ADVERTISEMENT

ಚಿಂಚೋಳಿ: ಸಹಜ ಸ್ಥಿತಿಗೆ ಮರಳದ ಗಡಿಕೇಶ್ವಾರ

ಜಗನ್ನಾಥ ಡಿ.ಶೇರಿಕಾರ
Published 23 ಅಕ್ಟೋಬರ್ 2021, 3:50 IST
Last Updated 23 ಅಕ್ಟೋಬರ್ 2021, 3:50 IST
ಚಿಂಚೋಳಿ ತಾಲ್ಲೂಕು ಗಡಿಕೇಶ್ವಾರ ಗ್ರಾಮದಲ್ಲಿ ಭೂಕಂಪನ ಸಂತ್ರಸ್ತರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಅವಶ್ಯಕ ವಸ್ತುಗಳ ಕಿಟ್ ಅನ್ನು ತಹಶೀಲ್ದಾರ್ ಅಂಜುಮ ತಬಸ್ಸುಮ್ ಶುಕ್ರವಾರ ವಿತರಿಸಿದರು
ಚಿಂಚೋಳಿ ತಾಲ್ಲೂಕು ಗಡಿಕೇಶ್ವಾರ ಗ್ರಾಮದಲ್ಲಿ ಭೂಕಂಪನ ಸಂತ್ರಸ್ತರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಅವಶ್ಯಕ ವಸ್ತುಗಳ ಕಿಟ್ ಅನ್ನು ತಹಶೀಲ್ದಾರ್ ಅಂಜುಮ ತಬಸ್ಸುಮ್ ಶುಕ್ರವಾರ ವಿತರಿಸಿದರು   

ಚಿಂಚೋಳಿ: ತಾಲ್ಲೂಕಿನ ಭೂಕಂಪನ ಪೀಡಿತ ಗಡಿಕೇಶ್ವಾರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿಯಿಂದ ಸಂತ್ರಸ್ತರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂಬ ಟೀಕೆ
ಕೇಳಿ ಬರುತ್ತಿದೆ.

ವಿಜ್ಞಾನಿಗಳ ಅಧ್ಯಯನ ವರದಿಗಾಗಿ ಒಂದು ತಿಂಗಳು ಕಾಯಬೇಕು. ನಂತರ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದರು. ನಿರಂತರ ಭೂಕಂಪ ಸಂಭವಿಸುತ್ತಿರುವುದರಿಂದ ಕಂಗಾಲಾದ ಜನ ತಮ್ಮ ಗೋಳು ಹೇಳಿಕೊಳ್ಳುವುದಕ್ಕೆ ಜಿಲ್ಲಾಧಿಕಾರಿ ಕರೆಸಲು ಹೆದ್ದಾರಿ ತಡೆ ಮಾಡಿದ್ದರು. ಹೋರಾಟದ ಮರುದಿನ ಬಂದ ಜಿಲ್ಲಾಧಿಕಾರಿ ಸರ್ಕಾರದ ಕಡೆಗೆ ಬೆರಳು ತೋರಿಸಿ ನಿರ್ಗಮಿಸಿದ್ದರು.

ಕಳೆದ 48 ಗಂಟೆಗಳಿಂದ ಗಡಿಕೇಶ್ವಾರದಲ್ಲಿ ಲಘು ಕಂಪನದ ಅನುಭವ ಬಂದಿಲ್ಲ. ಆದರೂ ಗಡಿಕೇಶ್ವಾರ ಜನರಲ್ಲಿ ಭಯ ದೂರವಾಗಿಲ್ಲ. ಜನರು ಮನೆಯ ಹೊರಗಡೆ, ತಾಡಪಾಲು ಶೆಡ್‌ಗಳಲ್ಲಿ ವಾಸ ಮಾಡುತ್ತಿದ್ದಾರೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳದ ಕಾರಣ ಊರು ತೊರೆದ ಜನ ಇನ್ನೂ ವಾಪಸ್ಸಾಗಿಲ್ಲ.

ADVERTISEMENT

ಸರ್ಕಾರ ಮತ್ತು ಜನಪ್ರತಿನಿಧಿಗಳ ವೈಫಲ್ಯದಿಂದಲೇ ಭೂಕಂಪ ಪೀಡಿತರಿಗೆ ಶೆಡ್ ಮರಿಚಿಕೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್ ದೂರಿದ್ದಾರೆ.

ಐಪಿ ಹೊಸಳ್ಳಿಯಲ್ಲಿ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.0 ಕ್ಕಿಂತ ಕಡಿಮೆ ಹಾಗೂ ಹಸರಗುಂಡಗಿಯಲ್ಲಿ 3.0ಕ್ಕಿಂತ ಕಡಿಮೆ ತೀವ್ರತೆ ದಾಖಲಾಗಿದ್ದರೂ ಅಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಯಿತು. ಆದರೆ ಗಡಿಕೇಶ್ವಾರ ಸುತ್ತಲಿನ ಹಳ್ಳಿಗಳಲ್ಲಿ 3ಕ್ಕಿಂತ ಹೆಚ್ಚು ಹಾಗೂ ಗರಿಷ್ಠ 4.1 ತೀವ್ರತೆ ದಾಖಲಾಗಿದ್ದರೂ ವಿಜ್ಞಾನಿಗಳ ವರದಿಗೆ ಕಾಯುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ವಿಪತ್ತುಗಳಲ್ಲಿ ರಾಜಕೀಯ ಬೇಡ: ಶಾಸಕ ರಾಜಕುಮಾರ ಪಾಟೀಲ ತೆಲ್ಕೂರು, ಸಂಸದ ಉಮೇಶ ಜಾಧವ ಮತ್ತು ಶಾಸಕ ಅವಿನಾಶ ಜಾಧವ ಜನರ ಮಧ್ಯೆ ಇದ್ದು ಅವರ ಕುಂದುಕೊರತೆ ಆಲಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಇದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದು ಸರಿಯಲ್ಲ. ವಿಪತ್ತುಗಳ ಕಾಲದಲ್ಲಿ ಪಕ್ಷ ರಾಜಕಾರಣ ಬದಿಗಿಟ್ಟು ಜನತೆಯ ಹಿತಕ್ಕಾಗಿ ಎಲ್ಲರೂ ಕೈಜೋಡಿಸಬೇಕೆಂದು ಜಿಲ್ಲಾ ಬಿಜೆಪಿ ಮುಖಂಡ ಮುಕುಂದದೇಶಪಾಂಡೆ ಹೇಳಿದ್ದಾರೆ.

ಸರ್ಕಾರ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದೆ ಎಂದು ಹಲಚೇರಾ ಗ್ರಾಮದ ಮುಖಂಡರಾದ ನಾಗಪ್ಪ ಪೂಜಾರಿ ಮತ್ತು ಸಿದ್ರಾಮ ಮಣಿಗಿರಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.