ADVERTISEMENT

ಕಲಬುರಗಿ | ಸಿಲಿಂಡರ್‌ಗಳಿಂದ ಗ್ಯಾಸ್‌ ಕಳವು: ಇಬ್ಬರ ಬಂಧನ

ಎರಡು ಗ್ಯಾಸ್‌ ಏಜೆನ್ಸಿಗಳು ಸೇರಿ ಐವರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:46 IST
Last Updated 6 ಆಗಸ್ಟ್ 2025, 5:46 IST
ಆಹಾರ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದ ಗ್ಯಾಸ್‌ ಸಿಲಿಂಡರ್‌ಗಳು..
ಆಹಾರ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದ ಗ್ಯಾಸ್‌ ಸಿಲಿಂಡರ್‌ಗಳು..   

ಕಲಬುರಗಿ: ಗೃಹೋಪಯೋಗಿ ಅಡುಗೆ ಅನಿಲ ಸಿಲಿಂಡರ್‌ಗಳಿಂದ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ಗ್ಯಾಸ್‌ ವರ್ಗಾಯಿಸುವ ದಂಧೆ ನಡೆಸುತ್ತಿದ್ದ ಮನೆಯ ಮೇಲೆ ಆಹಾರ ಇಲಾಖೆ ಅಧಿಕಾರಿ ಹಾಗೂ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ ಗ್ಯಾಸ್‌ ಸಿಲಿಂಡರ್‌ಗಳು ಹಾಗೂ ಎರಡು ಟಂಟಂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಇದರ ಒಟ್ಟು ಮೌಲ್ಯ ₹ 1.73 ಲಕ್ಷ ಎಂದು ಅಂದಾಜಿಸಲಾಗಿದೆ. ಒಂದು ವಾಹನದಿಂದ ಇಂಡಿಯನ್‌ ಗ್ಯಾಸ್‌ ಕಂಪನಿಯ ವಾಣಿಜ್ಯ ಬಳಕೆಯ 8 ಖಾಲಿ ಸಿಲಿಂಡರ್‌, 2 ಗೃಹ ಬಳಕೆಯ ಸಿಲಿಂಡರ್‌ ಹಾಗೂ 6 ತುಂಬಿದ ಸಿಲಿಂಡರ್‌ ವಶಕ್ಕೆ ಪಡೆಯಲಾಗಿದೆ. ಮತ್ತೊಂದು ವಾಹನದಿಂದ ಎಚ್‌ಪಿ ಕಂಪನಿಗೆ ಸೇರಿದ ಗೃಹಬಳಕೆಯ 3 ತುಂಬಿದ ಗ್ಯಾಸ್‌ ಸಿಲಿಂಡರ್‌, ಅದೇ ಕಂಪನಿಯ ಗೃಹ ಬಳಕೆಯ 25 ಖಾಲಿ ಸಿಲಿಂಡರ್‌ ಹಾಗೂ ಭಾರತ್‌ ಗ್ಯಾಸ್‌ ಕಂಪನಿಯ 2 ಖಾಲಿ ಸಿಲಿಂಡರ್‌ ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ನಗರದ ರಾಣೇಶ ಪೀರ್‌ ದರ್ಗಾ ಹತ್ತಿರದ ಶ್ರೀರಾಮ ನಗರದ 3ನೇ ಕ್ರಾಸ್ ಸಮೀಪದ ಮನೆಯೊಂದಲ್ಲಿ ಆರೋಪಿಗಳು ಅಕ್ರಮವಾಗಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಸಂಗ್ರಹಿಸಿ ಪ್ರತಿ ಸಿಲಿಂಡರ್‌ನಿಂದ 2 ಕೆ.ಜಿಗಳಷ್ಟು ಗ್ಯಾಸ್‌ ಕದಿಯಲಾಗುತ್ತಿತ್ತು. ಅದನ್ನು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ತುಂಬಿ ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಲಾಗುತ್ತಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಈ ಸಂಬಂಧ ಎರಡು ಗ್ಯಾಸ್‌ ಏಜೆನ್ಸಿಗಳು ಹಾಗೂ ರಾಜಸ್ಥಾನ ಮೂಲದ ಅಶೋಕ ಬಿಷ್ಣೋಯಿ, ಧನುರಾಮ ಹಾಗೂ ಸುನೀಲ್‌ ಬಿಷ್ಣೋಯಿ ಎಂಬುವರ ವಿರುದ್ಧ ಸಬರ್ಬನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ: ಮಹಿಳೆ ಸಾವು

ನಗರದ ಆಳಂದ ಸರ್ಕಲ್‌ನಿಂದ ಹುಮನಾಬಾದ್‌ ರಿಂಗ್‌ ರಸ್ತೆಗೆ ಹೋಗುವ ಮಾರ್ಗದಲ್ಲಿರುವ ಜೀವಿಕಾ ಆಸ್ಪತ್ರೆ ಸಮೀಪ ಟಿಪ್ಪರ್‌ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ.

ನಗರದ ವಿಜಯನಗರ ಕಾಲೊನಿ ನಿವಾಸಿ ರಾಣಿ ಕೊಟ್ಟಪ್ಪಗೋಳ (35) ಮೃತರು. ಘಟನೆಯಲ್ಲಿ ಮಹಿಳೆಯ ಪತಿ ಸಿದ್ದಣ್ಣ ಕೊಟ್ಟಪ್ಪಗೋಳ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ಸಂಚಾರ ಠಾಣೆ–2ರಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಲಬುರಗಿಯ ಕಾಂಗ್ರೆಸ್‌ ಪಕ್ಷದ ಕಾರ್ಯ‌ಕ್ರಮದಲ್ಲಿ ಕೆಲ ಯುವಕರು ಕುರ್ಚಿಗಳನ್ನು ಎತ್ತಿ ಹಾಕಿದರು

ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಗಲಾಟೆ

ಕಲಬುರಗಿ: ನಗರದ ಕೋಲ್ಕತಾ ಫಂಕ್ಷನ್ ಹಾಲ್‌ನಲ್ಲಿ ನಡೆದ ಮಂಗಳವಾರ ಆಯೋಜಿಸಿದ್ದ ಜಾತಿ ಜನಗಣತಿ ಸೇರಿದಂತೆ ವಿವಿಧ ಯೋಜನೆಗಳ ಬಗೆಗೆ ಅಲ್ಪಸಂಖ್ಯಾತರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ವಾಗ್ವಾದ ಹಾಗೂ ಕುರ್ಚಿ ತೂರಾಟ ನಡೆದಿದೆ. ಈ ಕುರಿತ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಾಂಗ್ರೆಸ್‌ ಪಕ್ಷದ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಯಿಮ್ ಖಾನ್ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದರು.

ಈ ಸಭೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಕೆ. ಅಬ್ದುಲ್‌ ಜಬ್ಬಾರ್‌ ವಕ್ಫ್‌ ಮಂಡಳಿ ಮಾಜಿ ಅಧ್ಯಕ್ಷರೂ ಆಗಿರುವ ಕೆಕೆಪಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅನ್ವರ್‌ ಬಾಷಾ ಮುಖಂಡ ಖಾಲಿದ್‌ ಅಹ್ಮದ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ‘ಅನ್ವರ್‌ ಬಾಷಾ ಅವರು ರಾಜ್ಯ ವಕ್ಫ್‌ ಮಂಡಳಿಗೆ ಇತ್ತೀಚೆಗೆ ನಡೆದ ಚುನಾವಣೆ ವೇಳೆ ಹಾಲಿ ಅಧ್ಯಕ್ಷ ಸೈಯದ್‌ ಮುಹಮ್ಮದ್ ಅಲಿ ಅಲ್‌ ಹುಸೇನಿ ಎದುರಾಳಿ ಬಣದಲ್ಲಿ ಗುರುತಿಸಿಕೊಂಡಿದ್ದರು.

ಕೆಲವು ಯುವಕರು ಇದು ವಕ್ಫ್‌ ಮಂಡಳಿ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮಕ್ಕೆ ವಕ್ಫ್‌ ಮಂಡಳಿ ರಾಜ್ಯಾಧ್ಯಕ್ಷ ಸೈಯದ್‌ ಮುಹಮ್ಮದ್ ಅಲಿ ಅಲ್‌ ಹುಸೇನಿ ಹಾಗೂ ಶಾಸಕಿ ಖನೀಜ್‌ ಫಾತಿಮಾ ಅವರನ್ನು ಏಕೆ ಆಹ್ವಾನಿಸಿಲ್ಲ ಎಂದು ಆಕ್ಷೇಪಿಸಿ ವಾಗ್ವಾದ ನಡೆಸಿದರು. ಬಳಿಕ ಕುರ್ಚಿಗಳನ್ನು ತೂರಾಡಿ ಟೇಬಲ್‌ಗೆ ಹಾನಿಗೊಳಿಸಿದರು ಮೈಕ್‌ ಕಸಿದುಕೊಂಡರು’ ಎಂದು ಕಾಂಗ್ರೆಸ್‌ ಪಕ್ಷದ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಯಿಮ್ ಖಾನ್ ತಿಳಿಸಿದ್ದಾರೆ.

‘ಬಳಿಕವೂ ಸಭೆ ಮುಂದುವರಿಸಲಾಯಿತು. ಜಿಲ್ಲೆಯ ವಿವಿಧ ತಾಲ್ಲೂಕುಗಳ ಮುಖಂಡರು ಅಲ್ಪಸಂಖ್ಯಾತರ ಸಮಸ್ಯೆಗಳ ಕುರಿತು ಮನವಿ ಅರ್ಜಿಗಳನ್ನು ಸಲ್ಲಿಸಿ ಅಹವಾಲು ಹೇಳಿಕೊಂಡರು’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.