ADVERTISEMENT

ಗಾಣಗಾಪುರದ ದತ್ತಾತ್ರೇಯ ಮಹಾರಾಜ ದೇವರ ದರ್ಶನಕ್ಕೆ ಯಾತ್ರಿಕರ ನಿತ್ಯ ಪರದಾಟ

ಶಿವಾನಂದ ಹಸರಗುಂಡಗಿ
Published 25 ಆಗಸ್ಟ್ 2025, 8:18 IST
Last Updated 25 ಆಗಸ್ಟ್ 2025, 8:18 IST
ಅಫಜಲಪುರ ತಾಲ್ಲೂಕಿನ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಆವರಣದಲ್ಲಿ ಶನಿವಾರ ಯಾತ್ರಿಕರು ದರ್ಶನಕ್ಕಾಗಿ ನಿಂತಿರುವುದು
ಅಫಜಲಪುರ ತಾಲ್ಲೂಕಿನ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಆವರಣದಲ್ಲಿ ಶನಿವಾರ ಯಾತ್ರಿಕರು ದರ್ಶನಕ್ಕಾಗಿ ನಿಂತಿರುವುದು   

ಅಫಜಲಪುರ: ತಾಲ್ಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದರ್ಶನ ಪಡೆಯಲು ಭಕ್ತಾದಿಗಗಳು ಹರಸಾಹಸ ಪಡುವಂತಾಗಿದೆ. ದೇವಸ್ಥಾನದಲ್ಲಿ ದಲ್ಲಾಳಿಗಳ ಕಾಟ ಹೆಚ್ಚಾಗಿದ್ದು, ದೇವರ ದರ್ಶನಕ್ಕೆ ಹಣದ ಬೇಡಿಕೆ ಇಡುತ್ತಿದ್ದಾರೆ.

ಅಮಾವಾಸ್ಯೆ ದಿನ ದತ್ತಾತ್ರೇಯ ಮಹಾರಾಜರ ದರ್ಶನ ಪಡೆಯಲು ಯಾತ್ರಿಕರ ಸಂಖ್ಯೆ ದುಪ್ಪಟ್ಟಾಗುತ್ತದೆ. ಇಂತಹ ಸಂದರ್ಭದಲ್ಲಿ ದಲ್ಲಾಳಿಗಳು ದರ್ಶನಕ್ಕೆ ಹಣದ ಬೇಡಿಕೆ ಇಡುತ್ತಿರುವುದು ವಿಪರ್ಯಾಸ. ಒಂದೆಡೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದರೆ, ಇನ್ನೊಂದೆಡೆ ದಲ್ಲಾಳಿಗಳು ವಿಶೇಷ ದರ್ಶನಕ್ಕೆ ಹಣ ಪಡೆಯುತ್ತಿದ್ದಾರೆ.

ದತ್ತಾತ್ರೆ ಮಹಾರಾಜರ ದರ್ಶನಕ್ಕಾಗಿ ಎರಡು ಪದ್ಧತಿಗಳಿವೆ, ರಶೀದಿ ಪಡೆದು ಸರತಿ ನಿಂತು ದರ್ಶನ ಪಡೆಯಬೇಕು. ಇನ್ನೊಂದು ವಿಐಪಿ ಮಾರ್ಗದಲ್ಲಿ ವಿಐಪಿಗಳು ಮತ್ತು ಹಣ ನೀಡಿದವರಿಗೆ ದರ್ಶನ ಪಡೆಯಲು ಕಳುಹಿಸಲಾಗುವುದು.

ADVERTISEMENT

ದೇವಸ್ಥಾನದಲ್ಲಿ ಸಾಕಷ್ಟು ಸಿಬ್ಬಂದಿಗಳಿದ್ದರೂ ಅವರ ಸೇವೆ ಯಾತ್ರಿಕರಿಗೆ ತಲುಪುತ್ತಿಲ್ಲ. ದೇವಸ್ಥಾನದ ಎದುರು ವಾಹನಗಳ ನಿಲುಗಡೆಯಿಂದಾಗಿ ಯಾತ್ರಿಕರು ತೊಂದರೆ ಅನುಭವಿಸುವಂತಾಗಿದೆ. ಅಲ್ಲಲ್ಲಿ ಸಣ್ಣಪುಟ್ಟ ಮಾರಾಟದ ವಾಹನಗಳು ನಿಂತಿದ್ದು ಸರಳವಾಗಿ ದೇವಸ್ಥಾನ ಪ್ರದೇಶ ಮಾಡಲು ಕಷ್ಟ ಪಡುವಂತಾಗಿದೆ.

ದೇವಸ್ಥಾನ ಸುತ್ತಮುತ್ತ ಯಾತ್ರಿಕರು ಉಪಯೋಗಿಸಿ ಬಿಸಾಡಿರುವ ತ್ಯಾಜ್ಯ ವಸ್ತುಗಳು ತುಂಬಿಕೊಂಡಿದೆ. ಇಲ್ಲಿನ ಗ್ರಾ.ಪಂ ದೇವಸ್ಥಾನದ ಸುತ್ತಲು ಸ್ವಚ್ಛತೆ ಕಾಪಾಡಬೇಕು ಎಂದು ದೇವಲ ಗಾಣಗಾಪುರದ ಪೊಲೀಸ್ ಠಾಣೆಯ ಪಿಎಸ್ಐ ಸಂಗೀತಾ ತಿಳಿಸಿದರು.

ದೇವಲ ಗಾಣಗಾಪುರಕ್ಕೆ ಸಂಪರ್ಕ ಕಲ್ಪಿಸುವ ಆನೂರು ಮಾರ್ಗದ ರಸ್ತೆ ಹಾಳಾಗಿದ್ದು, ರಸ್ತೆ ದುರಸ್ತಿಗೆ ಮುಂದಾಗಬೇಕು. ಸಂಗಮದಲ್ಲಿ ಯಾತ್ರಿಕರು ಸರಿಯಾದ ವ್ಯವಸ್ತೆ ಇಲ್ಲದ ಕಾರಣ ಕಷ್ಟ ಅನುಭವಿಸುವಂತಾಗಿದೆ ಎಂದು ಭಕ್ತರು ದೂರಿದರು.

ಅಫಜಲಪುರ ತಾಲೂಕಿನ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಎದುರುಗಡೆ ವಾಹನಗಳು ನಿಲ್ಲಿಸಿರುವುದರಿಂದ ಯಾತ್ರಿಕರು ದರ್ಶನಕ್ಕಾಗಿ ಕಷ್ಟಪಡುವಂತಾಯಿತು

ಮೂಲಸೌಕರ್ಯ ಒದಗಿಸಿ: ದೇವಲ ಗಾಣಗಾಪುರಕ್ಕೆ ಮಾಸ್ಟರ್ ಪ್ಲಾನ್ ಮಾಡಬೇಕು ಎಂದು ಸುಮಾರು 20 ವರ್ಷಗಳಿಂದ ಕೂಗು ಹೋರಾಟ ನಡೆಯುತ್ತದೆ. ಆದರೆ ಸಧ್ಯದ ಪರಿಸ್ಥಿತಿಗೆ ಯಾತ್ರಿಕರಿಗೆ ಸರಿಯಾದ ದರ್ಶನ ವ್ಯವಸ್ಥೆ ಮತ್ತು ಮೂಲಸೌಲಭ್ಯಕ್ಕೆ ಮುಂದಾಗಬೇಕಿದೆ. ಜಿಲ್ಲಾಧಿಕಾರಿಗಳು ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿದ್ದು ಅವರಾದರೂ ಯಾತ್ರಿಕರಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯ ಕಲ್ಪಿಸಬೇಕು. ಭಕ್ತಾದಿಗಳಿಗೆ ಸರಳ ದರ್ಶನವಾಗುವಂತೆ ನೋಡಿಕೊಳ್ಳಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ. ದೇವಸ್ಥಾನಕ್ಕೆ ಸಾಕಷ್ಟು ದೇಣಿಗೆ ರೂಪದಲ್ಲಿ ಹಣ ಹರಿದು ಬಂದರೂ ಸಹ ಸರಿಯಾಗಿ ಬಳಕೆಯಾಗುತ್ತಿಲ್ಲ. ಯಾತ್ರಿಕರಿಗೆ ಸೌಲಭ್ಯ ಒದಗಿಸಿ ದೇವಸ್ಥಾನದ ಅಭಿವೃದ್ಧಿ ಮುಂದಾಗಬೇಕಿದೆ ಎಂದು ಯಾತ್ರಿಕರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.