ADVERTISEMENT

ಬಡತನದ ಬೇಗೆಯಿಂದ ರಾಷ್ಟ್ರಪ್ರಶಸ್ತಿಯವರೆಗೆ...

ಹದಿನೆಂಟು ವರ್ಷ ಗುರುವಿನ ಮನೆಯಲ್ಲಿದ್ದು ಶಿಲ್ಪಕಲೆ ಕಲಿತ ಚಂದ್ರಶೇಖರ ಶಿಲ್ಪಿ

ಮನೋಜ ಕುಮಾರ್ ಗುದ್ದಿ
Published 21 ಅಕ್ಟೋಬರ್ 2025, 4:23 IST
Last Updated 21 ಅಕ್ಟೋಬರ್ 2025, 4:23 IST
ಮೂರ್ತಿ ಕೆತ್ತನೆಯಲ್ಲಿ ತಲ್ಲೀನರಾಗಿರುವ ಚಂದ್ರಶೇಖರ ಶಿಲ್ಪಿ
ಮೂರ್ತಿ ಕೆತ್ತನೆಯಲ್ಲಿ ತಲ್ಲೀನರಾಗಿರುವ ಚಂದ್ರಶೇಖರ ಶಿಲ್ಪಿ   

ಕಲಬುರಗಿ: ಗುರುವಿನ ಮನೆಯಲ್ಲಿ 18 ವರ್ಷವಿದ್ದು, ಗುರುವಾಕ್ಯ ಮೀರದೇ ಹೇಳಿದ ಕೆಲಸ ಮಾಡುತ್ತಲೇ ಕಾಷ್ಟ (ಕಟ್ಟಿಗೆ) ಕಲೆಯನ್ನು ಕರಗತ ಮಾಡಿಕೊಂಡ ಹಿರಿಯ ಶಿಲ್ಪಕಲಾವಿದ ಚಂದ್ರಶೇಖರ ಶಿಲ್ಪಿ ಅವರ ಸತತ ಶ್ರಮ ಇಂದು ರಾಷ್ಟ್ರಪ್ರಶಸ್ತಿವರೆಗೆ ತಂದು ನಿಲ್ಲಿಸಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರಾ ಗ್ರಾಮದವರಾದ, ದಶಕಗಳಿಂದ ಕಲಬುರಗಿಯ ನಿವಾಸಿಯಾಗಿರುವ ಚಂದ್ರಶೇಖರ ವೈ. ಶಿಲ್ಪಿ (71) ಅವರಿಗೆ ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯದ ಕರಕುಶಲ ವಿಭಾಗ ನೀಡುವ 2024ನೇ ಸಾಲಿನ ರಾಷ್ಟ್ರಪ್ರಶಸ್ತಿ ಅರಸಿಕೊಂಡು ಬಂದಿದೆ. ಡಿಸೆಂಬರ್ 9ರಂದು ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ₹ 2 ಲಕ್ಷ ಮೊತ್ತ ಒಳಗೊಂಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 

ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತಿಗಿಳಿದ ಅವರು ತಮ್ಮ ಜೀವನದ ಅರ್ಧ ಭಾಗ ಕಷ್ಟದಲ್ಲಿಯೇ ಕಳೆದ, ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಸ್ಥಿತಿಯನ್ನು ನೆನೆಸಿಕೊಳ್ಳುತ್ತಲೇ ಕಣ್ಣೀರಾದರು.

ADVERTISEMENT

ಕಕ್ಕೇರಾದ ಯಮನಪ್ಪ–ಅಂಬ್ರಮ್ಮ ದಂಪತಿಯ ಪುತ್ರ ಚಂದ್ರಶೇಖರ ಅವರು ಪ್ರಾಥಮಿಕ ಶಾಲೆಯಲ್ಲಿ ತಮ್ಮ ಶುಲ್ಕವನ್ನು ಪಾವತಿಸಿ ವಿದ್ಯೆ ಕಲಿಸಿದ ಗುರುಲಿಂಗಯ್ಯ ಹಿರೇಮಠ ಹಾಗೂ 12ನೇ ವಯಸ್ಸಿಗೇ ಶಿಲ್ಪಕಲೆ ಕಲಿಸಿದ ನಾಗಣ್ಣ ಬಡಿಗೇರ–ಕಮಲಮ್ಮ ದಂಪತಿಯ ಭಾವಚಿತ್ರವನ್ನು ತಮ್ಮ ಮನೆಯಲ್ಲಿ ಪೂಜಿಸುತ್ತಿದ್ದಾರೆ.

ಒಮ್ಮೆ ಶಾಲೆಯಲ್ಲಿ ಲಕ್ಕಿ ಜಬರಿಯಿಂದ ಚಂದ್ರಶೇಖರ ಅವರಿಗೆ ಬೊಕ್ಕೆ ಎದ್ದಿದ್ದ ಭಾಗಕ್ಕೆ ಹೊಡೆದಾಗ ಎರಡೂ ಕಾಲುಗಳಲ್ಲಿ ರಕ್ತ ಹರಿಯುತ್ತದೆ. ಅದಾದ ಬಳಿಕ ಗುರುಲಿಂಗಯ್ಯ ಶಿಷ್ಯನ ಗಾಯಕ್ಕೆ ಔಷಧವನ್ನು ತಾವೇ ಹಚ್ಚಿ ಆರೈಕೆ ಮಾಡಿದ್ದನ್ನು ಈಗಲೂ ಗೌರವದಿಂದ ನೆನೆಯುತ್ತಾರೆ. 6ನೇ ತರಗತಿಯ ಬಳಿಕ ಮುಂದೇನು ಎಂದು ಯೋಚಿಸುತ್ತಿರುವಾಗಲೇ ಕಕ್ಕೇರಾದಿಂದ 12 ಕಿ.ಮೀ. ದೂರದ ಗೋನಾಲದಲ್ಲಿ ನಾಗಣ್ಣ ಬಡಿಗೇರ ಅವರ ಬಳಿ ಶಿಷ್ಯವೃತ್ತಿಗೆ ಸೇರುತ್ತಾರೆ. ಸ್ವಭಾವದಲ್ಲಿ ತುಂಟತನವಿದ್ದ ಚಂದ್ರಶೇಖರ ಶಿಲ್ಪಿ ಅವರ ಬಗ್ಗೆ ಕೆಲವರು ಆಡಿದ ಹಗುರ ಮಾತು ಹಟತೊಟ್ಟು ವಿದ್ಯೆ ಕಲಿಯಲೇಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು. 

ಅಂದಿನಿಂದ ನಾಗಣ್ಣ ಅವರ ಶಿಷ್ಯರಾಗಿ ಶಿಲ್ಪಕಲೆಯನ್ನು ಅಭ್ಯಾಸ ಮಾಡುತ್ತಾರೆ. ಚಂದ್ರಶೇಖರ ಅವರಿಗೆ ಪುತ್ರಿ ದೇವಕ್ಕೆಮ್ಮ ಅವರನ್ನೇ ಗುರು ಧಾರೆ ಎರೆದು ಕೊಡುತ್ತಾರೆ. ಕೆಲ ವರ್ಷಗಳ ಬಳಿಕ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬಾಗಲವಾಟ ಗ್ರಾಮದಲ್ಲಿ ಅಂಕಣದ ಮನೆಯಲ್ಲಿ ದ್ವಾರಬಾಗಿಲು, ಕಂಬಗಳಿಗೆ ಚಿತ್ತಾರ ಮೂಡಿಸುವ ಕೆಲಸಕ್ಕೆ ಇವರನ್ನು ನಿಯೋಜಿಸಲಾಗುತ್ತದೆ. ಕಂಬದ ಕೆಳಭಾಗದಲ್ಲಿ ಇರಿಸಲು ಗದ್ದಿಕಲ್ಲುಗಳನ್ನು ಕೆತ್ತುವವರು ಕೊನೆಗಳಿಗೆಯಲ್ಲಿ ಕೈಕೊಟ್ಟಾಗ ಆ ಕೆಲಸವನ್ನೂ ಇವರೇ ಯಶಸ್ವಿಯಾಗಿ ಮಾಡಿ ಪೂರೈಸುತ್ತಾರೆ. ಕಲ್ಲು, ಪಂಚಲೋಹದ ಕೆತ್ತನೆಗೆ ತಮಗೆ ಗುರಪ್ಪ ಸಾಧು ಎಂಬ ಕಲಾವಿದರೇ ಸ್ಫೂರ್ತಿ ಎಂದು ನೆನೆಯುತ್ತಾರೆ. 

ಶಿಲ್ಪಕಲೆಯನ್ನು ಅಧ್ಯಯನ ಮಾಡಲು ಬೇಲೂರು, ಹಳೇಬೀಡು, ಕಾಳಗಿ, ಶಿರವಾಳ ಸೇರಿದಂತೆ ಹಲವು ದೇವಸ್ಥಾನಗಳಿಗೆ ತೆರಳಿ ಅಧ್ಯಯನ ಮಾಡುತ್ತಾರೆ. ಕ್ಯಾಮೆರಾ ಇಲ್ಲದ ಆ ಕಾಲದಲ್ಲಿ ಶಿಲ್ಪಗಳ ಬಗ್ಗೆ ಮನಸ್ಸಿನಲ್ಲೇ ಅಂದಾಜು ಮಾಡಿಕೊಂಡು, ಪೆನ್ಸಿಲ್‌ನಲ್ಲಿ ಗುರುತು ಮಾಡಿಕೊಂಡು ತಮ್ಮ ಕಲೆಯಲ್ಲಿ ಅಳವಡಿಸಿಕೊಂಡಿದ್ದಾಗಿ ಚಂದ್ರಶೇಖರ ಶಿಲ್ಪಿ ಹೇಳುತ್ತಾರೆ.

ಭಾರತ ಸರ್ಕಾರವು ಶಿಲ್ಪಕಲೆಯಲ್ಲಿ ನೀಡುವ ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾದ ಚಂದ್ರಶೇಖರ ಶಿಲ್ಪಿ ಅವರು ತಯಾರಿಸಿದ ಅಪರೂಪದ ಕೆತ್ತನೆಯ ದ್ವಾರ ಬಾಗಿಲು 
ಶಿಲ್ಪಕಲಾ ಅಕಾಡೆಮಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ಯುವಕಲಾವಿದರಿಗೆ ಹೆಚ್ಚು ಕಾರ್ಯಾಗಾರ ನಡೆಸಲು ಉತ್ತೇಜನ ನೀಡಬೇಕು. ಅಂದಾಗ ಈ ಕಲೆ ಇನ್ನಷ್ಟು ಬೆಳೆಯಲಿದೆ
ಚಂದ್ರಶೇಖರ ಶಿಲ್ಪಿ ಹಿರಿಯ ಶಿಲ್ಪಕಲಾವಿದ

ದೇವಸ್ಥಾನಗಳಿಗೆ ವಿಗ್ರಹಗಳ ಕೆತ್ತನೆ

ಶಿಲ್ಪಕಲೆಯಲ್ಲಿ ಪಳಗಿದ ಬಳಿಕ ಚಂದ್ರಶೇಖರ ಶಿಲ್ಪಿ ಅವರು ನವಗ್ರಹ ವೃಂದಾವನ ಆಂಜನೇಯ ವಿಶ್ವಕರ್ಮ ದುರ್ಗೆ ಸೇರಿದಂತೆ ಹಲವು ಮೂರ್ತಿಗಳನ್ನು ಕೆತ್ತಿದ್ದಾರೆ. ಆ ಮೂಲಕ ಸಗರನಾಡಿನ ಕಲಾ ಪರಂಪರೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಹಲವು ವಿಗ್ರಹಗಳನ್ನು ಉಚಿತವಾಗಿಯೇ ಮಾಡಿದ್ದಾರೆ. ಸಾಗವಾನಿ ಕಟ್ಟಿಗೆಯಲ್ಲಿ ಇವರು ಕೆತ್ತಿದ ಕುದುರೆ ಯಕ್ಷಿಣಿಯರು ದ್ವಾರಪಾಲಕರನ್ನು ಒಳಗೊಂಡ ಸೂಕ್ಷ್ಮ ಕುಸುರಿ ಕೆತ್ತನೆಯ ದ್ವಾರಬಾಗಿಲಿಗೆ ಭಾರಿ ಬೇಡಿಕೆ ಇದೆ. ಇವರು ತಯಾರಿಸಿದ ಬಾಗಿಲುಗಳು ₹40 ಲಕ್ಷದವರೆಗೂ ಮಾರಾಟವಾಗಿದೆ. ಒಂದು ದ್ವಾರಬಾಗಿಲು ಪೂರ್ಣಗೊಳಿಸಲು ಕನಿಷ್ಠ ಎರಡೂವರೆ ವರ್ಷ ಬೇಕಾಗುತ್ತದೆ. ಇವರ ಕಲಾಕೃತಿಗಳು ವಿದೇಶಕ್ಕೂ ಪ್ರಯಾಣ ಬೆಳೆಸಿವೆ. ಇವರ ಬಳಿ ಶಿಷ್ಯವೃತ್ತಿಗಾಗಿ ಇಟಲಿಯ ಕಲಾವಿದರೂ ಬಂದಿದ್ದರು. ಮೌನೇಶ ಮದರಕಲ್ ಮೌನೇಶ ಕಕ್ಕೇರಿ ವಿನೋದ ಪೋದ್ದಾರ ಸಚಿನ್ ಲೋಕರೆ ಗೋಪಾಲ ರಮೇಶ ಶಿಲ್ಪಿ ಪುತ್ರ ವಿನಾಯಕ ಹಾಗೂ ಪುತ್ರಿ ಗಾಯತ್ರಿ ಅವರಿಗೆ ಗುರುವಾಗಿ ಮಾರ್ಗದರ್ಶನ ನೀಡಿದ್ದಾರೆ.