ADVERTISEMENT

ಕಲುಷಿತ ನೀರು ಸೇವನೆ ಪ್ರಕರಣ: ಮೃತ ಬಾಲಕಿ ಸಾವಿಗೆ ನ್ಯಾಯ ಒದಗಿಸಲು ಆಗ್ರಹ

ಸೇಡಂ ತಾಲ್ಲೂಕಿನ ಹುಡಾ(ಬಿ) ಗ್ರಾಮದಲ್ಲಿ ಕಲುಷಿತ ನೀರು ಸೇವನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 14:09 IST
Last Updated 13 ನವೆಂಬರ್ 2024, 14:09 IST
ಶೇರ್‌ ಅಲಿ
ಶೇರ್‌ ಅಲಿ   

ಕಲಬುರಗಿ: ‘ಜಿಲ್ಲೆಯ ಸೇಡಂ ತಾಲ್ಲೂಕಿನ ಹುಡಾ(ಬಿ) ಗ್ರಾಮದಲ್ಲಿ ಅ.28ರಂದು ಕಲುಷಿತ ನೀರು ಸೇವಿಸಿ ಐದು ವರ್ಷದ ಬಾಲಕಿ ಮಮತಾ ಸುಭಾಷ್‌ ಮೃತಪಟ್ಟಿದ್ದು, ಕುಟುಂಬಕ್ಕೆ ನ್ಯಾಯ ಒದಗಿಸಬೇಕು’ ಎಂದು ಜನತಾ ಪರಿವಾರ ಸಂಘಟನೆಯ ಕಿಸಾನ್‌ ವಿಂಗ್‌ ಜಿಲ್ಲಾಧ್ಯಕ್ಷ ಶೇರ್‌ ಅಲಿ ಒತ್ತಾಯಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಳಖೇಡನ ಅಲ್ಟ್ರಾಟೆಕ್ ಸಿಮೆಂಟ್ ಸ್ಥಾವರದಿಂದ ನದಿಗೆ ಎಸೆದ ಕೈಗಾರಿಕಾ ತ್ಯಾಜ್ಯದಿಂದ ಕಲುಷಿತಗೊಂಡ ನೀರನ್ನು ಸೇವಿಸಿದ ಕಾರಣ ಹುಡಾ(ಬಿ) ಗ್ರಾಮದ 200ಕ್ಕೂ ಹೆಚ್ಚು ನಿವಾಸಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ಈಗಲೂ ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ವೃದ್ಧೆ ಕೂಡ ಇದೇ ಕಾರಣಕ್ಕೆ ಮೃತಪಟ್ಟಿದ್ದಾರೆ’ ಎಂದು ದೂರಿದರು.

‘ಆರೋಗ್ಯ ಇಲಾಖೆ ಗ್ರಾಮದ ವಿವಿಧ ಮೂಲಗಳಿಂದ 12 ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದು, ಇವುಗಳಲ್ಲಿ ಐದು ಮೂಲಗಳು ಮಾನವ ಬಳಕೆಗೆ ಯೋಗ್ಯವಲ್ಲ ಎಂದು ತಿಳಿದುಬಂದಿದೆ. ಸಿಮೆಂಟ್‌ ಕಂಪನಿಯಿಂದ ವಾಯುಮಾಲಿನ್ಯ, ಜಲಮಾಲಿನ್ಯ ಉಂಟಾಗಿದ್ದು, ಗ್ರಾಮಸ್ಥರೆಲ್ಲರೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರ ಜಮೀನುಗಳ ಮಣ್ಣು ಹಾಳಾಗಿದ್ದು, ಕೃಷಿ ಮಾಡಲು ಆಗುತ್ತಿಲ್ಲ’ ಎಂದರು.

ADVERTISEMENT

ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಸಿರಾಜ್‌ ಶಾಬ್ದಿ ಮಾತನಾಡಿ, ‘ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಮೃತ ಬಾಲಕಿ ಕುಟುಂಬಕ್ಕೆ ಕೇವಲ ₹50 ಸಾವಿರ ನೀಡಿ ಕೈತೊಳೆದುಕೊಂಡಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ಸಮಸ್ಯೆಗಳ ಕುರಿತು ಮಾನವ ಹಕ್ಕುಗಳ ಆಯೋಗಕ್ಕೆ ನ.4ರಂದು ದೂರು ಸಲ್ಲಿಸಲಾಗಿದೆ. ಇದು ಕೇವಲ ಒಂದು ಗ್ರಾಮದ ಸಮಸ್ಯೆಯಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸಿಮೆಂಟ್‌ ಕಂಪನಿ ಸುತ್ತಲಿನ ಗ್ರಾಮಗಳಲ್ಲಿ ಆದಷ್ಟು ಬೇಗ ತನಿಖೆ ನಡೆಸಬೇಕು. ಸಾರ್ವಜನಿಕರು ಆರೋಗ್ಯಯುತ ಜೀವನ ನಡೆಸಲು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಪ್ರಮುಖರಾದ ಖಾಲಿದ್‌ ಅಬ್ರಾರ್, ಅಜರ್‌ ಮುಬಾರಕ್‌, ಸೈಯದ್‌ ಮುಬಿನ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.