ಕಲಬುರಗಿ: ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ, ಚರಂಡಿ ಇಲ್ಲದ ಓಣಿಗಳು, ರಸ್ತೆಯಲ್ಲಿ ಹರಿಯುವ ಕೊಳಚೆ ನೀರು, ರಸ್ತೆ ಬದಿಯಲ್ಲೇ ಬಿದ್ದ ಕಸದ ರಾಶಿ, ಕೆಸರು ಗದ್ದೆಯಂತಾದ ರಸ್ತೆ, ತಂಬಿಗೆ ಹಿಡಿದು ಶಾಲಾ ಆವರಣದ ಗಿಡಗಂಟಿಗಳ ನಡುವೆ ಬಯಲು ಬಹಿರ್ದೆಸೆಗೆ ತೆರಳುವ ಸ್ಥಳೀಯರು...
ಇದು ಯಾವುದೋ ಕುಗ್ರಾಮದ ಚಿತ್ರಣವಲ್ಲ, 2023–24ನೇ ಸಾಲಿನ ‘ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಭಾಜನವಾದ ಕಲಬುರಗಿ ತಾಲ್ಲೂಕಿನ 22 ಕಿ.ಮೀ. ದೂರದಲ್ಲಿರುವ ಹರಸೂರ ಗ್ರಾಮದ ವಾಸ್ತವ ಕಣ್ಣಿಗೆ ರಾಚಿದ ಪರಿ.
ಗುಂಡಿಗಳ ದರ್ಬಾರಿನ ರಸ್ತೆಯನ್ನು ಸರ್ಕಸ್ ಮಾಡುತ್ತಾ ಗ್ರಾಮವನ್ನು ಪ್ರವೇಶಿಸಬೇಕು. ರಸ್ತೆ ಬದಿಯಲ್ಲಿನ ಅವ್ಯವಸ್ಥೆ ಮತ್ತು ಅಸ್ವಚ್ಛತೆಯ ಹೊಲಸು ವಾಸನೆ ಮೂಗಿಗೆ ರಾಚುತ್ತದೆ. ಶಾಲಾ ಆವರಣವು ಹಂದಿಗಳ ಗೂಡಾಗಿದ್ದು, ಆಳೆತ್ತರ ಬೆಳೆದು ನಿಂತ ಗಿಡಗಂಟಿಗಳು ಬಯಲು ಬಹಿರ್ದೆಸೆಗೆ ಇಂಬು ಕೊಡುತ್ತಿವೆ.
ನಿಮ್ಮೂರಿಗೆ ‘ಗ್ರಾಂಧಿ ಗ್ರಾಮ’ ಪುರಸ್ಕಾರ ಬಂದಿದೆಯಲ್ಲ ಎಂದು ಗ್ರಾಮದ ಯುವಕ ಅಹಮದ್ ಪಾಸಾಗೆ ಕೇಳಿದರೆ, ‘ನಮಗೆ ಅದರ ಬಗ್ಗೆ ಗೊತ್ತಿಲ್ಲ. ಕ್ಲೀನಾಗಿ ಕಾಣುವ ಪಂಚಾಯಿತಿ ಆಫೀಸ್ ನೋಡಿಯೇ ಅವಾರ್ಡ್ ಕೊಟ್ಟಿರಬಹುದು. ಪ್ರಶಸ್ತಿ ಕೊಡುವವರು ಗುಂಡಿಗಳ ರಸ್ತೆ ದಾಟಿ, ಮೂಗು ಮುಚ್ಚಿಕೊಂಡ ಬಂದು ಊರೆಲ್ಲ ನೋಡಿದರೆ ವಾಸ್ತವ ಸ್ಥಿತಿ ಏನಿದೆ ಎಂಬುದು ಗೊತ್ತಾಗುತ್ತಿತ್ತು. ಎಲ್ಲೋ ಕುಳಿತು ಅವಾರ್ಡ್ ಕೊಟ್ಟಿರುತ್ತಾರೆ ಬಿಡಿ ಸರ್’ ಎಂದು ಬೇಸರ ವ್ಯಕ್ತಪಡಿಸಿದರು.
ಹರಸೂರ ಗ್ರಾಮ ಮಾತ್ರವಲ್ಲ, ಪುರಸ್ಕಾರ ಪಡೆದ ಬಹುತೇಕ ಗ್ರಾಮಗಳ ವಾಸ್ತವ ಸ್ಥಿತಿ ಅವಲೋಕಿಸಿದರೆ ನಿಜಾಂಶ ಬಯಲಾಗುತ್ತದೆ. ಕೆಲವು ಗ್ರಾಮಗಳು ನರೇಗಾದಂಥ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಪುರಸ್ಕಾರಕ್ಕೆ ಕಳೆ ತಂದಿವೆ.
ಶಹಾಬಾದ್: ಗಾಂಧಿ ಗ್ರಾಮ ಪುರಸ್ಕಾರದ ಮುಗುಳನಾಗಾಂವ ಗ್ರಾ.ಪಂ. ಮೂಲಸೌಕರ್ಯಗಳಿಂದ ವಂಚಿತವಾಗಿ ಬಳಲುತ್ತಿದೆ.
ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ, ಕಬ್ಬಿಣದ ರಾಡುಗಳು ಹೊರಬಂದಿವೆ. ಸಮರ್ಪಕ ಚರಂಡಿ ಜಾಲ ಇಲ್ಲದೆ ರಸ್ತೆ ಮೇಲೆ ಕೊಳಚೆ ನೀರು ಹರಿದಾಡಿ ದುರ್ವಾಸನೆ ಬೀರುತ್ತಿದೆ. ರಸ್ತೆಗಳ ಬದಿಯೇ ಬಯಲು ಶೌಚಾಲಯಗಳ ತಾಣವಾಗಿವೆ. ವಾಹನ ಚಾಲಕರು, ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಿದೆ.
ಅಫಜಲಪುರ: ಗಾಂಧಿ ಗ್ರಾಮ ಪುರಸ್ಕೃತ ಅಳ್ಳಗಿ (ಬಿ) ಗ್ರಾ.ಪಂ. ವ್ಯಾಪ್ತಿಯಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿಗಳು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ.
ರಸ್ತೆಗಳ ಮೇಲೆಯೇ ಚರಂಡಿ ನೀರು ಹರಿಯುತ್ತದೆ. ಶುದ್ಧ ಕುಡಿಯುವ ನೀರಿನ ಘಟಕ ದಶಕಗಳಿಂದ ಗಿಡಗಂಟಿಯಿಂದ ಆವೃತ್ತವಾಗಿದೆ. ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ಯಾವುದೇ ವಾರ್ಡ್‌ನಲ್ಲಿಯೂ ಬೀದ ದೀಪ ವ್ಯವಸ್ಥೆ ಕಾಣಸಿಗದು. ಸಂಪರ್ಕ ರಸ್ತೆಗಳ ಎರಡೂ ಬದಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ತೆರವಿಗೆ ಮುಂದಾಗುತ್ತಿಲ್ಲ. ಬಯಲು ಬಹಿರ್ದೆಸೆ ಸಾಮಾನ್ಯವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಪೂರಕ ಮಾಹಿತಿ: ಶಿವಾನಂದ ಹಸರಗುಂಡಗಿ, ಸಂಜಯ ಪಾಟೀಲ, ಜಗನ್ನಾಥ ಡಿ. ಶೇರಿಕಾರ, ಮಲ್ಲಿಕಾರ್ಜುನ ಎಚ್.ಎಂ., ಅವಿನಾಶ ಬೋರಂಚಿ, ಮಂಜುನಾಥ ದೊಡಮನಿ, ಗುಂಡಪ್ಪ ಕರೆಮನೋರ, ನಿಂಗಣ್ಣ ಜಂಬಗಿ
ಗಾಂಧಿ ಗ್ರಾಮ ಪುರಸ್ಕಾರ ಲಭಿಸಿರುವುದು ಖುಷಿ ತಂದಿದ್ದು ಪುರಸ್ಕಾರದ ₹ 5 ಲಕ್ಷವನ್ನು ಮೂಲಸೌಲಭ್ಯಗಳನ್ನು ಒದಗಿಸಲು ಬಳಸಲಾಗುವುದುರಾಜಕುಮಾರ ಚವ್ಹಾಣ್ ಆಳಂದ ತಾಲ್ಲೂಕಿನ ಮುನ್ನೋಳ್ಳಿ ಗ್ರಾ.ಪಂ. ಅಧ್ಯಕ್ಷ
ಪ್ರತಿ ವಾರ್ಡ್‌ಗಳಲ್ಲಿ ಮಹಿಳಾ ಶೌಚಾಲಯಗಳು ನಿರ್ಮಾಣವಾದರೆ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಸಸಿಗಳನ್ನು ಬೆಳೆಸಲು ಕ್ರಿಯಾ ಯೋಜನೆ ರೂಪಿಸಬೇಕುಸಿದ್ದು ವೇದಶೆಟ್ಟಿ ಮುನ್ನೋಳ್ಳಿ ರೈತ ಮುಖಂಡ
ಪಂಚಾಯಿತಿ ಅಧಿಕಾರಿಗಳು ಅಧ್ಯಕ್ಷರ ಸೂಚನೆ ಮೇರೆಗೆ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಸಿಸಿ ರಸ್ತೆ ಕುಡಿಯುವ ನೀರು ಬೀದಿ ದೀಪಗಳ ನಿರ್ವಹಣೆಗೆ ಗಮನ ಕೊಡುತ್ತಿದ್ದಾರೆಶರಣು ಕೋಟ್ರಕಿ ಊಡಗಿ ಗ್ರಾಮಸ್ಥ
ಕಾಗದದ ಮೇಲೆ ಅಭಿವೃದ್ಧಿಯ ಕಾರ್ಯಗಳನ್ನು ತೋರಿಸಿ ಗಾಂಧಿ ಗ್ರಾಮ ಪುರಸ್ಕಾರವನ್ನು ಪಡೆದಿರಬಹುದು. ಗ್ರಾಮದಲ್ಲಿ ಓಡಾಡಿದರೆ ಕಣ್ಣಿಗೆ ಸಮಸ್ಯೆಗಳೇ ರಾರಾಜಿಸುತ್ತಿವೆರಾಜು ಪೂಜಾರಿ ಸಾಥಖೇಡ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.