
ಕಲಬುರಗಿ: ‘ಜಿಐ ಟ್ಯಾಗ್‌ನಡಿ (ಭೌಗೋಳಿಕ ಸೂಚ್ಯಂಕ) ನೋಂದಾಯಿಸಿದ ರೈತರು ಹಾಗೂ ರೈತರ ಉತ್ಪಾದಕ ಸಂಸ್ಥೆಗಳಿಂದ (ಎಫ್‌ಪಿಒ) 2024–25ನೇ ಸಾಲಿನ ತೊಗರಿಯನ್ನು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಕೂಡಲೇ ಖರೀದಿಸಬೇಕು. ಒಂದು ತಿಂಗಳಲ್ಲಿ ಖರೀದಿಸದಿದ್ದರೆ ಮಂಡಳಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಗುಂಡಗುರ್ತಿಯ ಜಿ.ಐ.ಟ್ಯಾಗ್ ರೈತರ ಉತ್ಪಾದಕರ ಕಂಪನಿ ಅಧ್ಯಕ್ಷ ಬಸವರಾಜ ಇಂಗಿನ ಎಚ್ಚರಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿ.ಐ ತೊಗರಿಯನ್ನು ಕನಿಷ್ಠ ಬೆಂಬಲ ಬೆಲೆಯ ಜೊತೆಗೆ ಪ್ರೋತ್ಸಾಹಧನವಾಗಿ ₹450 ಹೆಚ್ಚುವರಿಯಾಗಿ ಕೊಟ್ಟು ಖರೀದಿಸಲು 2025ರ ಮಾರ್ಚ್ 27ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಬಳಿಕ ಜಿಲ್ಲಾಧಿಕಾರಿ ಅವರು ಜುಲೈ 28ರಂದು ಸಭೆ ನಡೆಸಿ ಜಿ.ಐ ಟ್ಯಾಗ್ ನೋಂದಾಯಿತ ರೈತರು ಹಾಗೂ ಎಫ್‌ಪಿಒಗಳಿಂದ ತೊಗರಿ ಖರೀದಿಗೆ ಸೂಚಿಸಿದ್ದರು. ಆದರೆ, ಈ ತನಕ ಮಂಡಳಿಯು ತೊಗರಿ ಖರೀದಿಸಿಲ್ಲ’ ಎಂದು ದೂರಿದರು.
‘ದ್ವಿದಳ ಧಾನ್ಯ ಮಂಡಳಿ ಮಂಡಳಿಯನ್ನು ನೆಚ್ಚಿಕೊಂಡು ಜಿ.ಐ ಟ್ಯಾಗ್ ಹೊಂದಿರುವ ರೈತರು ಹಾಗೂ ಎಫ್‌ಒಪಿಗಳು 2,500 ಕ್ವಿಂಟಲ್‌ಗಳಷ್ಟು ಜಿ.ಐ ಟ್ಯಾಗ್ ತೊಗರಿ ದಾಸ್ತಾನಿಟ್ಟುಕೊಂಡು ಕಾಯುತ್ತಿವೆ. ಆದರೆ, ಮಂಡಳಿಯ ಈಗಿನ ವ್ಯವಸ್ಥಾಪಕ ನಿರ್ದೇಶಕರು ಡಿಸೆಂಬರ್‌ನಲ್ಲಿ ತೊಗರಿ ಖರೀದಿಸುವುದಾಗಿ ಹೇಳುತ್ತಿದ್ದಾರೆ. ಸದ್ಯ ಮಳೆ ಸುರಿಯುತ್ತಿದ್ದು, ರೈತರ ಬಳಿಯಿರುವ ತೊಗರಿ ತೇವಾಂಶದಿಂದ ಹುಳು ಬಾಧೆಗೆ ತುತ್ತಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಚಂದ್ರಶೇಖರ ಹರಸೂರ, ರಾಜೇಂದ್ರ ಕರೆಕಲ್, ಓಂಪ್ರಕಾಶ, ಬಸವರಾಜ ಇಂಗಿನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.