀಗಾಗಿ ಜನರು ಸುಲೇಪೇಟ ಹಳೆ ದಾರಿಯಿಂದಲೇ ತೆರಳುತಿದ್ದರು. ಹೀಗಾಗಿ ಅಂದು ಮುಖ್ಯರಸ್ತೆಯಾಗಿದ್ದರಿಂದಲೇ ಇದರ ಪಕ್ಕದಲ್ಲಿಯೇ ಸಮಾಧಿ ಮಾಡಿದ್ದು ಗಮನಾರ್ಹವಾಗಿದೆ.
ರಸ್ತೆಯ ಪಕ್ಕಕ್ಕೆ ಅಂದರೆ ಸುಮಾರು 50 ಅಡಿ ಅಂತರದಲ್ಲಿ ಸಮಾಧಿಯಿದ್ದು ಹಿಂದುಗಡೆ 50 ಅಡಿ ಅಂತರದಲ್ಲಿ ನಾಲೆಯಿದೆ. ಇದರ ಪಕ್ಕದಿಂದಲೇ ಚಿಂಚೋಳಿ ಸರ್ಕಾರಿ ಕೇಂದ್ರ ಪ್ರಾಥಮಿಕ ಶಾಲೆಗೆ ತೆರಳುವ ದಾರಿಯಿತ್ತು ಎಂದು ಹಿರಿಯರು ಹೇಳುತ್ತಾರೆ.
ಜಾನ್ ಮತ್ತು ಎಂಜಿಲಿನಾ ಕರ್ಟಿನ್ ಅವರ ಪ್ರೀತಿಪಾತ್ರ ಪುತ್ರ ಡಾ.ಪ್ಯಾಟ್ರಿಕ್ ಕಾರ್ನೆಲಿಯಸ್ ಕರ್ಟಿನ್ ಎಂಬ ವೈದ್ಯರೊಬ್ಬರು ತಮ್ಮ 28ನೇ ವಯಸ್ಸಿನಲ್ಲಿ ಅಂದರೆ 27ನೇ ಏಪ್ರಿಲ್ 97ರಂದು ನಿಧನರಾಗಿರುವುದು ಮತ್ತು ಇವರು ನಿಜಾಮನ ವೈದ್ಯಕೀಯ ಸೇವೆಯಲ್ಲಿರುವುದು ಈ ಸಮಾಧಿ ಸಾರುತ್ತಿದೆ.
ಸುಣ್ಣದ ಕಲ್ಲಿನಿಂದ ನಿರ್ಮಿಸಿದ ಈ ಸಮಾಧಿಯ ಕಟ್ಟಡದ ಉತ್ತರ ದಿಕ್ಕಿನಲ್ಲಿ ಸಿಲುಬೆ ಇದೆ. ಜತೆಗೆ ಸಮಾಧಿಯ ಮೇಲೆ ಹಾಸಿದ ಮೂರು ತುಂಡಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಬಂಡೆಯ ಮೇಲೆ ಮೊದಲಿಗೆ ಸಿಲುಬೆಯ ಚಿಹ್ನೆಯಿದ್ದು, ಅದರ ಕೆಳಗೆ ಡಾ.ಪ್ಯಾಟ್ರಿಕ್ ಕಾರ್ನೆಲಿಯಸ್ ಕರ್ಟಿನ್ ಅವರ ಪ್ರೀತಿಯ ನೆನಪಿನಲ್ಲಿ ಎಂಬ ಬರಹದೊಂದಿಗೆ ಆರಂಭವಾಗಿ ಅವರು ಹೈದರಾಬಾದ್ ನಿಜಾಮನ ವೈದ್ಯಕೀಯ ಸೇವೆಯಲ್ಲಿರುವುದು, ತಂದೆ–ತಾಯಿ ವಿವರ ದಾಖಲಿಸಲಾಗಿದೆ.
ಪ್ರೀತಿಯ ಮಗನ ಶರೀರದ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಬರೆದಿದ್ದಲ್ಲದೇ, ಇವರು ಮೃತಪಟ್ಟಿಲ್ಲ ಇವರು ಮಲಗಿದ್ದಾರೆ ಎಂಬ ವಿವರದ ಬರಹದಲ್ಲಿ ಕಾಣಬಹುದಾಗಿದೆ. ಈ ಸಮಾಧಿಯ ಉತ್ತರ ದಿಕ್ಕಿನಲ್ಲಿ ಸಿಲುಬೆಗೆ ಹೊಂದಿಕೊಂಡಂತೆ ಬೇವಿನ ಮರ ಬೆಳೆದಿದ್ದು ಇದರಿಂದಲೇ ಸಮಾಧಿಯ ಗೋಡೆ ಕುಸಿದಿದೆ. ಮೇಲೆ ಹಾಸಿದ ಬರವಣಿಗೆಯುಳ್ಳ ಬಂಡೆ ಮೂರು ತುಂಡಾಗಿದ್ದು, ಒಂದು ಚಿಕ್ಕ ತುಂಡು ಅವಸಾನ ಹೊಂದಿದೆ. ಉಳಿದಂತೆ ಮುಖ್ಯಮಾಹಿತಿ ಹೊಂದಿರುವ ಬರವಣಿಗೆ ಇರುವುದು ಚರಿತ್ರೆಯನ್ನು ಸಾಕ್ಷೀಕರಿಸುತ್ತದೆ.
ಈ ಬಗ್ಗೆ ಕಲಬುರಗಿ ಜಿಲ್ಲಾ ಗೆಜೆಟೀಯರ್‌ನ ಚಿಂಚೋಳಿ ಪಟ್ಟಣದ ಚರಿತ್ರೆಯ ಪುಟದಲ್ಲಿ ಉಲ್ಲೇಖವಿದ್ದು, ಇದೊಂದು ‘ಇಗರ್ಜಿ’ಯಾಗಿದೆ. ಇದು ಸುಮಾರು 4 ಶತಮಾನಗಳ ಹಳೆಯದಾಗಿದೆ ಎಂದು ಬರೆಯಲಾಗಿದೆ.
ಇದೊಂದು ಸಮಾಧಿ ಅಷ್ಟೆ ಅಲ್ಲ ಇದು ಚಿಂಚೋಳಿಯ ಸಾಂಸ್ಕೃತಿಯ ಚರಿತ್ರೆಯ ಪುಟದಲ್ಲಿ ಒಂದು ಮಹತ್ವದ ಅಧ್ಯಾಯವಾಗಿದೆ. ಕ್ರೈಸ್ತ, ಮುಸ್ಲಿಂ ಮತ್ತು ಹಿಂದೂಗಳ ಸಂಗಮ ತಾಣ ಚಿಂಚೋಳಿ ಎನ್ನಬಹುದಾಗಿದೆ. ಇದರ ಸಂರಕ್ಷಣೆ ಜತೆಗೆ ಕಾಯಕಲ್ಪ ನೀಡಬೇಕು ಎಂದು ಮುಖಂಡರಾದ ಅವಿರೋಧ ಕಟ್ಟಿಮನಿ ಹಾಗೂ ನರಸಪ್ಪ ಕಿವುಣೋರ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.