ADVERTISEMENT

‘ಜಲಮೂಲಗಳ ಪತ್ತೆಗೆ ಜಿಐಎಸ್‌ ವ್ಯವಸ್ಥೆ ಬಳಸಿ’

ಜಿಯೊ ಸ್ಪೇಶಿಯಲ್: ಅಧಿಕಾರಿಗಳಿಗೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 15:02 IST
Last Updated 2 ಆಗಸ್ಟ್ 2019, 15:02 IST
ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ.ಯು.ಟಿ.ವಿಜಯ ಮಾತನಾಡಿದರು. ಗುರುರಾಜ ರಾವ್‌, ಡಾ.ರಾಮಣ್ಣ, ಕಿಶೋರ್‌, ಪ್ರವೀಣಪ್ರಿಯಾ ಡೇವಿಡ್‌ ಇತರರು ಇದ್ದರು
ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ.ಯು.ಟಿ.ವಿಜಯ ಮಾತನಾಡಿದರು. ಗುರುರಾಜ ರಾವ್‌, ಡಾ.ರಾಮಣ್ಣ, ಕಿಶೋರ್‌, ಪ್ರವೀಣಪ್ರಿಯಾ ಡೇವಿಡ್‌ ಇತರರು ಇದ್ದರು   

ಕಲಬುರ್ಗಿ:ರಾಜ್ಯದಲ್ಲಿ ಸುಮಾರು 14 ಸಾವಿರದಷ್ಟು ಕಲ್ಯಾಣಿ, ಕುಂಟೆ, ಗೋಗಟ್ಟೆ ಮುಂತಾದ ಜಲ ಮೂಲಗಳು ಇದ್ದು, ಇವುಗಳನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆಯ ತಂತ್ರಜ್ಞಾನ ಬಳಸಿಕೊಂಡು ಇವುಗಳ ಸ್ಥಳ ಪರಿಶೀಲನೆ ಮಾಡಬೇಕು ಎಂದುಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ.ಯು.ಟಿ.ವಿಜಯ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕಲಬುರ್ಗಿ, ಯಾದಗಿರಿ, ಬೀದರ್ ಹಾಗೂ ಕೊಪ್ಪಳ ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಂಡಳಿ ಹಾಗೂ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ವೈಜ್ಞಾನಿಕವಾಗಿ ಭೌತಿಕ ಸ್ಥಿತಿ–ಗತಿಗಳನ್ನು ಅಧ್ಯಯನ ಮಾಡಿ, ಇವುಗಳ ನೀರಿನ ಸಾಂದ್ರತೆ, ಮಣ್ಣು, ಹೂಳಿನ ಪರಿಸ್ಥಿತಿಗಳನ್ನು ಸಮಗ್ರವಾಗಿ ವಿಶ್ಲೇಷಣೆ ಮಾಡಿ, ಪುನರುಜ್ಜೀವನ ಮಾಡಲು ಕೈಗೊಳ್ಳಬೇಕಾದ ಚಟುವಟಿಕೆಗಳು ಹಾಗೂ ಅಂದಾಜು ವೆಚ್ಚ ಮುಂತಾದ ವೈಜ್ಞಾನಿಕ ಆಂಶಗಳನ್ನು ಒಳಗೊಂಡ ವಿಸ್ತೃತವಾದ ವರದಿಗಳನ್ನು ತಯಾರಿಸಬೇಕು ಎಂದು ಹೇಳಿದರು.

ADVERTISEMENT

ಅಧಿಕಾರಿಗಳು ದತ್ತಾಂಶಗಳನ್ನು ರಚಿಸಿ ಇಲಾಖೆಯಿಂದ ಮಾಹಿತಿ ಪಡೆದು ನಕ್ಷೆ ರೂಪಿಸಿದರೆ ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ದೊರೆಯುತ್ತದೆ. ಮೂಲಸೌಲಭ್ಯ, ಜನಸಂಖ್ಯೆ, ಶಾಲೆ, ಜಮೀನು, ಪಾಳುಬಿದ್ದ ಭೂಮಿ, ನೀರಿನ ಮೂಲಗಳು ಹೀಗೆ ಅನೇಕ ವಿಷಯಗಳಿಗೆ ಸಂಬಂಧಪಟ್ಟಂತೆ ನಕ್ಷೆ ರಚಿಸಬಹುದು ಎಂದರು.

ಬಳಿಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ ಈ ವರದಿ ಸಲ್ಲಿಸಿ, ಸರ್ಕಾರದ ಮಹತ್ವದ ಯೋಜನೆಗಳಾದ ಜಲಾಮೃತ, ಮಹತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ಜಲಶಕ್ತಿ ಅಭಿಯಾನ ಯೋಜನೆಯಡಿಯಲ್ಲಿ ಇವುಗಳನ್ನು ಪುನರುಜ್ಜೀವನ ಮಾಡಬದು ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿರುವ ಎನ್‍ಆರ್‌ಡಿಎಂಎಸ್ ಕಚೇರಿಯ ನೆರವಿನಿಂದ ಜಿಐಎಸ್ ತಂತ್ರಜ್ಞಾನದಿಂದ ನಕ್ಷೆ ಹಾಗೂ ವೈಜ್ಞಾನಿಕ ವರದಿಗಳನ್ನು ತಯಾರಿಸಿಕೊಳ್ಳಲು ಅವರು ಸೂಚಿಸಿದರು.

ಜಿಲ್ಲಾ ಯೋಜನಾ ವಿಭಾಗದ ನಿರ್ದೇಶಕ ಕೆ.ಗುರುರಾಜ ರಾವ್ ಮಾತನಾಡಿ, ‘ಎಲ್ಲಾ ಇಲಾಖೆಗಳು ತಮ್ಮಲ್ಲಿರುವ ದತ್ತಾಂಶ ಹಾಗೂ ಮಾಹಿತಿಗಳನ್ನು ನೈಸರ್ಗಿಕ ಸಂಪನ್ಮೂಲ ದತ್ತಾಂಶ ನಿರ್ವಹಣಾ ಕೇಂದ್ರದ ಮೂಲಕ ಜಿಯೊ ಸ್ಪೇಶಿಯಲ್ ತಂತ್ರಜ್ಞಾನ ಬಳಸಿ ನಕ್ಷೆ ತಯಾರಿಸಿ, ಕ್ರಿಯಾ ಯೋಜನೆಗಳನ್ನು ರೂಪಿಸಬೇಕು’ ಎಂದರು.

2019–20ನೇ ಸಾಲಿಗೆ ಆಯಾ ಇಲಾಖೆಗಳು ಕ್ರಿಯಾಯೋಜನೆಯ ಪ್ರಸ್ತಾವನೆಯ ಅಂಕಿ–ಅಂಶ ಹಾಗೂ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕು ಎಂದು ಹೇಳಿದರು.

ರಾಜ್ಯ ದೂರ ಸಂವೇದಿ ಕೇಂದ್ರದ ಹಿರಿಯ ಯೋಜನಾ ವಿಜ್ಞಾನಿ ಡಾ. ರಾಜಣ್ಣ ಮಾತನಾಡಿ, ಜಿಲ್ಲಾ ಮಟ್ಟದ ಯೋಜನೆಗಳನ್ನು ರೂಪಿಸುವಾಗ ಅಂಕಿ–ಅಂಶಗಳು ಮತ್ತು ದೂರ ಸಂವೇದಿ ಉಪಗ್ರಹಗಳ ಮಾಹಿತಿಯನ್ನು ಬಳಸಿಕೊಳ್ಳಲು ಅಧಿಕಾರಿಗಳಿಗೆ ಕರೆ ನೀಡಿದರು.

ಕಲಬುರ್ಗಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರವೀಣ್ ಪ್ರಿಯಾ ಡೇವಿಡ್ ಸ್ವಾಗತಿಸಿದರು. ಬೀದರ್ ಜಿ.ಪಂ. ಮುಖ್ಯ ಯೋಜನಾಧಿಕಾರಿ ಕಿಶೋರ್ ವಂದಿಸಿದರು.

ಕಲಬುರ್ಗಿ, ಯಾದಗಿರಿ, ಬೀದರ್ ಹಾಗೂ ಕೊಪ್ಪಳ ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.