ADVERTISEMENT

ಗಂಗಾ ಕಲ್ಯಾಣ: ಚಾತಕ ಪಕ್ಷಿಗಳಂತಾದ ರೈತರು

ಕಲ್ಯಾಣ ಕರ್ನಾಟಕದ ಪರಿಶಿಷ್ಟ ಪಂಗಡದ ಫಲಾನುವಿಗಳ ಹೊಲದಲ್ಲಿ ಇನ್ನೂ ಹರಿಯದ ಗಂಗೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 3:02 IST
Last Updated 4 ಅಕ್ಟೋಬರ್ 2025, 3:02 IST

ಕಲಬುರಗಿ: ಮಳೆಯನ್ನೇ ನಂಬಿ ಕೃಷಿಯಲ್ಲಿ ತೊಡಗುವ ಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಗಂಗಾ ಕಲ್ಯಾಣ ಯೋಜನೆ ಜಾರಿಗೆ ತಂದಿದೆ. ಆದರೆ, ಆ ಯೋಜನೆ ಸಮರ್ಪಕವಾಗಿ ಪರಿಶಿಷ್ಟರ ಜಮೀನು ತಲುಪಿ ಅವರ ಗೋಳು ಬತ್ತಿಸುವಲ್ಲಿ ವಿಫಲವಾಗಿದೆ.

ಅನುದಾನ ಕೊರತೆಯ ಕಾರಣಕ್ಕೆ ಹಲವಾರು ರೈತರ ನೀರಾವರಿ ಕನಸು ಇನ್ನೂ ಈಡೇರಿಲ್ಲ. ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಆಯ್ಕೆಯಾದ ಗಂಗಾ ಕಲ್ಯಾಣ ಯೋಜನೆಯ ಫಲಾನುವಿಗಳ ಹೊಲದಲ್ಲಿ ಇನ್ನೂ ಗಂಗೆ ಹರಿದಿಲ್ಲ. ಕೊಳವೆ ಬಾವಿ ನೀರಿಗಾಗಿ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

2023–24 ಹಾಗೂ 2024–25ನೇ ಸಾಲಿನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮವು ಈ ಯೋಜನೆಯಡಿ ಆಯ್ಕೆ ಮಾಡಿದ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ 664 ರೈತರ ಜಮೀನಿನಲ್ಲಿ ಇನ್ನೂ ಕೊಳವೆ ಬಾವಿ ಕೊರೆದಿಲ್ಲ. ಈ ರೈತರ ಕನಸು ಟೆಂಡರ್‌ ಹಂತದಲ್ಲಿಯೇ ಇದೆ.

ADVERTISEMENT

2023–24ನೇ ಸಾಲಿನಲ್ಲಿ ಆಯ್ಕೆಯಾದ 324 ರೈತರ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಯುವುದು ಬಾಕಿ ಇದ್ದರೆ, 2024–25ರಲ್ಲಿ ಆಯ್ಕೆಯಾದ 340 ಫಲಾನುಭವಿಗಳು ಕೊಳವೆ ಬಾವಿಗಾಗಿ ಕಾಯುತ್ತಿದ್ದಾರೆ.

2025–26 ಸಾಲಿನ ಕ್ರಿಯಾ ಯೋಜನೆಗೆ ಅನುಮೋದನೆ ಸಿಗಬೇಕಿದೆ. ಸಿಕ್ಕ ಬಳಿಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನ ಗೌಡ ದದ್ದಲ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಸಂಪರ್ಕಕ್ಕೆ ಸಿಗಲಿಲ್ಲ.

ಬೋರ್‌ವೆಲ್‌

ರಾಯಚೂರು ಜಿಲ್ಲೆಯಲ್ಲಿಯೇ ಹೆಚ್ಚು ಬಾಕಿ

ರಾಯಚೂರು ಜಿಲ್ಲೆಯಲ್ಲಿಯೇ ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅಲ್ಲಿ 213 ರೈತರ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಯಬೇಕಿದೆ. ಬಳ್ಳಾರಿ–ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು 205 ಕೊಪ್ಪಳದಲ್ಲಿ 87 ಯಾದಗಿರಿಯಲ್ಲಿ 78 ಬೀದರ್‌ನಲ್ಲಿ 55 ಹಾಗೂ ಕಲಬುರಗಿ ಜಿಲ್ಲೆಯಲ್ಲಿ 26 ಕೊಳವೆ ಬಾವಿ ಕೊರೆಸಬೇಕಿದೆ. ಆದಷ್ಟು ಬೇಗ ಕೊಳವೆ ಬಾವಿ ಕೊರೆಯಿಸಬೇಕು ಎಂದು ರೈತರು ಒತ್ತಾಯಿಸುತ್ತಾರೆ.

ಏನಿದು ಯೋಜನೆ?

ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೊಳವೆ ಬಾವಿ ಕೊರೆಯಿಸಲಾಗುತ್ತದೆ. ಪಂಪ್‌ಸೆಟ್ ಅಳವಡಿಕೆ ಮತ್ತು ವಿದ್ಯುದ್ದೀಕರಣದ ಮೂಲಕ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ. ಈ ಸೌಲಭ್ಯ ಪಡೆಯುವವರು ಸಾಮಾನ್ಯವಾಗಿ 1.20 ಎಕರೆಯಿಂದ 5 ಎಕರೆವರೆಗೂ ಜಮೀನು ಹೊಂದಿರಬೇಕು. ಈ ಯೋಜನೆಯಡಿ ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಕೋಲಾರ ಚಿಕ್ಕಬಳ್ಳಾಪುರ ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ₹4.75 ಲಕ್ಷದವರೆಗೂ ಸಹಾಯಧನ ನೀಡಲಾಗುತ್ತದೆ. ರಾಜ್ಯದ ಉಳಿದ ಜಿಲ್ಲೆಗಳ ರೈತರಿಗೆ ₹3.75 ಲಕ್ಷ ನೀಡಲಾಗುತ್ತದೆ. ಅದು ₹50000 ಟರ್ಮ್‌ ಲೋನ್ ಒಳಗೊಂಡಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.