ADVERTISEMENT

‘ಬೆನಕ‘ನಿಗೆ ಭಕ್ತಿಯ ವಿದಾಯ

11 ದಿನ ವಿವಿಧ ಸಮಿತಿಗಳು, ಮನೆಯಲ್ಲಿ ಪ್ರತಿಷ್ಠಾಪಿಸಿದ ಮೂರ್ತಿಗಳ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2023, 3:11 IST
Last Updated 29 ಸೆಪ್ಟೆಂಬರ್ 2023, 3:11 IST

ಕಲಬುರಗಿ: ನಗರದಲ್ಲಿ 11 ದಿನಗಳ ಕಾಲ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಗಳನ್ನು ಸಮಿತಿಗಳು ಹಾಗೂ ಮನೆಗಳಲ್ಲಿ ಕೂರಿಸದವರು ಗುರುವಾರ ಶ್ರದ್ಧಾ–ಭಕ್ತಿಯಿಂದ ವಿಸರ್ಜನೆ ಮಾಡಿದರು.

ವಿವಿಧ ಬಡಾವಣೆಗಳಿಂದ ಟಂಟಂ, ಟ್ರ್ಯಾಕ್ಟರ್‌ಗಳಲ್ಲಿ ಗಣೇಶ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು. ಯುವಕರ ಕುಣಿತ ಜೋರಾಗಿತ್ತು. ಡಿ.ಜೆ. ಅಬ್ಬರವೂ ಹೆಚ್ಚಾಗಿತ್ತು. ಗಣೇಶ–ಗಜಾನನ–ಸಿದ್ದಿವಿನಾಯಕ ಯುವಕ ಮಂಡಳಿಗಳ ಯುವಕರು ಬ್ಯಾಂಡ್‌ಸೆಟ್‌ನೊಂದಿಗೆ ಹೆಜ್ಜೆ ಹಾಕಿದರು.

ಮನೆಯಲ್ಲಿ ಪ್ರತಿಷ್ಠಾಪಿದ್ದ ಮೂರ್ತಿಗಳನ್ನು ಕುಟುಂಬ ಸಮೇತರಾಗಿ ಕೆಲವರು ಕಾಲ್ನಡಿಗೆಯಲ್ಲಿ, ಮತ್ತೆ ಕೆಲವರು ಕಾರುಗಳಲ್ಲಿ ಬಂದರು. ಈ ವೇಳೆ ‘ಗಣಪತಿ ಬಪ್ಪಾ ಮೋರಯಾ’, ‘ಗಣೇಶ ಮೋರಯಾ’ ಎಂದು ಹೇಳುತ್ತಾ ಮಕ್ಕಳು ಕುಣಿದು ಕುಪ್ಪಳಿಸಿದರು.

ADVERTISEMENT

ಸಣ್ಣ ಮೂರ್ತಿಗಳನ್ನು ಬೈಕ್, ತಲೆಯ ಮೇಲೆ ಹೊತ್ತು, ದೊಡ್ಡ ವಿನಾಯಕನ ಮೂರ್ತಿಗಳನ್ನು ವಾಹನಗಳಲ್ಲಿ ಇರಿಸಿಕೊಂಡು ಮೆರವಣಿಗೆಯಲ್ಲಿ ಶರಣಬಸವೇಶ್ವರ(ಅಪ್ಪ) ಕೆರೆಯ ಆವರಣದಲ್ಲಿನ ಪುಷ್ಕರಣಿಗೆ ತರಲಾಯಿತು. ಆವರಣದ ಹೊರಗೆ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಅಲಂಕಾರಿಕ ವಸ್ತುಗಳು, ಹೂಗಳನ್ನು ತೆಗೆಯಲಾಯಿತು. ಪಾಲಿಕೆ ನಿಯೋಜಿಸಿದ್ದ 50ಕ್ಕೂ ಹೆಚ್ಚು ಸಿಬ್ಬಂದಿ, ಸಾರ್ವಜನಿಕರ ಗಣೇಶ ಮೂರ್ತಿಗಳನ್ನು ತಾವೇ ಪಡೆದು ಪುಷ್ಕರಣಿಯ ನೀರಿನಲ್ಲಿ ಬಿಟ್ಟರು.

ದೊಡ್ಡ ಮೂರ್ತಿಗಳನ್ನು ಪುಷ್ಕರಣಿಯ ಮತ್ತೊಂದು ಬದಿಯಲ್ಲಿ ಪಡೆದ ಪಾಲಿಕೆಯ ಸಿಬ್ಬಂದಿ, ನೀರಿನಲ್ಲಿ ವಿಸರ್ಜನೆ ಮಾಡಿದರು. ಪುಷ್ಕರಣಿ ಒಳಭಾಗಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗುತ್ತು. ಕೆರೆ ಸಮೀಪದ ರಸ್ತೆ ಬದಿಯಲ್ಲಿನ ಎಲ್‌ಇಡಿ ಡಿಸ್‌ಪ್ಲೇ ಸ್ಕ್ರೀನ್‌ ಮುಂದೆ ನಿಂತ ನೂರಾರು ಜನರು ಮೂರ್ತಿ ವಿಸರ್ಜನೆಯನ್ನು ಕಣ್ತುಂಬಿಕೊಂಡರು.

ಸೂಪರ್ ಮಾರ್ಕೆಟ್, ಸರಾಫ್ ಬಜಾರ್, ಚಪಲ್ ಬಜಾರ್, ಕಿರಾಣಾ ಬಜಾರ್, ಎಪಿಎಂಸಿ, ಮಿಲನ್ ಚೌಕ್, ಹುಮನಾಬಾದ್ ವೃತ್ತ, ರಾಮಮಂದಿರ, ಹಳೇ ಜೇವರ್ಗಿ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಷ್ಠಾಪಿಸಿದ ಸಾರ್ವಜನಿಕ ಮೂರ್ತಿಗಳ ವಿಸರ್ಜನೆಯಾದವು. 

ಅಪ್ಪನ ಕೆರೆಯ ಸುತ್ತಲಿನ ವಾಹನ ಹಾಗೂ ಜನದಟ್ಟಣೆ ನಿಯಂತ್ರಿಸಲು ದೂರದಲ್ಲೇ ಎಲ್ಲ ವಾಹನಗಳನ್ನು ತಡೆದು ನಿಲ್ಲಿಸಲಾಯಿತು. ಮುಜಾಗ್ರತ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.