ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಗುರುರಾಜ ಕರಜಗಿ ಅವರನ್ನು ಕೈಬಿಡಬೇಕು ಎಂದು ಗಾಂಧಿ ವಿಚಾರ ವೇದಿಕೆ ಒತ್ತಾಯಿಸಿದೆ.
ಗುರುರಾಜ ಕರಜಗಿ ಅವರು ಸನಾತನ ವಿಚಾರಗಳಿಂದ ಪ್ರಭಾವಿತರಾಗಿದ್ದಾರೆ. ಸಂಘ ಪರಿವಾರದ ವ್ಯಕ್ತಿಯಾಗಿದ್ದಾರೆ ಎಂಬುದನ್ನು ನಾಡಿನ ಪ್ರಜ್ಞಾವಂತ ಸಮಾಜ ಗುರುತಿಸಿದೆ. ಅವರ ಮಾತು ಮತ್ತು ನಡೆ ಅದನ್ನು ಪುಷ್ಟೀಕರಿಸುತ್ತದೆ ಎಂದು ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಯ್ಯ ಆರ್.ಘಂಟಿ, ಕಾರ್ಯದರ್ಶಿ ಗಿರೀಶ ಪಾಟೀಲ, ಕಾರ್ಯಕಾರಿಣಿ ಸದಸ್ಯರಾದ ಅಬ್ದುಲ್ ವಹೀದ್, ಎಂ.ಬಿ.ಸಜ್ಜನ, ಸಾಗರ ಗಾಳೆ, ಬಾಬುರಾವ್, ದಿಲೀಪ್, ಮಹಮ್ಮದ್ ಅಬ್ದುಲ್ಲಾ, ಎಚ್.ಎಸ್.ಬಸವಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಜಗಿ ಅವರು ಸನಾತನ ಶಿಕ್ಷಣ ವ್ಯವಸ್ಥೆ ಪರ ಕೆಲಸ ಮಾಡುತ್ತಿದ್ದಾರೆ. ತಮ್ಮ ನಾಜೂಕಾದ ಮಾತುಗಳ ಮೂಲಕ ಮನುವಾದ ಹಾಗೂ ಕಪೋಲಕಲ್ಪಿತ ಕತೆಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಇಂಥ ವ್ಯಕ್ತಿಯನ್ನು ಜಾತಿ ವಿನಾಶದ ಕ್ರಾಂತಿಯ ನೆಲವಾದ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಗೆ ನೇಮಿಸಿರುವುದು ಖಂಡನಾರ್ಹ. ಸರ್ಕಾರ ಕೂಡಲೇ ನೇಮಕವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಗುರುರಾಜ ಕರಜಗಿ ಅವರಿಗೆ ಈ ಭಾಗದ ಶೈಕ್ಷಣಿಕ, ಭೌಗೋಳಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಅರಿವಿಲ್ಲ. ಅವರು ಎಷ್ಟು ವರ್ಷಗಳ ಕಾಲ ಈ ಭಾಗದಲ್ಲಿ ಇದ್ದರು. ಯಾವ ಮಾನದಂಡದಡಿ ಇಂಥ ನೇಮಕಗಳು ನಡೆಯುತ್ತವೆ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.