ADVERTISEMENT

ಆರೋಗ್ಯ ಕರ್ನಾಟಕ ಸೇವೆ ಪಡೆಯಿರಿ: ಡಾ. ಎಂ.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 14:11 IST
Last Updated 13 ಅಕ್ಟೋಬರ್ 2018, 14:11 IST
ಡಾ. ಎಂ.ಕೆ.ಪಾಟೀಲ
ಡಾ. ಎಂ.ಕೆ.ಪಾಟೀಲ   

ಕಲಬುರ್ಗಿ: ‘ರಾಜ್ಯದ ಜನರ ಸಾರ್ವತ್ರಿಕ ಆರೋಗ್ಯ ರಕ್ಷಣೆಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆರೋಗ್ಯ ಕರ್ನಾಟಕ ಯೋಜನೆಯ ಲಾಭವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಕೆ.ಪಾಟೀಲ ಮನವಿ ಮಾಡಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಗ್ಯ ಸೇವೆಯ ಲಾಭ ಪಡೆದುಕೊಳ್ಳಲು ಹೆಲ್ತ್ ಕಾರ್ಡ್ (ಗುರುತಿನ ಚೀಟಿ) ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್‌)ಯಲ್ಲಿ ನೋಂದಣಿ ಕೇಂದ್ರ ತೆರೆಯಲಾಗಿದೆ. ಆಧಾರ್ ಕಾರ್ಡ್, ಪಡಿತರ ಚೀಟಿ (ಬಿಪಿಎಲ್/ಎಪಿಎಲ್) ಹಾಗೂ ₹10 ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ಇದಕ್ಕೆ ಅಂತಿಮ ದಿನಾಂಕ ನಿಗದಿ ಮಾಡಿಲ್ಲ. ಯಾರು, ಯಾವಾಗ ಬೇಕಾದರೂ ನೋಂದಣಿ ಮಾಡಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ತಾಲ್ಲೂಕು ಆಸ್ಪತ್ರೆಗಳಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ಎಲ್ಲ ಯೋಜನೆಗಳು ವಿಲೀನ: ಈ ಹಿಂದೆ ಅನುಷ್ಠಾನದಲ್ಲಿದ್ದ ಯಶಸ್ವಿನಿ ಯೋಜನೆ, ವಾಜಪೇಯಿ ಆರೋಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ ಮತ್ತು ಇಂದಿರಾ ಆರೋಗ್ಯ ಸುರಕ್ಷಾ ಯೋಜನೆಗಳು ‘ಆರೋಗ್ಯ ಕರ್ನಾಟಕ’ ಯೋಜನೆಯೊಂದಿಗೆ ವಿಲೀನಗೊಂಡಿವೆ.

ADVERTISEMENT

ಈ ಯೋಜನೆಗೆ ಹೇಗೆ ಭಿನ್ನ?: ಯಶಸ್ವಿನಿ ಯೋಜನೆಯು ಕೇವಲ ಸಹಕಾರ ಸಂಘಗಳ ಸದಸ್ಯರಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಆರೋಗ್ಯ ಕರ್ನಾಟಕ ಯೋಜನೆಯು ಸಹಕಾರ ಸಂಘಗಳ ಸದಸ್ಯರೂ ಸೇರಿದಂತೆ ರಾಜ್ಯದ ಎಲ್ಲ ನಿವಾಸಿಗಳಿಗೂ ಲಭ್ಯವಿದೆ. ಈ ಯೋಜನೆಯಡಿ 1,516 ರೋಗಗಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ.

ದೊಡ್ಡ ಕಾಯಿಲೆಗೆ ಚಿಕಿತ್ಸೆ ಹೇಗೆ?: ದ್ವಿತೀಯ ಮತ್ತು ತೃತೀಯ ಹಂತದ ಕಾಯಿಲೆಗಳು ಕಾಣಿಸಿಕೊಂಡಾಗ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‌ನೊಂದಿಗೆ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬಹುದು. ಅಗತ್ಯವಿದ್ದಲ್ಲಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ರೋಗಿ ಬಯಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ. ಈ ಯೋಜನೆಯಡಿ ನಿಗದಿಪಡಿಸಿದಷ್ಟು ವೆಚ್ಚವನ್ನು ಸರ್ಕಾರ ಭರಿಸುತ್ತದೆ.

ಯಾವ ಚಿಕಿತ್ಸೆಗೆ, ಎಷ್ಟು ಮೊತ್ತ?: ಐದು ಸದಸ್ಯರ ಒಂದು ಕುಟುಂಬಕ್ಕೆ ದ್ವಿತೀಯ ಹಂತದ ಚಿಕಿತ್ಸೆಗಾಗಿ ವಾರ್ಷಿಕ ₹30 ಸಾವಿರ, ತೃತೀಯ ಹಂತದ ಚಿಕಿತ್ಸೆಗೆ ವಾರ್ಷಿಕ ₹1.50 ಲಕ್ಷ ಹಾಗೂ ಸಾಮಾನ್ಯ ರೋಗಿಗಳಿಗೆ (ಎಪಿಎಲ್‌) ಪ್ಯಾಕೇಜ್ ಮೊತ್ತದ ಶೇ 30ರಷ್ಟನ್ನು ಸರ್ಕಾರ ಭರಿಸುತ್ತದೆ.

ಚಿಕಿತ್ಸೆಗಳ ಮಾಹಿತಿ ಎಲ್ಲಿ ಲಭ್ಯ?: ಯಾವ ಆಸ್ಪತ್ರೆಗಳಲ್ಲಿ ಯಾವ ಚಿಕಿತ್ಸೆಗಳು ಲಭ್ಯ ಇವೆ ಎಂಬ ಮಾಹಿತಿಯನ್ನು www.arogya.karnataka.gov.in, www.sast.gov.in/home, www.karnataka.gov.in/hfw ವೆಬ್‌ಸೈಟ್‌ಗಳಿಂದ ಪಡೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.